ಬುಧವಾರ, ಜೂನ್ 23, 2021
30 °C

ಸಂಪೂರ್ಣ ಲಾಕ್‍ಡೌನ್‍: ಸುರಪುರ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ಜಿಲ್ಲಾಡಳಿತ ಜಾರಿಗೆ ತಂದಿರುವ ಮೂರು ದಿನಗಳ ಸಂಪೂರ್ಣ ಲಾಕ್‍ಡೌನ್‍ಗೆ ತಾಲ್ಲೂಕಿನಾದ್ಯಂತ ಮೊದಲ ದಿನ ಬುಧವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಲಾಕ್‌ಡೌನ್‌ಗೆ ಇಡೀ ತಾಲ್ಲೂಕು ಸ್ತಬ್ಧವಾಗಿತ್ತು. ಅನಗತ್ಯವಾಗಿ ಹೊರಗೆ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆಗಳು ನಡೆದವು.

ಜನರು ಬೆಳ್ಳ ಬೆಳಿಗ್ಗೆಯೇ ಹಾಲು, ಪತ್ರಿಕೆ ತೆಗೆದುಕೊಂಡು ಮನೆ ಸೇರಿ ಕೊಂಡರು. ಅಗತ್ಯ ವಸ್ತುಗಳ ಮಾರಾಟವಿರಲಿಲ್ಲ. ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಗಾಂಧಿ ವೃತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ ಸೇರಿದಂತೆ ಇತರೆ ವೃತ್ತ ಮತ್ತು ರಸ್ತೆಗಳು ಜನರಿಲ್ಲದೆ ಬಿಕೋ ಎನುತ್ತಿದ್ದವು. ಅಂಗಡಿ ಮುಂಗಟ್ಟು ಮುಚ್ಚಿದ್ದರಿಂದ ಜನಜಂಗುಳಿ ಕಂಡುಬರಲಿಲ್ಲ.

ಸಾರ್ವಜನಿಕರು ಬೆಳಿಗ್ಗೆಯಿಂದ ರಾತ್ರಿವರೆಗೂ ರಸ್ತೆಗಿಳಿಯುವ ಧೈರ್ಯ ಮಾಡಲಿಲ್ಲ. ಪೊಲೀಸರು ಬೆಳಿಗ್ಗೆ 6 ಗಂಟೆಗೆ ಫೀಲ್ಡಿಗಿಳಿದು ಅನಗತ್ಯ ವಾಹನಗಳ ಸಂಚಾರಕ್ಕೆ ಮತ್ತು ಸಾರ್ವಜನಿಕರ ಓಡಾಟಕ್ಕೆ ಕಡಿವಾಣ ಹಾಕಿದರು. ಆಸ್ಪತ್ರೆ, ಮೆಡಿಕಲ್ ಸ್ಟೋರ್ ಮತ್ತು ಪೆಟ್ರೋಲ್ ಪಂಪ್‍ಗಳಿಗೆ ಮಾತ್ರ ವಹಿವಾಟು ನಡೆಸಲು ಅವಕಾಶ ನೀಡಲಾಗಿತ್ತು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮತ್ತು ಸಿಪಿಐ ಸಾಹೇಬಗೌಡ ಪಾಟೀಲ್ ಬೆಳಿಗ್ಗೆಯೇ ಪ್ರಮುಖ ವೃತ್ತಗಳಲ್ಲಿ ಠಿಕಾಣಿ ಹೂಡಿ ಲಾಕ್‍ಡೌನ್ ನಿಯಮ ಪಾಲನೆ ಪರಿಶೀಲಿಸಿದರು. ಅನಗತ್ಯವಾಗಿ ಸಂಚರಿಸುತ್ತಿರುವ ವಾಹನಗಳನ್ನು ತಡೆದು ದಂಡ ಹಾಕಿ ವಾಪಸ್ ಕಳುಹಿಸಿದರು.

ನಗರಸಭೆಯವರು ಬೆಳಿಗ್ಗೆಯಿಂದಲೇ ನಿಯಮ ಪಾಲನೆ ಕುರಿತು ಜನರಿಗೆ ಪ್ರಚಾರದ ಮೂಲಕ ತಿಳಿ ಹೇಳಿದರು. ಎಲ್ಲೆಡೆ ಪೊಲೀಸ್ ಬಿಗಿ ಕಾವಲು ಹಾಕಲಾಗಿತ್ತು. ಒಟ್ಟಾರೆ ಲಾಕ್‍ಡೌನ್‍ನ ಮೊದಲ ದಿನ ಯಶಸ್ವಿಯಾಗಿದ್ದು ಸೋಂಕು ತಡೆಯುವ ಜಿಲ್ಲಾಡಳಿತದ ಪ್ರಯತ್ನಕ್ಕೆ ಜನ ಬೆಂಬಲ ಸಿಕ್ಕಿದೆ.

***

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಲಾಕ್‍ಡೌನ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನದ ಲಾಕ್‍ಡೌನ್ ಅತ್ಯಂತ ಯಶಸ್ವಿ ಕಂಡಿದ್ದು, ಉಳಿದಂತೆ ಇನ್ನೂ ಎರಡು ದಿನ ಕೂಡ ಜನರು ಬೆಂಬಲಿಸುವುದರ ಮೂಲಕ ಜಿಲ್ಲಾಡಳಿತ ಜಾರಿ ಗೊಳಿಸಿರುವ ಲಾಕ್‍ಡೌನ್ ಯಶಸ್ವಿಗೊಳಿಸಬೇಕು.
-ಸುಬ್ಬಣ್ಣ ಜಮಖಂಡಿ ತಹಶೀಲ್ದಾರ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.