ಮಹಿಳಾ ಹುರಿಯಾಳುಗಳಿಗೆ ಹೆಚ್ಚಿದ ಬೇಡಿಕೆ

7
ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ನಿಗದಿ

ಮಹಿಳಾ ಹುರಿಯಾಳುಗಳಿಗೆ ಹೆಚ್ಚಿದ ಬೇಡಿಕೆ

Published:
Updated:
Deccan Herald

ಯಾದಗಿರಿ: ಚುನಾವಣಾ ಆಯೋಗ ಈ ಬಾರಿ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಿದ್ದು, ಪಕ್ಷಗಳು ಮಹಿಳಾ ಹುರಿಯಾಳುಗಳ ಆಯ್ಕೆಗೆ ಕಸರತ್ತು ನಡೆಸಿವೆ.

ಆಗಸ್ಟ್ 18ರಂದು ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಮೂರು ಪಕ್ಷಗಳ ಆಯ್ಕೆ ಸಮಿತಿಗಳಿಗೆ ಗುರುಮಠಕಲ್‌ ಮತ್ತು ಸುರಪುರದಲ್ಲಿ ಸಮರ್ಥ ಮಹಿಳಾ ಅಭ್ಯರ್ಥಿಗಳ ಆಯ್ಕೆ ಸವಾಲಾಗಿದೆ. ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಇರುವಾಗಲೂ ಅಭ್ಯರ್ಥಿಗಳ ಆಯ್ಕೆ ಅಂತಿಮ ಸ್ವರೂಪ ಪಡೆದುಕೊಂಡಿಲ್ಲ.

ಮೀಸಲಾತಿ ಅನ್ವಯ ನಗರಸಭೆಯ 31 ವಾರ್ಡ್‌ಗಳ ಪೈಕಿ 15 ಸ್ಥಾನಗಳು ಮಹಿಳೆಯರಿಗೆ ದಕ್ಕಿವೆ. ಈ ಮೊದಲು ಶೇ 33ರಷ್ಟಿದ್ದ ಮೀಸಲಾತಿ ಪ್ರಮಾಣವನ್ನು ಶೇ 50ಕ್ಕೆ ಏರಿಕೆ ಮಾಡಿದ್ದರಿಂದ ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳು ನಿಗದಿಯಾಗಿವೆ. ಇದರಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಮಹಿಳಾ ಕಾರ್ಯಕರ್ತರು, ಮುಖಂಡರಿಗೆ ಬೇಡಿಕೆಗೆ ಹೆಚ್ಚಾಗಿದೆ. ಮೂರು ಪಕ್ಷಗಳಿಗೆ ಸ್ಥಳೀಯ ಆಡಳಿತ ಅಧಿಕಾರ ಹಿಡಿಯುವುದು ಪ್ರತಿಷ್ಠೆಯಾಗಿರುವುದರಿಂದ ಗೆಲ್ಲುವಂತಹ ಸಮರ್ಥ ಮಹಿಳಾ ಅಭ್ಯರ್ಥಿಗಳಿಗಾಗಿಯೇ ಹುಡುಕಾಟ ನಡೆಸಲು ಆಯ್ಕೆ ಸಮಿತಿಗಳು ಹೆಣಗುತ್ತಿವೆ.

ಎನ್‌ಸಿಪಿ, ಬಿಎಸ್‌ಪಿಯಂತಹ ಪಕ್ಷಗಳು ‘ಬಿ’ ಫಾರಂ ನೀಡಲು ಸಿದ್ಧ ಇದ್ದರೂ, ಮಹಿಳೆಯರು ಚುನಾವಣಾ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ. ಗುರುಮಠಕಲ್‌ ಮತ್ತು ಸುರಪುರದಲ್ಲಿ ಮಹಿಳಾ ಹುರಿಯಾಳುಗಳೇ ಸಿಗುತ್ತಿಲ್ಲ. ರಾಜಕೀಯ ಪ್ರಭಾವ ಇರುವ ಕುಟುಂಬಗಳ ಮಹಿಳೆಯರನ್ನೇ ಅನಿವಾರ್ಯವಾಗಿ ರಾಜಕೀಯಕ್ಕೆ ಎಳೆದು ತರುವಂತಹ ಕೆಲಸ ನಡೆಯುತ್ತಿದೆ.

‘ಮುಂದುವರಿದ ಜಿಲ್ಲೆಗಳಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡಲು ಕೆಲವೊಂದು ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ಆದರೂ, ಅಲ್ಲಿ ಮಹಿಳೆಯರು ಟಿಕೆಟ್ ಪಡೆಯಲು ಪೈಪೋಟಿ ನಡೆಸಿದ್ದಾರೆ. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಯಾವ ಮಾನದಂಡ, ಷರತ್ತು ಇಲ್ಲದೇ ಕೇವಲ ಪಕ್ಷಗಳ ಪ್ರತಿನಿಧಿಯಾಗಿ ಸ್ಪರ್ಧಿಸಿದರೆ ಸಾಕು ಎಂಬಂತಹ ಪರಿಸ್ಥಿತಿ ಇದೆ. ಕೆಲವೊಂದು ವಾರ್ಡುಗಳಲ್ಲಿ ಪ್ರಭಾವಿ ಕುಟುಂಬದ ಮಹಿಳೆಯರ ವಿರುದ್ಧ ಪ್ರಭಾವಿ ಮಹಿಳೆಯರನ್ನೇ ಕಣಕ್ಕೆ ಇಳಿಸಬೇಕಾಗುತ್ತದೆ. ಅಂತಹ ಕಡೆಗಳಲ್ಲಿ ಸಾಮಾನ್ಯ ಮಹಿಳೆಯರೂ ಸ್ಪರ್ಧೆಗೆ ಮುಂದೆ ಬರುತ್ತಿಲ್ಲ’ ಎಂದು ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸುರೇಶ್‌ ಜೈನ್ ಹೇಳುತ್ತಾರೆ.

‘ಕೆಲವೊಂದು ಮಾರ್ಪಾಟುಗಳನ್ನು ನಾವೇ ಮಾಡಿಕೊಂಡಿದ್ದೇವೆ. ಮಹಿಳೆಯರು ಸಿಗದ ಕಡೆ ಈ ಹಿಂದೆ ಇದ್ದ ಮಾಜಿ ಸದಸ್ಯರ ಪತ್ನಿ, ತಾಯಿ, ಅಕ್ಕ, ತಂಗಿಯರನ್ನೇ ಚುನಾವಣಾ ಕಣಕ್ಕೆ ಇಳಿಸುತ್ತಿದ್ದೇವೆ. ಇದು ನಮಗೆ ಅನಿವಾರ್ಯ’ ಎನ್ನುತ್ತಾರೆ ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ನಾಗನಗೌಡ ಕಂದಕೂರ.

‘ಮಹಿಳೆಯರು ಶೈಕ್ಷಣಿಕವಾಗಿ ಪ್ರಗತಿ ಕಾಣದೇ ಇರುವುದು ಇಂದು ಇಂತಹ ಸಮಸ್ಯೆಗಳಿಗೆ ಕಾರಣವಾಗಿದೆ. ಆಡಳಿತಾತ್ಮಕ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಪರಿಹರಿಸುವ ಸಾಮರ್ಥ ಮಹಿಳೆಯರಿಗೆ ಇರುವುದಿಲ್ಲ. ಈ ಮುಂಚೆ ಅದೇ ಸ್ಥಾನವನ್ನು ನಿರ್ವಹಿಸಿದ ಪತಿ ಪತ್ನಿಯ ನೆರವಿಗೆ ಬರುವಂತಾಗುತ್ತದೆ. ಆಗ ಆ ಮಹಿಳೆ ದಿನಕಳೆದಂತೆ ನಗರಸಭೆ ಆಡಳಿತದಲ್ಲಿ ಸುಶಿಕ್ಷಿತಳಾಗುತ್ತಾ ಹೋಗುತ್ತಾಳೆ. ಈ ಕಾರಣಕ್ಕಾಗಿಯೇ ಮಾಜಿ ಸದಸ್ಯರ ಕುಟುಂಬದ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ’ ಎನ್ನುತ್ತಾರೆ ಅವರು.

ಈಗಾಗಲೇ ಬಿಜೆಪಿ ಯಾದಗಿರಿಯಲ್ಲಿ ಒಂದು ಸ್ಥಾನ ಮಹಿಳೆಯರಿಗೆ ಹೆಚ್ಚೇ ಸ್ಥಾನ ನೀಡಿದೆ. ಒಟ್ಟು 31 ವಾರ್ಡುಗಳಲ್ಲಿ 17 ಮಂದಿ ಮಹಿಳೆಯರಿಗೆ ‘ಬಿ’ ಫಾರಂ ನೀಡಿದೆ. ಜೆಡಿಎಸ್ ಭಾರೀ ಕಸರತ್ತು ನಡೆಸಿ ಗುರುಮಠಕಲ್‌ನಲ್ಲಿ 10 ಮಂದಿ, ಸುರಪುರದಲ್ಲಿ 8 ಮಂದಿಯನ್ನು ಆಯ್ಕೆ ಮಾಡಿದೆ. ಕಾಂಗ್ರೆಸ್ ಯಾದಗಿರಿಯಲ್ಲಿ 13 ಮಂದಿ ಮಹಿಳೆಯರನ್ನು ಕಣಕ್ಕೆ ಇಳಿಸುತ್ತಿದೆ.

ಕೆಲವೊಂದು ರಾಜಕೀಯ ಯುಕ್ತಿ ಇದ್ದು, ಪ್ರಭಾವಿ ಎನಿಸಿರುವ ಲಲಿತಾ ಅನಪುರ, ನಾಗರತ್ನಾ ಅಲಿಪುರ ಅವರಂತಹವರಿಗೂ ಸಾಮಾನ್ಯ ವಾರ್ಡುಗಳಲ್ಲಿ ಸ್ಪರ್ಧೆಗೆ ಪಕ್ಷಗಳು ಅವಕಾಶ ಕಲ್ಪಿಸಿವೆ. ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸಿಕ್ಕ ಸಮಾನತೆ ಈಗ ನಗರ, ಸ್ಥಳೀಯ ಸಂಸ್ಥೆಗಳಲ್ಲಿಯೂ ದೊರಕುತ್ತಿದೆ.

****
ಅರ್ಧದಷ್ಟು ಮೀಸಲಾತಿ ನಿಗದಿಪಡಿಸಿರುವುದರಿಂದ ಸಂತಸವಾಗಿದೆ. ಮಹಿಳೆಯರು ಆಡಳಿತಾತ್ಮಕವಾಗಿ ಸುಶಿಕ್ಷಿತರಾಗಲು ಚುನಾವಣಾ ಆಯೋಗ ವಿಶೇಷ ತರಬೇತಿಯನ್ನು ಸ್ಥಳೀಯವಾಗಿಯೇ ಕಾರ್ಯಾಗಾರದ ರೂಪದಲ್ಲಿ ನೀಡಬೇಕಿದೆ. 
- ಲಲಿತಾ ಅನಪುರ , ಯಾದಗಿರಿ ನಗರಸಭೆ ಅಧ್ಯಕ್ಷೆ

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಸಂಖ್ಯೆ ವೃದ್ಧಿಸಲಿದೆ. ಈ ಮೊದಲು ಪುರುಷರ ಸಂಖ್ಯೆ ಹೆಚ್ಚಿದ್ದರಿಂದ ಮಹಿಳಾ ದನಿ ಕೇಳಿಸುತ್ತಿರಲಿಲ್ಲ. ಈಗ ಮಹಿಳೆಯರು ಸ್ಥಳೀಯ ಸಂಸ್ಥೆಗಳಲ್ಲಿ ಸದೃಢ ಆಡಳಿತ ನಡೆಸಲಿದ್ದಾರೆ.
ಕಲ್ಪನಾ ಗುರಸಣಗಿ, ಸಾಮಾಜಿಕ ಹೋರಾಟಗಾರ್ತಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !