ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಬಂದ್; ಭಣಗುಟ್ಟಿದ ರಸ್ತೆಗಳು

ಜಿಲ್ಲೆಯಾದ್ಯಂತ ‘ಭಾನುವಾರದ ಕರ್ಫ್ಯೂ’ಗೆ ಉತ್ತಮವಾಗಿ ಸ್ಪಂದಿಸಿದ ಜನ
Last Updated 24 ಮೇ 2020, 16:35 IST
ಅಕ್ಷರ ಗಾತ್ರ

ಯಾದಗಿರಿ: ಲಾಕ್‌ಡೌನ್‌ ಸಡಿಲಿಕೆ ನಂತರ ‘ಭಾನುವಾರ ಕರ್ಫ್ಯೂ’ ಘೋಷಣೆ ಮಾಡಿದ್ದು, ಜಿಲ್ಲೆಯ ಹಲವೆಡೆ ಉತ್ತಮ ಸ್ಪಂದನೆ ಸಿಕ್ಕಿದೆ.

ಅಗತ್ಯ ವಸ್ತುಗಳಅಂಗಡಿ ಬಿಟ್ಟರೆ ಬೇರೆ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿತ್ತು. ಜಿಲ್ಲೆಯಲ್ಲಿ ಭಾನುವಾರ 42 ಡಿಗ್ರಿ ಸೆಲ್ಸಿಯಸ್‌ ಬಿಸಿಲು ದಾಖಲಾಗಿದ್ದರಿಂದ ಬಹುತೇಕ ಜನರು ಹೊರಗಡೆ ಬರಲಿಲ್ಲ.‘ಭಾನುವಾರ ಕರ್ಫ್ಯೂ’ ಬಗ್ಗೆ ತಿಳಿದಿದ್ದ ಗ್ರಾಮೀಣ ಭಾಗದ ಜನರುಕೂಡ ನಗರ ಪ್ರದೇಶಕ್ಕೆ ಹೆಚ್ಚು ಬಂದಿಲ್ಲ.

ವಾಹನಗಳ ಓಡಾಟ ವಿರಳವಾಗಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸರ್ಕಾರಿ ಕಚೇರಿಗಳು ಮುಚ್ಚಿದ್ದರಿಂದ ಬಹುತೇಕ ಜನರು ಮನೆಗಳಲ್ಲಿ ಉಳಿದುಕೊಂಡಿದ್ದರು. ಪೊಲೀಸರು ಪ್ರಮುಖ ವೃತ್ತಗಳಲ್ಲಿ ಪಹರೆ ಕಾಯುತ್ತಿದ್ದರು. ಅನವಶ್ಯವಾಗಿ ಓಡಾಡುವವರಿಗೆ ತಿಳಿವಳಿಕೆ ಮೂಡಿಸಿದರು.

ಲಾಕ್‌ಡೌನ್‌ ಸಡಿಲಿಕೆ ನಂತರ ಬೆಳಿಗ್ಗೆ 7ರಿಂದ ಸಂಜೆ 5 ರ ವರೆಗೆ ವಿವಿಧ ವ್ಯಾಪಾರ–ವಹಿವಾಟಿಗೆ ಜಿಲ್ಲಾಡಳಿತ ಸಮಯ ನಿಗದಿ ಪಡಿಸಿದೆ. ಆದರೆ, ಭಾನುವಾರ ಎಲ್ಲ ಅಂಗಡಿಗಳು ಬಂದ್‌ ಆಗಿದ್ದು, ಇದಕ್ಕೆ ಸಾಥ್‌ ನೀಡಿದ್ದಂತೆ ಕಾಣಿಸಿತು.

ಬೆಳಿಗ್ಗೆ ವೇಳೆ ರಸ್ತೆಗಳಲ್ಲಿ ಅಲ್ಲೊಂದು ಇಲ್ಲೊಂದು ವಾಹನಗಳು ಓಡಾಟ ನಡೆದಿತ್ತು. ಮಧ್ಯಾಹ್ನದ ನಂತರ ವಾಹನಗಳ ಓಡಾಟ ಕಡಿಮೆಯಾಗಿತ್ತು. ಸಂಜೆ ವೇಳೆ ಕೆಲ ವಾಹನಗಳ ಓಡಾಟ ನಡೆದಿತ್ತು.

ಗ್ರಾಮೀಣ ಭಾಗಗಳಲ್ಲಿಯೂ ಪೊಲೀಸರು ಜಾಗೃತಿ ಮೂಡಿಸಿ ಕರ್ಫ್ಯೂಗೆ ಬೆಂಬಲಿಸುವಂತೆ ತಿಳಿಸುತ್ತಿದ್ದರು.

ಗ್ರಾಮೀಣ ಭಾಗದ ಮುಖ್ಯರಸ್ತೆಗಳು ಹಾಗೂ ಯಾದಗಿರಿ-ಶಹಾಪುರ-ಸುರಪುರ ರಾಜ್ಯ ಹೆದ್ದಾರಿಯ ಮೇಲೆ ವಾಹನಗಳ ಸಂಚಾರ ಇಲ್ಲದೆ ಹೆದ್ದಾರಿ ಭಣ ಭಣ ಎನ್ನುತ್ತಿತ್ತು.

ಮಾರುಕಟ್ಟೆಯಲ್ಲಿ ಅಂತರ ಮಾಯ:ಭಾನುವಾರ ಬೆಳಿಗ್ಗೆ ತರಕಾರಿ ಮಾರುಕಟ್ಟೆಯಲ್ಲಿ ಅಂತರ ಮಾಯವಾಗಿತ್ತು. ಯಾವುದೇ ನಿಯಮಗಳನ್ನು ಪಾಲಿಸದೆ ಜನತೆ ಬೇಕಾಬಿಟ್ಟಿ ಓಡಾಟ ನಡೆಸಿದ್ದಾರೆ. ಭಾನುವಾರ ಬಂದ್‌ ಬಗ್ಗೆ ತಿಳಿಯುತ್ತಲೇ ಜನತೆ ತರಕಾರಿ ಮಾರುಕಟ್ಟೆಯಲ್ಲಿ ಗುಂಪು ಗೂಡುವುದು ಕಂಡು ಬಂದಿದೆ. ಇನ್ನುಳಿದಂತೆ ಬಂದ್‌ಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ.

ಅಂಗಡಿಗಳು ಸಂಪೂರ್ಣ ಬಂದ್

ಹತ್ತಿಕುಣಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಭಾನುವಾರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.ಗ್ರಾಮದ ಕಿರಾಣಿ ಅಂಗಡಿ, ಹೋಟೆಲ್, ಮದ್ಯದಂಗಡಿ, ಹೇರ್ ಸೆಲ್ಯೂನ್, ಸಿಮೆಂಟ್, ಕಬ್ಬಿಣ, ಎಲೆಕ್ಟ್ರಾನಿಕ್, ಬೇಕರಿ, ಮೊಬೈಲ್, ಚಪ್ಪಲಿ, ಬಟ್ಟೆ ಹೊಲೆಯುವ, ಪಂಚರ್ ತಿದ್ದುವ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು.ದ್ವಿಚಕ್ರ ಹೊರತು ಪಡಿಸಿ, ಬೃಹತ್ ವಾಹನ ಸಂಚಾರ ಕಾಣಲಿಲ್ಲ. ಇಟ್ಟಿಗೆ, ಪೇಪರ್ ಪ್ಲೇಟ್, ಶಾವಿಗೆ, ಪತ್ರಾಸ್ ತಯಾರಿಸುವ ಕಂಪನಿಗಳ ಬಾಗಿಲು ಮುಚ್ಚಿದ್ದವು.

ಹಾಲು, ಪತ್ರಿಕೆ, ತರಕಾರಿ, ಹಿಟ್ಟು ಬೀಸುವ, ಮೆಣಸಿನಕಾಯಿ ಕುಟ್ಟುವ ಗಿರಣಿಗಳು, ಹಣ್ಣಿನ ಅಂಗಡಿಗಳು ಮತ್ತು ಮೆಡಿಕಲ್ , ಖಾಸಗಿ ಆಸ್ಪತ್ರೆಗಳು ತೆರೆದಿದ್ದವು. ಶುದ್ದ ನೀರಿನ ವ್ಯಾಪಾರ ನಡೆದಿತ್ತು, ಗ್ರಾಮದ ದೊಡ್ಡ ಕೆರೆಯಲ್ಲಿ ಹೂಳೆತ್ತುವ ಚಟುವಟಿಕೆ ಕಂಡು ಬಂತು.

ಸುತ್ತಲಿನ ಅಲ್ಲಿಪುರ, ಬಸವಂತಪುರ, ಅರಕೇರ.ಬಿ, ಅಚ್ಚೋಲ, ಹತ್ತಿಕುಣಿ, ವನಗೇರಾ, ಬಾಚವಾರ, ಲಿಂಗಸನಳ್ಳಿ, ಅಡ್ಡಮಡಿ, ತಾನುನಾಯಕ, ಥಾವರುನಾಯಕ, ಕೇಮುನಾಯಕ ತಾಂಡಗಳ ಕ್ವಾರಂಟೈನ್ ಕೇಂದ್ರದ ಕಾರ್ಮಿಕರಿಗೆ ಆರೋಗ್ಯ ತಪಾಸಣೆ, ಊಟದ ವ್ಯವಸ್ಥೆ ಮಾಡಲು ಅಧಿಕಾರಿಗಳು ಮತ್ತು ಆರೋಗ್ಯ ಸಿಬ್ಬಂದಿ ಮುಂದಾಗಿದ್ದರು.ರೈತರು ಕೃಷಿ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿದ್ದರು. ಕೂಲಿ ಕಾರ್ಮಿಕರು ಮನೆಕಟ್ಟುವ ಕೆಲಸದಲ್ಲಿ ತೊಡಗಿದ್ದರು. ಗ್ರಾಮದ ತಪಾಸಣಾ ಕೇಂದ್ರದಲ್ಲಿ, ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಪಾಸ್ ಹೊಂದಿರುವ ವಾಹನಗಳಿಗೆ, ಆಂಬುಲೆನ್ಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.ಗ್ರಾಮದ ಹಲವು ಕಡೆ ವರ ಅಥವಾ ವಧುವಿನ ಮನೆಯ ಮುಂದೆಯೇ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸರಳ ವಿವಾಹಗಳಾದವು.

ಸಾರ್ವಜನಿಕರು ಅನ್ಯಗತ್ಯವಾಗಿ ಹೊರಗಡೆ ತಿರುಗಾಡದೆ, ಮನೆಯಲ್ಲಿ ಕುಳಿತಿದ್ದರು. ಯುವಕರು ಗ್ರಾಮದ ಬಯಲು ಪ್ರದೇಶದಲ್ಲಿ ಅಂತರ ಕಾಯ್ದುಕೊಂಡು ಕ್ರಿಕೆಟ್ ಆಟದಲ್ಲಿ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT