ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

540 ವಸತಿ ಶಾಲೆಗಳಲ್ಲಿ ಕಾಲೇಜು ಶಿಕ್ಷಣ: ಸಚಿವ ಕೋಟ

ಡಾ.ಅಂಬೇಡ್ಕರ್ ವಸತಿ ಶಾಲೆ ನೂತನ ಕಟ್ಟಡ ಉದ್ಘಾಟನೆ; ಸಚಿವ ಪೂಜಾರಿ ಹೇಳಿಕೆ
Last Updated 7 ಫೆಬ್ರುವರಿ 2023, 16:37 IST
ಅಕ್ಷರ ಗಾತ್ರ

ಯಾದಗಿರಿ/ಕೆಂಭಾವಿ: ಪ್ರಸ್ತುತ 10ನೇ ತರಗತಿವರೆಗೆ ವಸತಿ ಸೌಲಭ್ಯವಿದ್ದು, ರಾಜ್ಯದಲ್ಲಿ ಈ ಬಾರಿ 540 ವಸತಿ ಶಾಲೆಗಳಲ್ಲಿ ಕಾಲೇಜು ಶಿಕ್ಷಣವನ್ನು ಪ್ರಾರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಹುಣಸಗಿ ತಾಲ್ಲೂಕಿನ ಮುದನೂರ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಸುಮಾರು ₹24 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಡಾ.ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಮೊಟ್ಟಮೊದಲ ಬಾರಿಗೆ ವಸತಿ ಶಾಲೆಗಳಲ್ಲಿ ಸ್ಥಳೀಯ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಮತ್ತು ಸುರಪುರ ಕ್ಷೇತ್ರಕ್ಕೆ ಎರಡು ವಸತಿ ಶಾಲೆಗಳನ್ನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಒಟ್ಟು 830 ವಸತಿ ಶಾಲೆಗಳಿದ್ದು, ಇಲ್ಲಿ ಕಲಿಯುವ ಮಕ್ಕಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳ ಮಕ್ಕಳಾಗಿದ್ದಾರೆ. ಈ ಬಾರಿ ಹತ್ತನೆ ತರಗತಿಯಲ್ಲಿ ಶೇ 99 ರಷ್ಟು ಸಾಧನೆ ಮಾಡಿರುವ ಸರ್ಕಾರದ ಇಂಥ ವಸತಿ ಶಾಲೆಗಳು ಖಾಸಗಿ ಶಾಲೆಗಳಿಗೆ ಏನೂ ಕಮ್ಮಿ ಇಲ್ಲವೆಂಬುದನ್ನು ಸಾಬೀತುಪಡಿಸಿದೆ. ಹೆಣ್ಣುಮಕ್ಕಳ ಸ್ವಯಂ ರಕ್ಷಣೆಗೆ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸುವ ಹೊಸ ಯೋಜನೆಯನ್ನು ರೂಪಿಸಿದ್ದು, ಅದಕ್ಕೆ ವರ್ಷಕ್ಕೆ ₹18 ಕೋಟಿ ಮೀಸಲೀಡಲಾಗಿದೆ ಎಂದು ಹೇಳಿದರು.

ಅಂಬೇಡ್ಕರ್‌ ಅವರು ತಮ್ಮ ಜೀವನದುದ್ದಕ್ಕೂ ಕಷ್ಟ ಪಟ್ಟು ಶಿಕ್ಷಣ ಕಲಿತ ಡಾ. ಅಂಬೇಡ್ಕರ್ ಅವರು ಇಡೀ ವಿಶ್ವವೇ ಮೆಚ್ಚುವಂಥ ಸಂವಿಧಾನವನ್ನು ನಮ್ಮ ಭಾರತ ದೇಶಕ್ಕೆ ನೀಡಿದ್ದಾರೆ. ಅವರ ಕೆಲಸದಲ್ಲಿ ಇದ್ದ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು. ಅಂಬೇಡ್ಕರ್ ಅವರ ಕನಸು ನನಸಾಗಬೇಕಾದರೆ ಸಮಾಜದ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು. ಶಿಕ್ಷಣ ಅಭಿವೃದ್ಧಿಯ ಶಕ್ತಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ರಾಜೂಗೌಡ, ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ವಸತಿ ಶಾಲೆಗಳನ್ನು ನಿರ್ಮಾಣ ಮಾಡುವಂತೆ ಮನವಿ ಅವರು ಮಾಡಿದರು.

ಇದಕ್ಕೂ ಮೊದಲು ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾದ ವಸತಿ ಶಾಲೆಯ ವಿವಿಧ ಕಟ್ಟಡಗಳನ್ನು ರಿಬ್ಬನ್ ಕತ್ತರಿಸುವ ಮೂಲಕ ಸಚಿವರು ಹಾಗೂ ಶಾಸಕರು ಲೋಕಾರ್ಪಣೆಗೊಳಿಸಿದರು. ಅಮರಯ್ಯ ಸ್ವಾಮಿ ಜಾಲಿಬಂಚಿ ನಿರೂಪಿಸಿದರು. ಸಮಾಜ ಕಲ್ಯಾಣ ಉಪ ನಿರ್ದೇಶಕ ಎಸ್. ಎಸ್. ಚನ್ನಬಸಪ್ಪ ಸ್ವಾಗತಿಸಿದರು.

ಕರ್ನಾಟಕ ಅಲೆಮಾರಿ, ಅಲೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೇಂದ್ರನಾಥ ನಾದ, ಜಿಪಂ ಮಾಜಿ ಅಧ್ಯಕ್ಷ ಬಸನಗೌಡ ಯಡಿಯಾಪುರ, ರಾಜಾ ಹನುಮಪ್ಪ ನಾಯಕ, ಎಚ್.ಸಿ.ಪಾಟೀಲ, ತಹಶೀಲ್ದಾರ್‌ ಜಗದೀಶ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರಭು ದೊರೆ, ತಾಲ್ಲೂಕು ಅಧಿಕಾರಿ ಶೃತಿ ಪಾಟೀಲ, ಮುಖಂಡರಾದ ಸುಭಾಸಚಂದ್ರ ಚೌಧರಿ, ಸಿದ್ದಣ್ಣ ಚೌಧರಿ, ಸಿದ್ಧನಗೌಡ ಕರಿಬಾವಿ, ಗುತ್ತಿಗೆದಾರ ರಾಮಬಾಬು, ಕೃಷ್ಣಾರೆಡ್ಡಿ ಇದ್ದರು.

ಅಂಬೇಡ್ಕರ್‌ ಇಲ್ಲದ ಬ್ಯಾನರ್‌ಗೆ ಆಕ್ಷೇಪ

ಕಾರ್ಯಕ್ರಮದ ಬೃಹತ್ ವೇದಿಕೆಯಲ್ಲಿ ಮೊದಲು ಹಾಕಲಾಗಿದ್ದ ಬ್ಯಾನರ್‌ನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರ ಚಿಕ್ಕದು ಹಾಕಲಾಗಿದೆ ಎಂದು ಆಕ್ಷೇಪಿಸಿ ದಲಿತಪರ ಸಂಘಟನೆಗಳು ಆಕ್ಷೇಪ ವ್ಯಪಡಿಸಿದರು, ಇದರಿಂದ ಕಾರ್ಯಕ್ರಮ ಪ್ರಾರಂಭಕ್ಕೆ ವಿಳಂಬವಾಯಿತು ಎನ್ನಲಾಗಿದೆ.

ಸುಮಾರು ಎರಡು ಗಂಟೆಯ ನಂತರ ಡಾ. ಅಂಬೇಡ್ಕರ್ ಇರುವ ಭಾವಚಿತ್ರದ ಹೊಸ ಬ್ಯಾನರ್ ತಂದು ವೇದಿಕೆಗೆ ಅಳವಡಿಸಿದ ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಎಂಬ ಮಾತುಗಳು ಕೇಳಿ ಬಂದವು.

ತಡವಾಗಿ ಬಂದ ಸಚಿವರು

ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ಸಚಿವರು ಮತ್ತು ಶಾಸಕರು ಆಗಮಿಸಲು ತಡವಾದ ಕಾರಣ ಮಧ್ಯಾಹ್ನ 1 ಗಂಟೆಯ ನಂತರ ಪ್ರಾರಂಭವಾಯಿತು. ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಹಲವಾರು ಕಡೆ ಸಚಿವರಿಗೆ ಕಾರ್ಯಕರ್ತರಿಂದ ಸನ್ಮಾನಗಳು ನಡೆದವು. ಇದರಿಂದ ಶಾಲೆಯ ಮೈದಾನ ಮತ್ತು ವೇದಿಕೆ ಮುಂಭಾಗದಲ್ಲಿ ಕಾದು ಕುಳಿತಿದ್ದ ವಿದ್ಯಾರ್ಥಿಗಳು ಮತ್ತು ಜನತೆ ಬೇಸರ ವ್ಯಕ್ತಪಡಿಸಿದರು. 1 ಗಂಟೆಗೆ ಬಂದ ಸಚಿವ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ನರಸಿಂಹ ನಾಯಕ ಅವರನ್ನು ವಿವಿಧ ವಸತಿ ಶಾಲೆಯ ವಿದ್ಯಾರ್ಥಿಗಳು ಹೂಮಳೆ ಗರೆಯುವ ಮೂಲಕ ಕಾರ್ಯಕ್ರಮಕ್ಕೆ ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT