ಗುರುವಾರ , ಜೂನ್ 30, 2022
25 °C

ಗಣಿಬಾಧಿತ ಪ್ರದೇಶಗಳಿಗೆ ಡಿಎಂಎಫ್‍ಟಿ ಹಣ: ಜಿಲ್ಲಾಧಿಕಾರಿ ರಾಗಪ್ರಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಸಂಗ್ರಹಿಸಿರುವ ₹ 66 ಲಕ್ಷ ಹಣವನ್ನು ಕೊರೊನಾ ನಿಯಂತ್ರಣ ಹಾಗೂ ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ. ಆರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕರೆದಿದ್ದ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ಮೂರು ಪಟ್ಟು ಅಂದರೆ ₹ 1.68 ಕೋಟಿ ಅಂದಾಜು ಕ್ರಿಯಾ ಯೋಜನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೇರ ಗಣಿ ಬಾಧಿತ ಪ್ರದೇಶಗಳಿಗೆ ಶೇಕಡ 60ರಷ್ಟು ಹಣ ಮತ್ತು ಗಣಿಬಾಧಿತ ಇತರೆ ಪ್ರದೇಶಗಳಿಗೆ 40 ರಷ್ಟು ಹಣ ಮೀಸಲಿರಿಸಲಾಗಿದೆ. ಈ ಪೈಕಿ ನೇರ ಗಣಿಬಾಧಿತ ಪ್ರದೇಶಗಳ ಶೇಕಡ 60ರಷ್ಟು ಹಣದಲ್ಲಿ ₹ 66 ಲಕ್ಷ ನಿಧಿಯನ್ನು ಕೊರೊನಾ ನಿಯಂತ್ರಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಟ್ರಸ್ಟ್‌ನ ಉದ್ದೇಶವು ಜಿಲ್ಲಾ ಖನಿಜ ಪ್ರತಿಷ್ಠಾನ ಫಂಡ್‌ನಿಂದ ಗಣಿಬಾಧಿತ ಪ್ರದೇಶಗಳಿಗೆ ಗಣಿಗುತ್ತಿಗೆದಾರರಿಂದ ಪ್ರತ್ಯೇಕವಾಗಿ ಸಂಗ್ರಹಣೆ ಮಾಡಿದ ಹಣದಿಂದ ಮೂಲಸೌಕರ್ಯಗಳಾದ ಶಿಕ್ಷಣ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ನಿರ್ಮಾಣ, ಆರೋಗ್ಯ ತಪಾಸಣೆ, ಮಾಲಿನ್ಯ ನಿಯಂತ್ರಣ ಪರೀಕ್ಷೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲಿಡುವುದಾಗಿದೆ. ಆದರೆ, ಈ ಬಾರಿ ಕೊರೊನಾ ನಿಯಂತ್ರಣಕ್ಕೆ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಿಲ್ಪಾಶರ್ಮಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಡಾ.ಕೆ.ಎನ್.ಪುಷ್ಪಾವತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕಿ ರೇಖಾ ಎನ್.ಮ್ಯಾಗೇರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.