ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಮ್‌ಡಿಸಿವಿರ್, ಆಮ್ಲಜನಕ ಪೂರೈಕೆಗೆ ಕ್ರಮ

ಜಿಲ್ಲೆಯ ಜನರಿಗೆ ಸಚಿವ ಪ್ರಭು ಚವ್ಹಾಣ ಭರವಸೆ; ವಿವಿಧೆಡೆ ಅಧಿಕಾರಿಗಳ ಸಭೆ
Last Updated 8 ಮೇ 2021, 3:48 IST
ಅಕ್ಷರ ಗಾತ್ರ

ಯಾದಗಿರಿ:ಪಶುಸಂಗೋಪನೆ ಸಚಿವ ಪ್ರಭು ಬಿ.ಚವಾಣ್‌ ಅವರು ಜಿಲ್ಲೆಯಲ್ಲಿ ಶುಕ್ರವಾರ ವಿವಿಧ ತಾಲ್ಲೂಕುಗಳಲ್ಲಿ ಸಭೆ ನಡೆಸಿದರು. ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮೊದಲಿಗೆಸುರಪುರದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣ ಕುರಿತಂತೆ ಸುರಪುರ ತಾಲ್ಲೂಕಿನ ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಜಿಲ್ಲೆಯ ಸೋಂಕಿತರಿಗೆ ಅಗತ್ಯವಿ ರುವ ರೆಮ್‍ಡೆಸಿವಿರ್ ಹಾಗೂ ಆಮ್ಲಜನಕ ಪೂರೈಕೆಗೆ ಕೂಡಲೇ ಕ್ರಮವಹಿಸಲಾಗು ವುದು ಎಂದು ಭರವಸೆ ನೀಡಿದರು.

ರೆಮ್‍ಡೆಸಿವಿರ್ ಹಾಗೂ ಆಮ್ಲಜನಕ ನಿರ್ವಹಣೆ ಹೊಣೆಹೊತ್ತಿರುವ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಶಹಾಪುರ ಶಾಸಕ ಶರಣಪ್ಪ ದರ್ಶನಾಪುರ, ಜಿಲ್ಲೆಗೆ ಅಗತ್ಯವಿರುವ ರೆಮ್‌ಡಿಸಿವರ್ ಔಷಧಿ ದೊರೆತಿಲ್ಲ. ಲಭ್ಯವಿರುವ ಔಷಧಿಯನ್ನು ತಾಲ್ಲೂಕುವಾರು ಪೂರೈಸುತ್ತಿಲ್ಲ ಎಂದು ಹೇಳಿದರು. ಇದಕ್ಕೆ ಸುರಪುರ ಶಾಸಕ ರಾಜೂಗೌಡ ಅವರು ದನಿಗೂಡಿಸಿದರು.

ಈ ವೇಳೆ ಸಚಿವರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಕಾಮಶೆಟ್ಟಿ ಅವರಿಗೆ ಮಾಹಿತಿ ಕೇಳಲಾಗಿ, ಜಿಲ್ಲೆಯಲ್ಲಿ ರೆಮ್‍ಡೆಸಿವಿರ್ ಔಷಧಿ ಸಮಸ್ಯೆಯಿಲ್ಲ. ಸಮರ್ಪಕವಾಗಿ ಪೂರೈಕೆಯಾಗುತ್ತದೆ ಎಂದು ವಿವರಿಸಿದರು. ಇದರಿಂದ ಸಮಾಧಾನಗೊಳ್ಳದ ಶಾಸಕ ದರ್ಶನಾಪುರ ಅವರು, ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜುಗೌಡ ಅವರು, ಕೋವಿಡ್ ಸೋಂಕಿತರನ್ನು ಮೊರಾರ್ಜಿ ದೇಸಾಯಿಯಂಥ ವಸತಿ ಶಾಲೆಗಳಲ್ಲಿ ಕ್ವಾರಂಟೈನ್‍ನಲ್ಲಿಡಬೇಕು. ಇಲ್ಲದಿದ್ದರೆ ಕೋವಿಡ್ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂದು ನೋವಿನಿಂದ ನುಡಿದರು. ಕೊಡೇಕಲ್‍ನಲ್ಲಿ ತನ್ನ ಸ್ವಂತ ಖರ್ಚಿನಲ್ಲಿ 30 ಬೆಡ್ ಸಾಮರ್ಥ್ಯದ ಕೋವಿಡ್ ಅಸ್ಪತ್ರೆ ನಿರ್ಮಿಸುತ್ತಿರುವುದಾಗಿ ಇದೇ ಸಂದರ್ಭದಲ್ಲಿ ಹೇಳಿದರು.

ಸಚಿವ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಚೆಕ್‍ಪೋಸ್ಟ್ ಬಲಪಡಿಸಿ, ಒಳಬರುವವರ ತಪಾಸಣೆಯನ್ನು ಕಟ್ಟುನಿಟ್ಟಾಗಿ ಮಾಡಬೇಕೆಂದು ಸಚಿವರು ಸೂಚಿಸಿದರು. ಪ್ರಸಕ್ತ ಬೇಸಿಗೆ ಜೊತೆಗೆ ಕೋವಿಡ್ ಇರುವುದರಿಂದ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲೆಯ ಜನತೆ ನನಗೆ ತುಂಬಾ ಸಹಕಾರ ನೀಡಿದ್ದೀರಿ ಎಂದು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.

ಸಭೆಯಲ್ಲಿ ಡಿವೈಎಸ್‍ಪಿ ವೆಂಕಟೇಶ್ ಉಗಿಬಂಡಿ, ಉಪವಿಭಾಗಾಧಿಕಾರಿ ಸೋಮನಾಳ, ತಹಶೀಲ್ದಾರ್ ಗ್ರೇಡ್-2 ಸೋಫಿಯಾ ಸುಲ್ತಾನ, ತಾಲ್ಲೂಕು ವೈದ್ಯಾಧಿಕಾರಿ ಹರ್ಷವರ್ಧನ್ ರಫಗಾರ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಅಮರೇಶ್ ಇದ್ದರು.

ಸಚಿವ– ಶಾಸಕರ ನಡುವೆ ಜಟಾಪಟಿ
ಸುರಪುರ:
‘ರೆಮ್‍ಡೆಸಿವಿರ್ ಇಂಜೆಕ್ಷನ್, ಅಮ್ಲಜನಕ ಸಮಸ್ಯೆ ಇಲ್ಲ ಅಂತ ಸರ್ಕಾರ ಹೇಳುತ್ತದೆ. ಅಗತ್ಯಕ್ಕೆ ತಕ್ಕಷ್ಟು ಲಭ್ಯ ಇಲ್ಲ ಅಂತ ಜಿಲ್ಲಾ ಆರೋಗ್ಯಾಧಿಕಾರಿ ಹೇಳುತ್ತಾರೆ. ಈ ಗೊಂದಲದಿಂದ ಜಿಲ್ಲೆಯಲ್ಲಿ ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮತ್ತು ಸುರಪುರ ಶಾಸಕ ರಾಜೂಗೌಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಮಾರ್ಗಸೂಚಿ ಸಭೆ ಆರಂಭವಾಗುತ್ತಿದ್ದಂತೆ, ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ನಿರ್ಲಕ್ಷ ವಹಿಸಿದೆ. ಸರ್ಕಾರ ಸರಿಯಾದ ಕ್ರಮಕೈಗೊಳ್ಳದೆ ಜನರ ಜೀವದೊಂದಿಗೆ ಚೆಲ್ಲಾಟ ನಡೆಸಿದೆ’ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸಚಿವ ಚವ್ಹಾಣ ಅವರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಆರೋಗ್ಯಾಧಿಕಾರಿಗೆ ತರಾಟೆಗೆ ತೆಗೆದುಕೊಳ್ಳುತ್ತಿರುವುದನ್ನು ಗಮನಿಸಿದ ಸಚಿವರು, ‘ಎಲ್ಲಾ ಕಡೆ ಇಂಜೆಕ್ಷನ್ ಮತ್ತು ಆಮ್ಲಜನಕ ಕೊರತೆ ಇದೆ ಬಿಡಿ. ಬೇರೆ ವಿಷಯಕ್ಕೆ ಬನ್ನಿ. ನಾನು ಹೋಗಬೇಕು’ ಎಂದು ಸಚಿವರು ಅವಸರ ಮಾಡಿದ್ದು ಶಾಸಕರ ಕೋಪಕ್ಕೆ ಕಾರಣವಾಯಿತು.

‘ಯಾವಾಗಲೋ ಬಂದು ಸಭೆ ಮಾಡಿ ಹೋದರೆ ನಡೆಯಲ್ಲ. ಇದು ನಮ್ಮ ಕ್ಷೇತ್ರದ ಜನರ ಪ್ರಾಣ ರಕ್ಷಣೆ ಪ್ರಶ್ನೆ. ನಿಮಗೇನು ಗೊತ್ತು’ ಎಂದು ದರ್ಶನಾಪುರ ಸಚಿವರ ವಿರುದ್ದ ಕೆಂಡಾಮಂಡಲವಾದರು. ಈ ವೇಳೆ ಶಾಸಕ ಮತ್ತು ಸಚಿವರ ನಡುವೆ ಜಟಾಪಟಿ ತಾರಕಕ್ಕೇರಿತ್ತು. ಏಕವಚನದಲ್ಲಿ ಮಾತಿನ ಚಕಮಕಿಯೇ ನಡೆಯಿತು. ಶಾಸಕ ರಾಜೂಗೌಡ ಮಧ್ಯೆ ಪ್ರವೇಶಿಸಿ ಪರಸ್ಥಿತಿ ತಿಳಿಗೊಳಿಸಿದರು.

ಶಾಸಕ ರಾಜೂಗೌಡ ಮಾತನಾಡಿ, ‘ಶಹಾಪುರ, ಹುಣಸಗಿ, ಸುರಪುರಕ್ಕೆ ಅಗತ್ಯಕ್ಕೆ ತಕ್ಕಷ್ಟು ರೆಮ್‌ಡಿಸಿವರ್ ಇಂಜೆಕ್ಷನ್ ನೀಡುವಲ್ಲಿ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ನೀವೇ ಈ ರೀತಿ ಮಾಡಿದರೆ ಜನರ ಪ್ರಾಣ ಉಳಿಸುವುದಾದರು ಹೇಗೆ? ಈ ವಿಷಯ ದಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ’ ಎಂದು ದೂರಿದರು.

ಪ್ರಭಾರಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಹರ್ಷವರ್ಧನ ರಫುಗಾರ ಮಾತನಾಡಿ, ‘ಸುರಪುರ, ಹುಣಸಗಿ ಎರಡು ತಾಲ್ಲೂಕು ಸೇರಿ ಒಟ್ಟು 1251 ಪ್ರಕರಣ ಪತ್ತೆಯಾಗಿವೆ. ಈ ಪೈಕಿ 721 ಜನರಿಗೆ ಹೋಂ ಕ್ವಾರಂಟೈನ್ ಸೂಚಿಸಲಾಗಿದೆ. 7 ಜನ ಮೃತಪಟ್ಟಿದ್ದಾರೆ. ವಸತಿ ನಿಲಯದಲ್ಲಿ ಹೆಚ್ಚುವರಿಯಾಗಿ 100 ಬೆಡ್‍ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದರು.

ಉಪ ವಿಭಾಗಾಧಿಕಾರಿ ಶಂಕರ ಗೌಡ ಸೋಮನಾಳ, ಹುಣಸಗಿ ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ, ಗ್ರೇಡ್-2 ತಹಶೀಲ್ದಾರ್ ಸೋಫಿಯಾಸುಲ್ತಾನ ತಾಲ್ಲೂಕು ಪಂಚಾಯಿತಿ ಇಒ ಅಮರೇಶ ಇದ್ದರು.

ಹದಗೆಟ್ಟ ವೆಂಟಿಲೆಟರ್‌; ದರ್ಶನಾಪುರ ಆಕ್ರೋಶ

ಶಹಾಪುರ: ತಾಲ್ಲೂಕಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ಇನ್ನು ಅಧಿಕಾರಿ ನೇಮ ಕವಾಗಿಲ್ಲ. ಈ ಕುರಿತು ಜನಪ್ರತಿನಿಧಿಗಳು ಪ್ರಶ್ನಿಸಿದಾಗ ಅಧಿಕಾರಿಗಳು ಮೌನ ವಹಿಸಿದ್ದು ಶುಕ್ರವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಕಂಡು ಬಂತು.

ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಅಧಿಕಾರಿಗಳು ತೆಗೆದುಕೊ ಳ್ಳಬೇಕು. ಔಷಧಿ, ಆಮ್ಲಜನಕ, ಕೊರತೆ ಇದ್ದರೆ ತಿಳಿಸಿ. ತ್ವರಿತವಾಗಿ ಸರಬರಾಜು ಮಾಡಲಾಗುವುದು ಎಂದು ಸಚಿವ ಪ್ರಭು ಚವ್ಹಾಣ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಶಾಸಕ ಶರಣಬಸಪ್ಪ ದರ್ಶನಾಪುರ ಅವರು ಸಚಿವ ಪ್ರಭು ಚವ್ಹಾಣ ಅವರನ್ನು ತರಾಟೆಗೆ ತೆಗೆದುಕೊಂಡು ಪ್ರಶ್ನೆಗಳ ಸುರಿಮಳೆಗೈದರು. ಸರ್ಕಾರಿ ಆಸ್ಪತ್ರೆಯಲ್ಲಿ 10 ವೆಂಟಿಲೇಟರ್ ಸ್ಥಾಪಿಸಿದ್ದಿರಿ. ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಇನ್ನುಳಿದವು ಯಾಕೆ ಆರಂಭಿಸುತ್ತಿಲ್ಲ. ಖಾಸಗಿ ಆಸ್ಪತ್ರೆಗೆ ಎಷ್ಟು ರೋಗಿಗಳನ್ನು ಶಿಫ್ಟ್ ಮಾಡಿದ್ದಿರಿ. ಆಮ್ಲಜನಕ ಕೊರತೆ, ಇಂಜಿಕ್ಷನ ಇಲ್ಲ.ಬೆಡ್ ಇಲ್ಲ. ಹೀಗೆ ಹಲವು ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು.

‘ಕೆಂಭಾವಿ ಹಾಗೂ ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರನ್ನು ನೇಮಿಸಿ. ಔಷಧಿ ಕೊರತೆಯಾದರೆ ನಾವು ದೇಣಿಗೆ ಹಾಗೂ ಸ್ವಂತ ಹಣ ನೀಡಿ ಔಷಧಿ ಹಾಗೂ ಇಂಜಿಕ್ಷನ ಖರೀದಿಸಲು ನೆರವು ನೀಡುವೆ. ಅನವಶ್ಯಕವಾಗಿ ಯಾದಗಿರಿ ಜಿಲ್ಲೆಗೆ ಯಾಕೆ ಕಳುಹಿಸಿ ಜೀವ ಕೊಲ್ಲುತ್ತಿದ್ದಿರಿ ಎಂದು ಶಾಸಕ ದರ್ಶನಾಪುರ ಆಕ್ರೋಶ ವ್ಯಕ್ತಪಡಿಸಿದರು.

ಡಾ.ಇಂದುಮತಿ ಪಾಟೀಲ, ಶಂಕರಗೌಡ,ತಹಶೀಲ್ದಾರ ಜಗನಾಥ ರಡ್ಡಿ, ತಾಪಂ ಇಓ ಜಗನಾಥಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಣಮಂತರಾಯ ದೊರೆ ದಳಪತಿ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಮಲ್ಲಿಕಾರ್ಜುನ ಚಿಲ್ಲಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT