ಮಂಗಳವಾರ, ಜನವರಿ 19, 2021
17 °C
ಸುರಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಭೇಟಿ

ಬಿಜೆಪಿಯಿಂದ ಸಮುದಾಯ ಒಡೆಯುವ ಕೆಲಸ: ಡಿ.ಕೆ.ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಬಿಜೆಪಿ ಸರ್ಕಾರ ಸಮುದಾಯ ಒಡೆಯುವ ಕೆಲಸ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಸಮಾಜ ಒಂದು ಮಾಡುವ ಕೆಲಸ ಮಾಡುತ್ತದೆ. ಮರಾಠ ಸಮುದಾಯಕ್ಕೆ ನಿಗಮ ನೀಡುವ ಮೂಲಕ ಮತ್ತೆ ಇದನ್ನು ಸಾಬೀತು ಮಾಡಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜರಿದರು.

ಬಸವಕಲ್ಯಾಣಕ್ಕೆ ಪ್ರವಾಸ ಹೊರಟಿದ್ದ ಅವರು ಮಾರ್ಗಮಧ್ಯೆ ನಗರಕ್ಕೆ ಬಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರಿಗೆ ಜನ್ಮ ದಿನದ ಶುಭ ಕೋರಿ ನಂತರ ಮಾತನಾಡಿದರು.

‘ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಹೊಂದಾಣಿಕೆಯಿಲ್ಲದೆ ಹೋದರೆ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂಬುದಾಗಿ ಮಲ್ಲಿಕಾರ್ಜುನ ಖರ್ಗೆಯವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ನಮ್ಮ ರಾಜ್ಯದಲ್ಲಿ ಅಂತಹ ಯಾವ ಸನ್ನಿವೇಶಗಳಿಲ್ಲ. ಬೇರೆ ರಾಜ್ಯದ ನಾಯಕರ ಬಗ್ಗೆ ಹೇಳಿರಬಹುದು’ ಎಂದು ವ್ಯಾಖ್ಯಾನಿಸಿದರು.

‘ರಾಜಾರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳಲ್ಲಿ ನಡೆದ ಚುನಾವಣೆಗೂ ಹಾಗೂ ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಲ್ಲಿ ನಡೆಯುವ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಮಸ್ಕಿ ಹಾಗೂ ಬಸವಕಲ್ಯಾಣದಲ್ಲಿ ಬಿಜೆಪಿ ಗೆದ್ದು ತೋರಿಸಲಿ’ ಎಂದು ಸವಾಲೆಸೆದರು.

‘ಬೆಂಗಳೂರು ಚುನಾವಣೆಯೇ ಬೇರೆ. ಅಲ್ಲಿ ಬಿಜೆಪಿಯವರು ಏನು ಮಾಡಿದ್ದಾರೆ ಎಂಬುದನ್ನು ಎಲ್ಲರೂ ನೋಡಿದ್ದಾರೆ. ಅಲ್ಲಿನ ಮತದಾರರನ್ನು ಹಿಡಿದಿಟ್ಟಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಸೋಲಿನತ್ತ ಜಾರಬೇಕಾಯಿತು’ ಎಂದು ವಿಶ್ಲೇಷಿಸಿದರು.

‘ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳು ಕಾಂಗ್ರೆಸ್ಸಿನ ಭದ್ರಕೋಟೆಗಳಾಗಿವೆ. ಗೆಲುವಿಗಾಗಿ ರಾಜಕೀಯ ಹೊಸ ತಂತ್ರ, ಪ್ರತಿತಂತ್ರಗಳನ್ನು ಮಾಡಿದ್ದೇವೆ. ಮಸ್ಕಿಯಲ್ಲಿ ಬಿಜೆಪಿ ಮುಖಂಡ ಬಸವನಗೌಡ ನೇತೃತ್ವದಲ್ಲಿ 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಸೇರಿರುವುದು ಎಲ್ಲರ ಉತ್ಸಾಹ ಇಮ್ಮಡಿಗೊಳಿಸಿದೆ. ಎರಡೂ ಕ್ಷೇತ್ರಗಳನ್ನು ಖಂಡಿತ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ, ಇತರ ಕಾಂಗ್ರೆಸ್ ಮುಖಂಡರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು