ಬಿಜೆಪಿ ಹಣಿಯಲು ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಅಧಿಕಾರಕ್ಕಾಗಿ ರಣತಂತ್ರ

7
ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ವಿಲೀನದಿಂದ ಬಲಿಷ್ಠಗೊಂಡಿರುವ ಬಿಜೆಪಿ

ಬಿಜೆಪಿ ಹಣಿಯಲು ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಅಧಿಕಾರಕ್ಕಾಗಿ ರಣತಂತ್ರ

Published:
Updated:
Deccan Herald

ಯಾದಗಿರಿ: ಮೈತ್ರಿ ಮಾಡಿಕೊಂಡು ಇಲ್ಲಿನ ನಗರಸಭೆ ಆಳ್ವಿಕೆ ನಡೆಸಿದ್ದ ಜೆಡಿಎಸ್–ಕೆಜೆಪಿ – ಬಿಎಸ್‌ಆರ್ ಕಾಂಗ್ರೆಸ್‌ ಪಕ್ಷಗಳಲ್ಲಿ ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್‌ ಬಿಜೆಪಿಯಲ್ಲಿ ವಿಲೀನಗೊಂಡಿದ್ದು, ನಗರಸಭೆ ಸ್ಥಳೀಯ ಚುನಾವಣೆಗೆ ಬಿಜೆಪಿ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. ಈ ಬಲಿಷ್ಠ ಪಕ್ಷವನ್ನು ಹಣಿಯಲು ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದು ಗಲ್ಲಿ ಗಲ್ಲಿಗಳಲ್ಲಿ ರಣತಂತ್ರ ರೂಪಿಸುತ್ತಿವೆ.

ಮೈತ್ರಿ ಪಕ್ಷಗಳನ್ನು ಕಟ್ಟಿಹಾಕಿ ಸ್ಥಳೀಯ ಸಂಸ್ಥೆಯ ಅಧಿಕಾರ ಹಿಡಿಯುವ ಬಹುದಿನಗಳ ಕನಸನ್ನು ಸಾಕಾರಗೊಳಿಸಿಕೊಳ್ಳಲು ಬಿಜೆಪಿ ಕೂಡ ರಾಜಕೀಯ ತಂತ್ರಗಾರಿಕೆಯ ಮೊರೆ ಹೋಗಿದೆ. ಮೂರು ಪಕ್ಷಗಳಲ್ಲಿ ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಚುರುಕುಗೊಂಡಿದ್ದು, ಅಭ್ಯರ್ಥಿ ಆಯ್ಕೆ ಈ ವಾರಾಂತ್ಯದಲ್ಲಿ ಅಂತಿಮಗೊಳ್ಳುವ ಸಾಧ್ಯತೆ ಇದೆ.

2013ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ನಗರಸಭೆಯಲ್ಲಿ 11 ಸದಸ್ಯಬಲ ಹೊಂದಿದ್ದ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಹುಮತ ಇಲ್ಲದ ಪರಿಣಾಮ 8 ಸದಸ್ಯರನ್ನು ಹೊಂದಿದ್ದ ಜೆಡಿಎಸ್‌ ಮತ್ತು 4 ಜನರನ್ನು ಹೊಂದಿದ್ದ ಬಿಎಸ್‌ಆರ್ ಜತೆ ಹೊಂದಾಣಿಕೆ ಮಾಡಿಕೊಂಡಿತ್ತು. ಜೆಡಿಎಸ್‌ನಿಂದ ಮಹಮ್ಮದ್‌ ಇಸಾಕ್, ಕೆಜೆಪಿಯಿಂದ ಸುರೇಶ್‌ ಕೋಟಿಮನಿ, ಕಾಂಗ್ರೆಸ್‌ನಿಂದ ಶಶಿಧರ್ ಹೊಸಳ್ಳಿ, ಬಿಎಸ್‌ಆರ್ ಕಾಂಗ್ರೆಸ್‌ ನಿಂದ ಲಲಿತಾ ಅನಪುರ ಅಧಿಕಾರ ಅನುಭವಿಸಿದ್ದಾರೆ.

31ವಾರ್ಡ್‌ಗಳಲ್ಲಿ ಒಬ್ಬರು ಪಕ್ಷೇತರರು ಗೆದ್ದಿದ್ದರು. ಕಾಂಗ್ರೆಸ್ 11, ಜೆಡಿಎಸ್‌ 8, ಬಿಎಸ್‌ಆರ್‌ ಕಾಂಗ್ರೆಸ್‌ 4, ಕೆಜೆಪಿ 6, ಬಿಜೆಪಿ 1 ಸ್ಥಾನಗಳನ್ನು ಪಡೆದಿದ್ದವು. ಸ್ಪಷ್ಟ ಬಹುಮತ ಯಾವ ಪಕ್ಷಕ್ಕೂ ಸಿಗದ ಪರಿಣಾಮ ಅಧಿಕಾರ ಹಂಚಿಕೆ ಮಾಡಿಕೊಂಡು ಮೈತ್ರಿ ಮಾಡಿಕೊಂಡಿದ್ದವು. ಮೂರು ಪಕ್ಷಗಳಾಗಿ ಕವಲೊಡೆದಿದ್ದ ಪರಿಣಾಮ ಬಿಜೆಪಿ ಒಂದು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಬಿಎಸ್‌ಆರ್‌ ಕಾಂಗ್ರೆಸ್‌, ಕೆಜೆಪಿ ವಿಲೀನಗೊಂಡಿರುವುದರಿಂದ ಈಗ ಬಿಜೆಪಿಯ ಶಕ್ತಿ ವೃದ್ಧಿಸಿದೆ.

ಟಿಕೆಟ್‌ಗೆ ಪೈಪೋಟಿ:
ಆಗಸ್ಟ್‌10ರಂದು ಅಧಿಸೂಚನೆ ಪ್ರಕಟವಾದರೂ ಇಲ್ಲಿಯವರೆಗೆ ರಾಜಕೀಯ ಪಕ್ಷಗಳು ‘ಬಿ’ ಫಾರಂ ವಿತರಿಸಿಲ್ಲ. ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ಮೂರು ಪಕ್ಷಗಳು ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು, ಬಿಜೆಪಿಯಲ್ಲಿ 65, ಜೆಡಿಎಸ್‌ನಲ್ಲಿ 80, ಕಾಂಗ್ರೆಸ್‌ನಲ್ಲಿ 70ಕ್ಕೂ ಹೆಚ್ಚು ಮಂದಿ ಟಿಕೆಟ್‌ ನೀಡಲು ಬೇಡಿಕೆ ಇಟ್ಟಿದ್ದಾರೆ ಎಂದು ವಿವಿಧ ಪಕ್ಷಗಳ ಮುಖಂಡರು ಹೇಳುತ್ತಾರೆ.

ಮೀಸಲಾತಿ ಬದಲಾವಣೆಯಿಂದ ಕೈತಪ್ಪುತ್ತಿರುವ ಸ್ಥಾನವನ್ನು ಉಳಿಸಿಕೊಳ್ಳಲು ಕೆಲವರು ಭಾರಿ ಲಾಬಿ ನಡೆಸುತ್ತಿದ್ದಾರೆ. ಮಹಿಳೆಯರಿಗೆ ಮೀಸಲಾದ ಕ್ಷೇತ್ರಗಳಿಗೆ ಪತ್ನಿ, ಪುತ್ರಿ ಹಾಗೂ ಸಂಬಂಧಿಕರನ್ನು ತರುವ ಪ್ರಯತ್ನಗಳನ್ನೂ ಕೆಲವರು ಮಾಡುತ್ತಿದ್ದಾರೆ.

ಗೆಲ್ಲುವವರಿಗಾಗಿ ಹುಡುಕಾಟ:
ಟಿಕೆಟ್‌ ಆಕಾಂಕ್ಷಿಗಳಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸವಾಲು ಮೂರು ಪಕ್ಷಗಳಿಗೂ ಎದುರಾಗಿದೆ. ಜಾತಿ ಆಧಾರಿತ ಲೆಕ್ಕಾಚಾರಗಳು ಪಕ್ಷಗಳಲ್ಲಿ ಜೋರಾಗಿ ನಡೆಯುತ್ತಿವೆ. ಟಿಕೆಟ್‌ ಕೇಳಿ ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳ ಮನೆಗೆ ಭೇಟಿ ನೀಡಿ ತೀರ್ಮಾನಿಸಲು ಕಾಂಗ್ರೆಸ್‌ ಮುಂದಾಗಿದೆ. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲ್‌ಕಲ್‌ ನೇತೃತ್ವದ ಸಮಿತಿ ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕುತ್ತಿದೆ. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ನಾಗನಗೌಡ ಕಂದಕೂರ ಆಯ್ಕೆ ಸಮಿತಿ ರಚನೆಯಾಗಿದೆ. ಬಿಜೆಪಿ ಆಗಸ್ಟ್ 16ರಂದು ಟಿಕೆಟ್ ಆಕಾಂಕ್ಷಿಗಳ ಮತ್ತು ಅರ್ಜಿ ಪಡೆದವರ ಕುರಿತು ವಿಶೇಷ ಸಭೆ, ಚರ್ಚೆ ನಡೆಸಲಿದೆ ಎಂದು ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಎಲ್ಲ ವಾರ್ಡ್‌ಗಳಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಪ್ರತ್ಯೇಕವಾಗಿ ಕಣಕ್ಕೆ ಇಳಿಯಲಿದ್ದಾರೆ. ಮೈತ್ರಿ ತತ್ವಕ್ಕೆ ಧಕ್ಕೆ ಉಂಟಾಗದಂತೆ ಚುನಾವಣೆ ಎದುರಿಸುವುದು ಎರಡೂ ಪಕ್ಷಗಳಿಗೆ ಸವಾಲಾಗಿ ಪರಿಣಮಿಸಿದೆ. ಕಾಂಗ್ರೆಸ್‌–ಜೆಡಿಎಸ್‌ ವಿರುದ್ಧ ಸೆಣೆಸಲು ಬಿಜೆಪಿಯೂ ಮೈಕೊಡವಿ ನಿಂತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !