ಸುರಪುರ : ಎರಡು ಪ್ರತ್ಯೇಕ ಘಟನೆಗಳಲ್ಲಿ ಕಲುಷಿತ ನೀರು, ಆಹಾರ ಸೇವನೆಯಿಂದಾಗಿ ಸುರಪುರ ತಾಲ್ಲೂಕಿನ ಚಿಕ್ಕನಳ್ಳಿಯಲ್ಲಿ 37 ಜನ ಅಸ್ವಸ್ಥರಾಗಿದ್ದಾರೆ.
ಕಲುಷಿತ ನೀರು ಸೇವನೆಯಿಂದ 24 ಜನರು ವಾಂತಿಭೇದಿಯಿಂದ ಬಳಲುತ್ತಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಅವರಲ್ಲಿ 22 ಶಾಲಾ ಮಕ್ಕಳು ಇದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತಾತ್ಕಾಲಿಕ ಆಸ್ಪತ್ರೆಯನ್ನಾಗಿ ಮಾಡಿ ಅಲ್ಲಿ 4 ಮಕ್ಕಳು ಸೇರಿದಂತೆ 5 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರಿಗೆ ಮಾತ್ರೆಗಳನ್ನು ಕೊಟ್ಟು ಮನೆಗೆ ಕಳಿಸಲಾಗಿದೆ.
ಕಳೆದ ಎರಡು ದಿನಗಳಿಂದ ಮಳೆ ಸುರಿದ ಕಾರಣ ಗ್ರಾಮದಲ್ಲಿ ಕೆಸರು, ಕೊಳಚೆ ಇದೆ. ಕಿರು ನೀರು ಸರಬರಾಜು ಯೋಜನೆ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಬಂದಾಗಿದೆ. ಗ್ರಾಮದ ಜನ ಕೊಳವೆಬಾವಿ ನೀರನ್ನೇ ಅವಲಂಬಿಸಿದ್ದಾರೆ. ಶಾಲೆಯ ಎದುರಿನ ಕೊಳವೆಬಾವಿಯ ನೀರು ಕುಡಿಯಬಾರದು ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ಗ್ರಾಮಸ್ಥರಿಗೆ ಮೊದಲೇ ತಿಳಿಸಿದ್ದರು.
ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥ: ಭತ್ತದ ನಾಟಿ ಮಾಡಲು ಬಂದಿರುವ ಬಂಗಾಲಿ ಕೃಷಿ ಕಾರ್ಮಿಕರು ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದಾರೆ.
ವಾಂತಿಭೇದಿಗೆ ಒಳಗಾದ 13 ಕಾರ್ಮಿಕರನ್ನು ಸುರಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರನ್ನು ರಾಯಚೂರು ಮತ್ತು ಒಬ್ಬರನ್ನು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಲಾಗಿದೆ.
‘ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ಘಟನೆಗೆ ಕಲುಷಿತ ಆಹಾರ ಸೇವನೆ ಕಾರಣ ಎಂದು ಪರೀಕ್ಷೆಯಿಂದ ತಿಳಿದುಬಂದಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ ತಿಳಿಸಿದರು.
ಶಾಸಕ ಭೇಟಿ: ಗ್ರಾಮಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಶಾಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು. ಕುಡಿಯುವ ನೀರಿನ ಘಟಕ ಶೀಘ್ರ ಆರಂಭಿಸಬೇಕು. ಸ್ವಚ್ಛತೆ ಕಾಪಾಡಬೇಕು. ಎಲ್ಲ ಕೊಳವೆಬಾವಿ ನೀರನ್ನು ಪರೀಕ್ಷೆಗಾಗಿ ಲ್ಯಾಬ್‍ಗೆ ಕಳಿಸಿ ಎಂದು ಸೂಚಿಸಿದರು.
ಬಿಸಿಸಿಐ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಮುಖಂಡ ಮಲ್ಲಣ್ಣ ಸಾಹುಕಾರ ಮುಧೋಳ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ಪಿಡಿಒ ಚಂದಪ್ಪನಾಯಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.