ಶುಕ್ರವಾರ, ಅಕ್ಟೋಬರ್ 23, 2020
21 °C

ಶಹಾಪುರ: ಹೆಚ್ಚು ತೇವಾಂಶದಿಂದ ಹಾಳಾಯ್ತು ಹತ್ತಿ ಬೆಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಪುರ: ಪ್ರಸಕ್ತ ಬಾರಿ ನಿರೀಕ್ಷೆಗೂ ಮೀರಿ ಹೆಚ್ಚಿನ ಪ್ರಮಾಣ ಮಳೆಯಾಗಿದ್ದರಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಹತ್ತಿ ಬೆಳೆ ಹೆಚ್ಚಿನ ತೇವಾಂಶದಿಂದ ಹಾನಿಯಾಗಿದೆ.

ಕಳೆದ ವರ್ಷ ಎಪಿಎಂಸಿ ದಾಖಲೆಯ ಪ್ರಕಾರ ಶಹಾಪುರ ತಾಲ್ಲೂಕಿನಲ್ಲಿ ₹200 ಕೋಟಿಗೂ ಅಧಿಕ ಹತ್ತಿ ಮಾರಾಟದ ವಹಿವಾಟು ಆಗಿತ್ತು. ಉತ್ತಮ ಇಳುವರಿ ಹಾಗೂ ಹೆಚ್ಚಿನ ಲಾಭದ ನಿರೀಕ್ಷೆಯೊಂದಿಗೆ ಪ್ರಸಕ್ತ ವರ್ಷ ರೈತರು 44 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದರು. ಕಾಯಿ ಹಾಗೂ ಹೂ ಬಿಡುವ ಹಂತದಲ್ಲಿ ಸೆಪ್ಟೆಂಬರ್ ಕೊನೆ ವಾರದಲ್ಲಿ ಸುರಿದ ಭಾರಿ ಮಳೆಗೆ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ಜೋರಾದ ಮಳೆಗೆ ಫಲ ಉದುರಿ ಕಾಯಿ ಕೂಡಾ ಕಪ್ಪು ಬಣ್ಣಕ್ಕೆ ತಿರುಗಿವೆ. ಇವೆಲ್ಲದರ ನಡುವೆ ಜಮೀನಿನಲ್ಲಿ ನೀರು ನಿಂತು ಬೆಳೆ ಕೊಳೆತು ಒಣಗಿವೆ. ತಾಲ್ಲೂಕಿನ ಮದ್ರಕಿ, ಮುಡಬೂಳ, ಅಣಬಿ, ಶಿರವಾಳ, ಹುಲಕಲ್ ಸೇರಿದಂತೆ ಕಪ್ಪು ಮಣ್ಣು ಮಿಶ್ರಿತ ಜಮೀನುಗಳಲ್ಲಿ ಹೆಚ್ಚಿನ ನಷ್ಟ ಉಂಟಾಗಿದೆ ಎನ್ನುತ್ತಾರೆ ರೈತ ಮುಖಂಡ ಅಶೋಕರಾವ್ ಮಲ್ಲಾಬಾದಿ.

ಕೊರೊನಾ ಹಾವಳಿ ಮತ್ತು ಬ್ಯಾಂಕ್ ಸಾಲ ಮನ್ನಾ ಗೊಂದಲದಲ್ಲಿ ರೈತರು ಸಿಲುಕಿದ್ದರಿಂದ ನಿಗದಿತ ಅವಧಿಯಲ್ಲಿ ಬ್ಯಾಂಕಿಗೆ ತೆರಳಿ ಕೃಷಿ ಸಾಲ ತಿರುವಳಿ ಮಾಡಿ ಬೆಳೆ ವಿಮೆ ಮಾಡುವುದರಿಂದ ದೂರ ಸರಿದರು. ಅಲ್ಲದೆ ಖಾಸಗಿ ವಿಮೆ ಕಂಪನಿ ಬಳಿ ತೆರಳಿ ಬೆಳೆ ವಿಮೆ ಮಾಡಿಸಲು ರೈತರು ಹಿಂದೇಟು ಹಾಕಿದರು. ಇದರಿಂದ ಹತ್ತಿ ಬೆಳೆಗೆ ವಿಮೆ ಇಲ್ಲದಂತೆ ಆಗಿದೆ ಎನ್ನುತ್ತಾರೆ ರೈತ ಶರಣಪ್ಪ.

ಬಂಪರ್ ಭತ್ತ: ನಿಷೇಧಿತ ಬೆಳೆ ಭತ್ತ ಮಾತ್ರ ಸದ್ಯಕ್ಕೆ ಚೆನ್ನಾಗಿ ಬಂದಿದೆ. ಹದಭರಿತ ಮಳೆಯಿಂದ ಹುಲುಸಾಗಿ ಬೆಳೆದು ತೆನೆಕಟ್ಟು ಹಂತಕ್ಕೆ ತಲುಪಿದೆ. ಹೆಚ್ಚಿನ ರೋಗ ಕಾಣಿಸದಿದ್ದರೆ ಬಂಪರ್ ಇಳುವರಿ ಬರುವ ನಿರೀಕ್ಷೆಯಿದೆ ಎನ್ನುತ್ತಾರೆ ಭತ್ತ ಬೆಳೆದ ರೈತರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು