ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಶಾಂತಿ ಕದಡುತ್ತಿರುವ ಕಾಂಗ್ರೆಸ್‌

ಹಿಜಾಬ್, ಆಜಾನ್ ವಿವಾದದ ಹಿಂದೆ ಕಾಂಗ್ರೆಸ್ ಕೈವಾಡ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಟೀಕೆ
Last Updated 16 ಮೇ 2022, 16:30 IST
ಅಕ್ಷರ ಗಾತ್ರ

ಯಾದಗಿರಿ: ‘ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್, ಆಜಾನ್ ವಿವಾದ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಹಿಜಾಬ್‌ನ ತಲೆ ಕಾಂಗ್ರೆಸ್‌ನದ್ದು, ದೇಹ ಮಾತ್ರ ಎಸ್‌ಡಿಪಿಐನದ್ದು. ರಾಜ್ಯದಲ್ಲಿ ಕಾಂಗ್ರೆಸ್‌ ಅಶಾಂತಿ ಸೃಷ್ಟಿ ಮಾಡುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ದೂರಿದರು.

ನಗರದ ಗ್ರೀನ್ ಸಿಟಿಗಾರ್ಡನ್‌ನಲ್ಲಿ ನಿರ್ಮಿಸಲಾಗುತ್ತಿರುವ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯಾಲಯದ ಶಂಕುಸ್ಥಾಪನೆ, ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಭ್ರಷ್ಟಾಚಾರದ ಗಂಗೋತ್ರಿ.ಭಯೋತ್ಪಾದನೆ, ಭ್ರಷ್ಟಾಚಾರ ಮತ್ತು ಪರಿಹಾರವಾದ ಈ ಮೂರು ಕಾಂಗ್ರೆಸ್ ಕೊಡುಗೆ ನೀಡಿದೆ. ಕಾಂಗ್ರೆಸ್ ಮುಕ್ತ ಎಂದರೆ ಭ್ರಷ್ಟಾಚಾರ ಮುಕ್ತ ಎಂದರ್ಥ. ದೇಶದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವುದರಿಂದ ಕಾಂಗ್ರೆಸ್‌ಗೆ ಈಗ ಜ್ಞಾನೋದಯವಾಗಿದ್ದು, ಒಂದೇ ಕುಟುಂಬಕ್ಕೆ ಒಂದೇ ಟಿಕೆಟ್ ಎಂದು ಘೋಷಿಸಿದೆ’ ಎಂದು ವ್ಯಂಗ್ಯವಾಡಿದರು.

ನರೇಂದ್ರ ಮೋದಿ‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ‌ ಬಂದ ಮೇಲೆ ಭಯೋತ್ಪಾದನೆ ನಿಂತಿವೆ. ನಕ್ಸಲ್ ಚಟುಚಟಿಕೆ ಪೂರ್ಣವಾಗಿ ನಿಂತಿದೆ. ಕಾಂಗ್ರೆಸ್ನಿರುದ್ಯೋಗ ಸೃಷ್ಟಿ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

150 ಸೀಟು ಪಡೆಯುತ್ತೇವೆ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕಾಮನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವ ಎಸ್‌ಸಿ ಹಾಗೂ ಎಸ್‌ಟಿಯವರಿಗೆ ಉಚಿತ ವಿದ್ಯುತ್ ಉಚಿತ‌ ಕೊಡಲಾಗುವುದು. ಬಿಜೆಪಿ ಸರ್ಕಾರ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕಾಗಿ ₹500 ಕೋಟಿ ನೀಡಲಾಗಿದೆ’ ಎಂದರು.

‘ಮುಂದಿನ‌ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ‌ಬಿಜೆಪಿ‌ 150 ಸೀಟು ಪಡೆದು ಅಧಿಕಾರಕ್ಕೆ ಬರಲಿದೆ. ಜಿಲ್ಲೆಯ ನಾಲ್ಕು ವಿಧಾನಸಭೆಯಲ್ಲಿ ಬಿಜೆಪಿ ಗೆಲ್ಲಲಿದೆ. ಹೀಗಾಗಿ ಕಾಂಗ್ರೆಸ್ ಷಡ್ಯಂತ್ರ, ಸಿದ್ದರಾಮಯ್ಯನವರ ನಾಟಕ, ಡಿಕೆಶಿ ಅವರ ಭ್ರಷ್ಟಾಚಾರವನ್ನು ಜನರಿಗೆ ತಲುಪಿಸಬೇಕು’ ಎಂದು ಕರೆ ನೀಡಿದರು.

ಪಕ್ಷದ ಜಿಲ್ಲಾ ಉಸ್ತುವಾರಿ ಅಮರನಾಥ ಪಾಟೀಲ ಮಾತನಾಡಿದರು.

ಶಾಸಕರಾದ ವೆಂಕಟರೆಡ್ಡಿಗೌಡ ಮುದ್ನಾಳ, ರಾಜಕುಮಾರ ಪಾಟೀಲ ತೇಲ್ಕೂರು, ನರಸಿಂಹನಾಯಕ, ಬಿ.ಜಿ.ಪಾಟೀಲ, ಮಾಜಿ ಸಚಿವರಾದ ಎ.ಬಿ.ಮಾಲಕರೆಡ್ಡಿ, ಬಾಬುರಾವ ಚಿಂಚನಸೂರ, ಯೂಡಾ ಅಧ್ಯಕ್ಷ ಬಸವರಾಜ ಚಂಡ್ರಿಕಿ, ಮಾಜಿ ಶಾಸಕ ವೀರಬಸಂತರೆಡ್ಡಿ ಮುದ್ನಾಳ, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಉಪಾಧ್ಯಕ್ಷೆ ಚಂದ್ರಕಲಾ‌ ಮಡ್ಡಿ, ವಿಲಾಸ ಪಾಟೀಲ, ನಾಗರತ್ನ ಕುಪ್ಪಿ, ವೀಣಾ ಮೋದಿ, ಹಣಮಂತ ಇಟಗಿ, ಈಶ್ವರ ಸಿಂಗ್ ಠಾಕೂರ, ಅಮೀನ್ ರೆಡ್ಡಿ ಪಾಟೀಲ ಯಾಳಗಿ, ಎನ್.ಶಂಕ್ರಪ್ಪ, ದೇವೆಂದ್ರನಾಥ ನಾದ್‌, ಗುರುಕಾಮಾ, ವೆಂಕಟರೆಡ್ಡಿ ಅಬ್ಬೆತುಮಕೂರು, ಸ್ವಾಮಿದೇವ ದಾಸನಕೇರಿ, ಖಂಡಪ್ಪ ದಾಸನ್‌, ಮಹೇಶರೆಡ್ಡಿ ಮುದ್ನಾಳ, ವಿರೂಪಾಕ್ಷಯ್ಯ ಸ್ವಾಮಿ ಇದ್ದರು.

***

‘ಕಾಂಗ್ರೆಸ್‌ನವರು ಬೇಲ್‌ ಮೇಲೆ ಹೊರಗಿದ್ದಾರೆ’

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ಅಷ್ಟೇಕೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಜಾಮೀನು ಮೇಲೆ ಹೊರ ಇದ್ದಾರೆ. ಭ್ರಷ್ಟಾಚಾರ ಬಗ್ಗೆ ಮಾತನಾಡುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈಗ ಯಾಕೆ ಮಾತ‌ನಾಡಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಪ್ರಶ್ನಿಸಿದರು.

ಮುಸ್ಲಿಮರು ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಲು ಅರ್ಜಿ ಹಾಕಿರಲಿಲ್ಲ. ಹಿಂದೂ ಮುಸ್ಲಿಮರನ್ನು ಟಿಪ್ಪು ಜಯಂತಿ ಹೆಸರಲ್ಲಿ ಸಿದ್ದರಾಮಯ್ಯ ಒಡೆದು ಆಳಿದರು. ಕೆಜಿ‌ಹಳ್ಳಿಯಲ್ಲಿ ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಿದಾಗ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ‌ಅವರ ಮನೆಗೆ ಹೋಗಲಿಲ್ಲ. ಅಶಾಂತಿಯನ್ನು‌ ಸೃಷ್ಟಿಸಿ ಕಾಂಗ್ರೆಸ್ ಮತಬ್ಯಾಂಕನ್ನಾಗಿ ಪರಿವರ್ತನೆ ಮಾಡುತ್ತಿದೆ ಎಂದು ಆರೋಪಿಸಿದರು.
***
ಹರಿದು ಬಂದ ದೇಣಿಗೆ

ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರು ಕಟ್ಟಡಕ್ಕೆ ₹2.01 ಲಕ್ಷ ದೇಣಿಗೆ ಘೋಷಿಸಿದರು. ಜಿಲ್ಲಾದ್ಯಕ್ಷ ಶರಣಭೂಪಾಲರೆಡ್ಡಿ ₹5.01 ಲಕ್ಷ, ಶಾಸಕರಾದ ವೆಂಕಟರೆಡ್ಡಿ ಮುದ್ನಾಳ ₹11 ಲಕ್ಷ, ರಾಜೂಗೌಡ ₹25 ಲಕ್ಷ, ಬಾಬುರಾವ ಚಿಂಚನಸೂರು ₹50.01 ಲಕ್ಷ, ನಾಗರತ್ನ ಕುಪ್ಪಿ ₹2.01 ಲಕ್ಷ, ಬಿ.ಜಿ.ಪಾಟೀಲ ₹10 ಲಕ್ಷ, ಬಸವರಾಜ ಚಂಡ್ರಿಕಿ ₹1.11 ಲಕ್ಷ, ಅಮೀನರೆಡ್ಡಿ ಪಾಟೀಲ ಯಾಳಗಿ ₹5 ಲಕ್ಷ, ದೇವೆಂದ್ರನಾಥ ನಾದ ₹2.01 ಲಕ್ಷ ದೇಣಿಗೆ ಘೋಷಿಸಿದರೆ, ಯಾದಗಿರಿ ನಗರಸಭೆ ಅಧ್ಯಕ್ಷ ಸುರೇಶ ಅಂಬೀಗೆರ ₹2.12 ಲಕ್ಷ ಘೋಷಿಸಿದರು. ಎ.ಬಿ.ಮಾಲಕರಡ್ಡಿ ಯೋಗ್ಯ ಅನುದಾನ ಹೇಳಿದರೆ ಕೊಡುವುದಾಗಿ ಹೇಳಿದರು.
***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT