ಶುಕ್ರವಾರ, ನವೆಂಬರ್ 22, 2019
22 °C
ಮೂರು ತಲೆಮಾರು ಕಂಡ ಮಹಾತ್ಮ ಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ಸೌಲಭ್ಯಗಳೇ ಇಲ್ಲ

ಮಾರುಕಟ್ಟೆ ಇಕ್ಕಟ್ಟು; ವ್ಯಾಪಾರ ಬಿಕ್ಕಟ್ಟು

Published:
Updated:
Prajavani

ಯಾದಗಿರಿ: ನಗರದ ಮಹಾತ್ಮ ಗಾಂಧಿ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಸೂಕ್ತ ಸೌಲಭ್ಯಗಳು ಇಲ್ಲದೆ ವ್ಯಾಪಾರಸ್ಥರು ಪರದಾಡುತ್ತಿದ್ದಾರೆ.

ಮಳೆ ಬಂದರೆ ಮಾರುಕಟ್ಟೆ ಪೂರ್ತಿ ಸೋರುತ್ತದೆ. ಇದರಿಂದ ತರಕಾರಿ ಕಾಪಾಡಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿದೆ. ಸುಸಜ್ಜಿತ ಮಾರುಕಟ್ಟೆ ಇರದ ಕಾರಣ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.

ತರಕಾರಿ ಮಾರುಕಟ್ಟೆಯಲ್ಲಿ ಕಳೆದ 50 ರಿಂದ 60 ವರ್ಷದ ಹಿಂದೆ ಸಣ್ಣದಾಗಿ ಆರಂಭವಾಗಿತ್ತು. ಈಗಲೂ ಅಷ್ಟೇ ಪ್ರಮಾಣದಲ್ಲಿದೆ. ಕಿಷ್ಕಂಧೆಯಂತ ಸ್ಥಳದಲ್ಲಿ ವ್ಯಾಪಾರ ಮಾಡಬೇಕಿದೆ. ರಸ್ತೆ ವಿಸ್ತರಣೆ ವೇಳೆ ಕೆಲ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಆ ವೇಳೆ ತಡೆಗೋಡೆಯನ್ನು ಅಲ್ಲಿಯ ವ್ಯಾಪಾರಿಗಳೇ ನಿರ್ಮಿಸಿಕೊಂಡಿದ್ದರು. ಆದರೂ ನಗರಸಭೆ, ಜಿಲ್ಲಾಡಳಿತ ಅವರಿಗೆ ಸೂಕ್ತ ಸೌಲಭ್ಯ ಒದಗಿಸಲು ಮುಂದಾಗಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಮಳೆ ಬಂದರೂ ತೊಯ್ಯುವ ತರಕಾರಿ: ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಹಬ್ಬದ ಪ್ರಯುಕ್ತ ತಂದಿದ್ದ ಕುಂಬಳಕಾಯಿ, ಬಾಳೆ ಕಂದು ಮತ್ತಿತರ ತರಕಾರಿ ನೀರಿನಲ್ಲಿ ತೋಯ್ದು ವ್ಯಾಪಾರಿಗಳಿಗೆ ನಷ್ಟವನ್ನುಂಟು ಮಾಡಿತ್ತು. ಇದರಿಂದ ಮುಕ್ತಿ ಇಲ್ಲವೆ ಎಂದು ಪ್ರಶ್ನಿಸುವಂತಾಗಿದೆ.

ಮಾರುಕಟ್ಟೆ ತಗ್ಗು ಪ್ರದೇಶದಲ್ಲಿದ್ದು, ಮಳೆ ಬಂದರೆ ನೀರು ಇಲ್ಲಿಯೆ ನಿಂತುಕೊಳ್ಳುತ್ತದೆ. ಅಲ್ಲದೆ ಗ್ರಾಹಕರು ಸರಾಗವಾಗಿ ಸಂಚರಿಸಲು ನೆಲ ಹಾಸು ಇಲ್ಲವಾಗಿದೆ. ಇದರಿಂದ ಗ್ರಾಹಕರು ಜಾರಿ ಬಿದ್ದ ಘಟನೆಗಳು ನಡೆದಿವೆ.

ಅವೈಜ್ಞಾನಿಕ ಚರಂಡಿ ವ್ಯವಸ್ಥೆ:
ಹಿಂಭಾಗದ ಗೇಟು ಬಳಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಲಾಗಿದೆ. ಇದರಿಂದ ಚರಂಡಿ ನೀರು ಮಾರುಕಟ್ಟೆ ಒಳಗೆ ಬರುತ್ತವೆ. ಅಲ್ಲದೆ ಆಗಾಗ್ಗೆ ಚರಂಡಿ ಸ್ವಚ್ಛಗೊಳಿಸದೆ ಇರುವುದರಿಂದ ತುಂಬಿ ಹರಿಯುತ್ತಿದೆ. ಇದರಿಂದ ಒಳಗಡೆ ನೀರು ಹೊರಗಡೆ ಸರಾಗವಾಗಿ ಹರಿಯದೆ ನಿಂತಲ್ಲೆ ನಿಲ್ಲುತ್ತಿವೆ. ಇದರಿಂದ ಕೊಳಚೆ ನೀರು ನಿಂತು ದುರ್ನಾತ ಬೀರುತ್ತಿದೆ.

ತಾಡಪತ್ರಿ, ಗೋಣಿ ಚೀಲಗಳೆ ಆಶ್ರಯ:
ಇಲ್ಲಿ ತಾಡಪತ್ರಿ, ಗೋಣಿ ಚೀಲಗಳ ಮೂಲಕವೇ ಸಣ್ಣದಾಗಿ ನೆರಳಿನ ಆಶ್ರಯವನ್ನು ವ್ಯಾಪಾರಸ್ಥರು ಮಾಡಿಕೊಂಡಿದ್ದಾರೆ. ವರ್ಷಕ್ಕೆ ಮೂರು ಬಾರಿ ಅವುಗಳನ್ನು ಬದಲಾಯಿಸಬೇಕಿದೆ ಶೆಡ್‌ ಇರದ ಕಾರಣ ಮಳೆ,ಬಿಸಿಲಿಗೆ ಅವು ಮೆತ್ತಗಾಗುತ್ತವೆ. ಇದರಿಂದ ತಡಪತ್ರಿ, ಗೋಣಿ ಚೀಲಗಳಿಗೆ ನೂರಾರು ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ.

ಕೆಲ ಅನುಕೂಲಸ್ಥರು ಮಾತ್ರ ತಗಡಿನ ಶೀಟ್‌ ವ್ಯವಸ್ಥೆ ಮಾಡಿಕೊಂಡಿದ್ದಾರೆ.ಹಲವರು ತಾಡಪತ್ರಿ ಆಶ್ರಯಿಸಿಕೊಂಡಿದ್ದಾರೆ. ಹೀಗಾಗಿ ಜಿಲ್ಲಾಡಳಿತ, ನಗರಸಭೆ ನಮಗೆ ವ್ಯವಸ್ಥೆ ಮಾಡಬೇಕು ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ಪ್ರತಿದಿನ ನಾವು ₹ 10 ನೆಲ ಬಾಡಿಗೆ ಕೊಡುತ್ತೇವೆ. ಆದರೆ, ನಮಗೆ ಕೂರಲು ಸರಿಯಾದ ವ್ಯವಸ್ಥೆ ಇಲ್ಲ. ನೆರಳಿನ ವ್ಯವಸ್ಥೆ ಇಲ್ಲ. ಹಲವಾರು ವರ್ಷಗಳಿಂದ ಇಲ್ಲಿಯೆ ವ್ಯಾಪಾರ ನಡೆಸಿದ್ದೇವೆ. ಆದರೂ ನಮ್ಮ ಪರದಾಟ ಯಾರೂ ನೋಡುತ್ತಿಲ್ಲ’ ಎಂದು ವ್ಯಾಪಾರಸ್ಥೆ ನಾಗಮ್ಮ ಹೇಳಿದರು.

***

ಹಿಂದೆ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿತ್ತು. ಇದದಿಂದ ಮಧ್ಯವರ್ತಿಗಳಿಗೆ ಲಾಭವಾಗುತ್ತಿತ್ತು. ಅದರ ಬದಲಾಗಿ ನಗರಸಭೆಯವರೆ ಇಂತಿಷ್ಟು ಹಣ ನಿಗದಿ ಪಡಿಸಲಿ. ಆಗ ನಾವು ನಗರಸಭೆಗೆ ಕರ ಕಟ್ಟುತ್ತೇವೆ.

-ಮಲ್ಲಯ್ಯ ದಾಸನ್, ಗೌರವಾಧ್ಯಕ್ಷ ತರಕಾರಿ ಮಾರುಕಟ್ಟೆ ಸಮಿತಿ

ಮಾರುಕಟ್ಟೆಯಲ್ಲಿ ಇಲಿ, ಹೆಗ್ಗಣಗಳ ಕಾಟವಿದೆ. ಇಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸುವ ಮುನ್ನ ಬೇರೆಡೆ ನಮಗೆ ಜಾಗ ತೋರಿಸಿ ಕೊಡಬೇಕು. ಇಲ್ಲದಿದ್ದರಿಂದ ನಾವು ಬದುಕುಳಿಯುವುದೇ ಕಷ್ಟವಾಗುತ್ತಿದೆ.

-ಶಂಶುದ್ಧೀನ್ ಎಸ್‌.ಖಾದ್ರಿ ,ಉಪಾದ್ಯಕ್ಷ, ತರಕಾರಿ ಮಾರುಕಟ್ಟೆ ಸಮಿತಿ

ಇತ್ತಿಚೆಗೆ ಮಾರುಕಟ್ಟೆಯಲ್ಲಿ ಜಾಗದ ಅಳತೆ ಮಾಡಿಕೊಂಡು ಹೋಗಿದ್ದಾರೆ. ಆದರೆ ಇಲ್ಲಿಯವರೆಗೆ ಯಾವ ಸೌಲಭ್ಯವೂ ಬಂದಿಲ್ಲ. ನಮ್ಮ ಗೋಳು ಯಾರಿಗೆ ಹೇಳಬೇಕು..

-ಮಹಾದೇವಮ್ಮ ನಕ್ಕಲ್, ವ್ಯಾಪಾರಸ್ಥೆ

ಕಳೆದ ಕೆಲ ವರ್ಷಗಳಿಂದ ಮಾರುಕಟ್ಟೆ ವ್ಯಾಪಾರಿಗಳು ನಗರಸಭೆಗೆ ಕರ ಕಟ್ಟುತ್ತಿಲ್ಲ. ಈಗಾಗಲೇ ₹2.43 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಮಿಸಲು ಯೋಜಿಸಲಾಗಿದೆ. ಇದಕ್ಕೆ ವ್ಯಾಪಾರಿಗಳು ಸಹಕರಿಸುತ್ತಿಲ್ಲ.

-ರಮೇಶ ಎಸ್‌.ಸುಣಗಾರ, ನಗರಸಭೆ‍ ಪೌರಾಯುಕ್ತ

ಪ್ರತಿಕ್ರಿಯಿಸಿ (+)