ಮಂಗಳವಾರ, ಮೇ 17, 2022
25 °C
ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಕಾಂಗ್ರೆಸ್‌ ಒತ್ತಾಯ

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ತೈಲ ಬೆಲೆ ಇಳಿಸಬೇಕು’ ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಿಂದ ತಹಶೀಲ್ದಾರ್‌ ಕಚೇರಿವರೆಗೆ ಪಾದಯಾತ್ರೆ ನಡೆಸಿ ತಹಶೀಲ್ದಾರ್‌ ಮೂಲಕ ರಾಜ್ಯಪಾಲ ಮತ್ತು ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.

‘ದೆಹಲಿ ಗಡಿಗಳಲ್ಲಿ 75 ದಿನಗಳಿಂದ ಲಕ್ಷಾಂತರ ರೈತರು ಕಾಯ್ದೆಗಳ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. 155ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಅನ್ನದಾತರ ನೋವು, ಅಳಲು, ಕಷ್ಟ ಕಾರ್ಪಣ್ಯಗಳಿಗೆ ಕಿವುಡಾಗಿ ಕೇಂದ್ರ ಸರ್ಕಾರ ರೈತ ಚಳವಳಿಗೆ ಹಲವಾರು ಅಡೆತಡೆಗಳನ್ನೊಡ್ಡಿ ದಾಷ್ಟ್ರ್ಯ ಮೆರೆಯುತ್ತಿದೆ’ ಎಂದು ಆರೋಪಿಸಿದರು.

‘ಒಂದು ಕಡೆ ರೈತರು ಕರಾಳ ಕಾನೂನುಗಳ ವಿರುದ್ಧ ಹೋರಾಟ ಮಾಡುತ್ತಿದ್ದರೆ, ಇನ್ನೊಂದೆಡೆ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿ ಹೊರೆ ಹೆಚ್ಚಿಸಿದೆ. ಬೆಲೆ ಏರಿಕೆ ಕಳೆದ 73 ವರ್ಷಗಳಲ್ಲಿ ಕಂಡು ಕೇಳರಿಯದಷ್ಟು ವೃದ್ಧಿಯಾಗಿದೆ’ ಎಂದು ಆಪಾದಿಸಿದರು.

‘ಕೇಂದ್ರ ಸರ್ಕಾರ ತಕ್ಷಣವೇ ಮೂರೂ ಕಾಯ್ದೆಗಳನ್ನು ಹಿಂಪಡೆದು, ಸಂಸತ್ ಆಧಿವೇಶನ ಕರೆದು ಈ ಬಗ್ಗೆ ಚರ್ಚೆಗೆ ಅನುವು ಮಾಡಿಕೊಡಬೇಕು. ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದರೆ ಖಂಡಿತವಾಗಿಯೂ ಈ ಪ್ರಸ್ತಾಪ ಸ್ವಾಗತಿಸುತ್ತಾರೆ. ಮೂರೂ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಕ್ಷಣವೇ ಘೋಷಿಸಬೇಕು ಎಂದು ಒತ್ತಾಯಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸುದರ್ಶನ ನಾಯಕ ಮಾತನಾಡಿ,‘ಈಚೆಗೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಇಂಥ ಗೊಡ್ಡು ಬೆದರಿಕೆಗೆ ಕಾಂಗ್ರೆಸ್‌ ನಾಯಕರು ಬಗ್ಗುವುದಿಲ್ಲ. ನಮ್ಮ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇಂಥ ಶಕ್ತಿಗಳನ್ನು ಮಟ್ಟ ಹಾಕಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರೀಗೌಡ ಪಾಟೀಲ ಹುಲಕಲ್‌, ವಿಧಾನ ಪರಿಷತ್ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರು, ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ, ಕಿಸಾನ್‌ ಕಾಂಗ್ರೆಸ್‌ ಘಟಕದ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದಿ, ಮಹಿಳಾ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ಗೂಳಿ, ಕೆಪಿಸಿಸಿ ವೀಕ್ಷಕ ರಾಘವೇಂದ್ರ ಮಾನಸಗಲ್‌, ಬಸ್ಸುಗೌಡ ಬಿಳ್ಹಾರ, ಮರೆಪ್ಪ ಬಿಳ್ಹಾರ, ನಗರಸಭೆ ಸದಸ್ಯರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಕಾರ್ಯಕರ್ತರು, ರೈತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು