ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಹತ್ತಿ ಖರೀದಿ ಕೇಂದ್ರ ನವೆಂಬರ್ 23ರಿಂದ ಆರಂಭ

ರೈತರಿಂದ 100 ಕ್ವಿಂಟಲ್ ಭತ್ತ ಖರೀದಿಗೆ ಅನುಮೋದನೆ: ಡಿಸಿ
Last Updated 21 ನವೆಂಬರ್ 2020, 16:23 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ (ನ. 23ರಿಂದ) ಹತ್ತಿ ಖರೀದಿ ಕೇಂದ್ರಗಳು ಹಾಗೂ ನವೆಂಬರ್ 30 ರಿಂದ ಭತ್ತ ಖರೀದಿಗೆ ನೋಂದಣಿ ಕೇಂದ್ರಗಳು ಆರಂಭಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್., ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರ ನಿರ್ದೇಶನ ನೀಡಿರುವಂತೆ ಪ್ರತಿ ಎಕರೆಗೆ ಇದೀಗ 15 ರಿಂದ 40 ಕ್ವಿಂಟಲ್ ಭತ್ತವನ್ನು ಬೆಂಬಲ ಬೆಲೆಯಡಿ ಖರೀದಿಸಲು ನೋಂದಣಿ ಕಾರ್ಯ ಆರಂಭವಾಗಲಿದೆ. ಸಭೆಯಲ್ಲಿ ರೈತ ಮುಖಂಡರು 40 ಕ್ವಿಂಟಲ್‍ಗೆ ಬದಲಾಗಿ ಗರಿಷ್ಠ 100 ಕ್ವಿಂಟಲ್ ಭತ್ತವನ್ನು ಖರೀದಿಸಿದರೆ, ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ. ಈ ಹಿಂದೆ 100 ಕ್ವಿಂಟಲ್ ಭತ್ತ ಖರೀದಿಸಲಾಗಿದೆ ಎಂದು ಸಲಹೆ ನೀಡಿರುವುದನ್ನು ಪರಿಗಣಿಸಿ, 100 ಕ್ವಿಂಟಲ್ ಭತ್ತ ಖರೀದಿಸಲು ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ಹೆಚ್ಚಿನ ಖರೀದಿ ಕೇಂದ್ರಗಳ ಅಗತ್ಯವಿದ್ದಲ್ಲಿ ಅವುಗಳನ್ನು ತೆರೆಯಲಾಗುವುದು. ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜ ತಡೆಗೆ ಜಿಲ್ಲಾ ಕೃಷಿ ಇಲಾಖೆಯ ಅಧಿಕಾರಿಗಳು ಜಾಗೃತರಾಗಿ ಕಾರ್ಯನಿರ್ವಹಿಸಬೇಕು. ನಕಲಿ ಬೀಜ ಮಾರಾಟಗಾರರನ್ನು ಕೂಡಲೇ ಗುರುತಿಸಿ ಅವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು. ಕಂದಾಯ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ನಕಲಿ ಬೀಜ ಮಾರಾಟಗಾರರನ್ನು ಕೂಡಲೇ ಪತ್ತೆಹಚ್ಚುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ತಿಳಿಸಿದರು.

ಜಿಲ್ಲೆಯ ದೂರದ ಪ್ರದೇಶಗಳಿಗೆ ತೆರಳಿ ಪಶುಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಮೊಬೈಲ್ ಕ್ಲಿನಿಕ್‍ಗಳನ್ನು ಉಪಯೋಗಿಸಿಕೊಳ್ಳುವಂತೆ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಭತ್ತ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಜಿಲ್ಲೆಯಲ್ಲಿ ₹1,900 ನಿಗದಿ ಪಡಿಸಲಾಗಿದೆ. ರೈತರಲ್ಲಿ ಅದಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಿದರೆಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ನಿಗದಿ ಪಡಿಸಿದ ಹಣಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವ ಡೀಲರ್‌ಗಳನ್ನು ಪತ್ತೆ ಮಾಡುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ತಿಳಿಸಿದರು.

ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೇವಿಕಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ರೈತ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT