ಸೋಮವಾರ, ಜೂನ್ 14, 2021
27 °C
40ಕ್ಕೂ ಹೆಚ್ಚುಅಂತ್ಯಸಂಸ್ಕಾರ ನೆರವೇರಿಸಿದ ಯುವಕರು

ಕೋವಿಡ್‌: ಮೃತರ ಅಂತ್ಯಕ್ರಿಯೆಗೆ ಮುಂದಾದ ಪಿಎಫ್‌ಐ

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

Prajavani

ಶಹಾಪುರ (ಯಾದಗಿರಿ ಜಿಲ್ಲೆ): ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಸಂಬಂಧಿಕರು ಪಡೆದು ಅಂತ್ಯಸಂಸ್ಕಾರ ಮಾಡಲೂ ಹಿಂಜರಿಯುತ್ತಿರುವ ಸಂದರ್ಭದಲ್ಲಿ ನಗರದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಯಾವುದೇ ಹಣ ಪಡೆಯದೇ ಉಚಿತವಾಗಿ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ.

ಇದಕ್ಕಾಗಿ 40 ಜನರ ತಂಡವನ್ನು ಕಟ್ಟಿಕೊಂಡಿದ್ದು, ಇಲ್ಲಿಯವರೆಗೆ ವಿವಿಧ ಧರ್ಮ, ಜಾತಿಯ 40ಕ್ಕೂ ಅಧಿಕ ವ್ಯಕ್ತಿಗಳ ಶವವನ್ನು ಕೋವಿಡ್ ನಿಯಮಾವಳಿಯಂತೆ ಅಂತ್ಯಸಂಸ್ಕಾರ ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಪಿಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಮುಖ್ತಾರ್ ಕುರಕುಂದಿ, ’ಕಳೆದ ವರ್ಷ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಗಳನ್ನು ಜೆಸಿಬಿ ಯಂತ್ರದ ಮೂಲಕ ತಳ್ಳಿ ಅಂತ್ಯಸಂಸ್ಕಾರ ನಡೆಸುವುದನ್ನು ಕಂಡು ನನ್ನ ಮನಸ್ಸು ಕಲುಕಿತು. ನಮಗೆ ಯಾವುದೇ ಜಾತಿ, ಧರ್ಮ ಸಾವಿನಲ್ಲಿ ಬೇಕಾಗಿಲ್ಲ. ಮನುಜ ಪಥದಲ್ಲಿ ಸಾಗಬೇಕು ಎಂಬ ನಿರ್ಧಾರವನ್ನು ನಮ್ಮ ಸಂಘಟನೆಯ ಸದಸ್ಯರ ಜೊತೆ ಚರ್ಚೆ ನಡೆಸಿದಾಗ ಎಲ್ಲರೂ ಧ್ವನಿಗೂಡಿಸಿದರು. ಅದರಂತೆ ಅಗತ್ಯ ತರಬೇತಿಯನ್ನು ಆರೋಗ್ಯ ಇಲಾಖೆ ನಮಗೆ ನೀಡಿತು‘ ಎಂದರು.

‘ಕೋವಿಡ್‌ನಿಂದ ಮೃತಪಟ್ಟಾಗ ಅವರ ರಕ್ತ ಸಂಬಂಧಿಗಳು ಅಂತ್ಯಕ್ರಿಯೆ ನೆರವೇರಿಸಲು ಮುಂದೆ ಬರಲು ಹಿಂದೇಟು ಹಾಕಿದಾಗ ಆರೋಗ್ಯ ಇಲಾಖೆ ಅಧಿಕಾರಿಗಳು ನಮಗೆ ಮಾಹಿತಿ ರವಾನಿಸುತ್ತಾರೆ. ಅಲ್ಲದೆ ಪಿಪಿಇ ಕಿಟ್ ವಿತರಿಸುತ್ತಾರೆ. 4 ಜನರಂತೆ ತಂಡಗಳನ್ನು ರಚಿಸಿಕೊಂಡು ಸ್ವಂತ ವೆಚ್ಚದಲ್ಲಿ ವಾಹನ ಮೂಲಕ ಮೃತ ದೇಹದ ಬಳಿ ತೆರಳಿ ಅಂತ್ಯಕ್ರಿಯೆ ನೆರವೇರಿಸುತ್ತೇವೆ’ ಎಂದು ತಿಳಿಸಿದರು.

'ಶಹಾಪುರ ನಗರದಲ್ಲಿ ಎರಡು ದಿನದ ಹಿಂದೆ ಒಬ್ಬ ಯುವಕ ಕೊವಿಡ್‌ನಿಂದ ಮೃತಪಟ್ಟ. ಅವರ ರಕ್ತ ಸಂಬಂಧಿಕರು ಹಾಗೂ ಅಕ್ಕಪಕ್ಕದ ಮನೆಯವರೂ ಅತ್ತ ಸುಳಿಯಲಿಲ್ಲ. ಆಗ ನೇರವಾಗಿ ಪಿಎಫ್‌ಐ ತಂಡವು ತೆರಳಿ ಅಂತ್ಯಸಂಸ್ಕಾರ ನೆರವೇರಿಸಿತು. ಅಲ್ಲದೆ ಕುಟುಂಬದ ಸದಸ್ಯರಿಂದಲೂ ನಾವು ನಯಾ ಪೈಸೆ ತೆಗೆದುಕೊಳ್ಳುವುದಿಲ್ಲ. ಸಹಾಯಕ್ಕಾಗಿ ಮೊ: 70197 87874 ಕರೆ ಮಾಡಬಹುದು‘ ಎಂದು ತಂಡದ ಸಯ್ಯದ್ ಇಸಾಕ್ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು