ಸೋಮವಾರ, ಆಗಸ್ಟ್ 2, 2021
20 °C

ಯಾದಗಿರಿ | ಕೋವಿಡ್ ಲ್ಯಾಬ್ ಆರಂಭ‌ ಶೀಘ್ರ, ದಿನಕ್ಕೆ 300 ಮಾದರಿ ಪರೀಕ್ಷಿಸುವ ಗುರಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯಲ್ಲಿ ಅತಿ ಶೀಘ್ರ ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್‌ಟಿ-ಪಿಸಿಆರ್) ಪ್ರಯೋಗಾಲಯ ಆರಂಭವಾಗಲಿದ್ದು, ಬಾಕಿ ವರದಿಗಳ ಪ್ರಮಾಣ ತಗ್ಗಲಿದೆ. 

ಸದ್ಯ ಜಿಲ್ಲೆಯಲ್ಲಿ 18,414 ಗಂಟಲು ದ್ರವ ಮಾದರಿ ಸಂಗ್ರಹಿಸಿದ್ದು, ಅದರಲ್ಲಿ 16,977 ವರದಿ ನೆಗೆಟಿವ್ ಬಂದಿದೆ. 1,437 ಬಾಕಿ ಉಳಿದಿದೆ. 642 ಕೋವಿಡ್‌ ದೃಢಪಟ್ಟಿದೆ. ಇಂದಿಗೂ ಕೊರೊನಾ ಪರೀಕ್ಷೆಗಾಗಿ ಬೇರೆ ಜಿಲ್ಲೆಯನ್ನು ಅವಲಂಬಿಸಬೇಕಿದೆ. 

ಇನ್ನೂ ಒಂದು ವಾರದಲ್ಲಿ ಸಂಪೂರ್ಣ ಇಲ್ಲಿಯೇ ಪ್ರಯೋಗಾಲಯ ಆರಂಭ ಆಗುವುದರಿಂದ ಕಲಬುರ್ಗಿ, ಬೆಂಗಳೂರನ್ನು ಅವಲಂಬಿಸುವ ತಾಪತ್ರಯ ತಪ್ಪಲಿದೆ. ಅಲ್ಲದೇ, ಆಯಾ ದಿನಗಳಂದೇ ಫಲಿತಾಂಶ ಕೈ ಸೇರುವುದರಿಂದ ಅನಗತ್ಯ ಕಾಲಕ್ಷೇಪಕ್ಕೂ ಕಡಿವಾಣ ಬೀಳಲಿದೆ. ನೆಗೆಟಿವ್‌ ಬಂದಲ್ಲಿ ಶಂಕಿತರನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಬಹುದು.

‘ಪ್ರಯೋಗಾಲಕ್ಕೆ ಬೇಕಾಗುವ ತಜ್ಞರನ್ನು ಬೇರೆ ಜಿಲ್ಲೆಯಿಂದ ಎರವಲು ಪಡೆಯಲಾಗಿದೆ. ಅವರ ಮೂಲಕ ಸದ್ಯ ಲ್ಯಾಬ್‌ ನಡೆಯಲಿದೆ. ಒಬ್ಬರು ಸೂಕ್ಷ್ಮಜೀವಿ ತಜ್ಞ, ಇಬ್ಬರು ವಿಜ್ಞಾನಿಗಳು, 4 ಲ್ಯಾಬ್‌ ಟೆಕ್ನಿಷಿಯನ್, ಇಬ್ಬರು ಕಂಪ್ಯೂಟರ್‌ ಆಪರೇಟರ್‌, ಮೂವರು ಆಟೆಂಡರ್‌ಗಳನ್ನು ನೇಮಿಸಿಕೊಳ್ಳಲಾಗಿದೆ’ ಎಂದು ಯಾದಗಿರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿಶೇಷ ಅಧಿಕಾರಿ ಡಾ.ಶಂಕರಗೌಡ ಐರೆಡ್ಡಿ. 

‘6ರಿಂದ 8 ಗಂಟೆ ಒಂದೊಂದು ಶಿಫ್ಟ್‌ ಇರಲಿದ್ದು, ಸುಮಾರು 96 ಪರೀಕ್ಷೆ ಮಾಡಬಹುದು. ದಿನಕ್ಕೆ 200ರಿಂದ 300 ತನಕ ವರದಿಗಳ ಫಲಿತಾಂಶ ನಿರೀಕ್ಷಿಸಲಾಗಿದೆ. ಕೂಲಿಂಗ್‌ ಸಿಸ್ಟಮ್‌ ಮೂಲಕ ಹಲವರ ವರದಿ ಪರೀಕ್ಷೆ ಮಾಡಬಹುದು. ಇದರಿಂದ ಫಲಿತಾಂಶಗಳು ಬೇಗನೇ ತಿಳಿಯುತ್ತವೆ’ ಎನ್ನುತ್ತಾರೆ ಸೂಕ್ಷ್ಮಜೀವಿ ತಜ್ಞ ಡಾ.ರಂಗಪ್ಪ ಮೇತ್ರೆ.

‘ಪ್ರಯೋಗಾಲಯ ಆರಂಭವಾದ ನಂತರ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅವರಿಂದ ಅನುಮತಿ ಸಿಕ್ಕನಂತರ ಇಲ್ಲಿಯೇ ವರದಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು’ ಎನ್ನುತ್ತಾರೆ ಅವರು.

ಪ್ರಯೋಗಾಲಯ ವಿಳಂಬ: ಜಿಲ್ಲೆಯಲ್ಲಿ ಈಗಾಗಲೇ ಪ್ರಯೋಗಾಲಯ ಆರಂಭಿಸಬೇಕಿತ್ತು. ಲಾಕ್‌ಡೌನ್‌ ಸಡಿಲಿಕೆ ಆದನಂತರ 15 ಸಾವಿರಕ್ಕೂ ಹೆಚ್ಚು ವಲಸಿಗರು ಬಂದಿದ್ದಾರೆ. ಅವರ ಕ್ವಾರಂಟೈನ್‌ ಅವಧಿ ಮುಗಿದು ಊರು ಸೇರಿಕೊಂಡಿದ್ದಾರೆ. ಕೆಲವರನ್ನು ವರದಿ ಬರುವುದಕ್ಕೆ ಮುನ್ನವೇ ಬಿಡುಗಡೆ ಮಾಡಲಾಗಿದೆ. ಅವರು ಮನೆಗೆ ಮರಳಿದ ನಂತರ ಕೋವಿಡ್‌ ದೃಢಪಟ್ಟಿದೆ. ಇಂಥ ಸಂದಿಗ್ಧ ಪರಿಸ್ಥಿತಿ ತಪ್ಪಿಸಲು ಪ್ರಯೋಗಾಲಯ ಈಗಾಗಲೇ ಆರಂಭವಾಗಬೇಕಿತ್ತು.

‘ಜಿಲ್ಲೆಯಲ್ಲಿ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪ್ರಯೋಗಾಲಯ ವಿಳಂಬವಾಗಿದೆ. ಕೆಲ ಸಾಂಸ್ಥಿಕ ಕ್ವಾರಂಟೈನ್‌ಗಳಲ್ಲಿ ಕಾರ್ಮಿಕರನ್ನು 20ಕ್ಕೂ ಹೆಚ್ಚು ದಿನ ಇಟ್ಟುಕೊಳ್ಳಲಾಗಿತ್ತು. ಸೌಕರ್ಯ ಇಲ್ಲದಿದ್ದರಿಂದ ಪ್ರತಿಭಟನೆ ನಡೆಸಿದ್ದರು. ಅದೇ ಲ್ಯಾಬ್‌ ಇದ್ದಿದ್ದರೆ ಇಂಥ ಸನ್ನಿವೇಶ ಬರುತ್ತಿರಲಿಲ್ಲ. ಈಗ ಹೊರಗಿನಿಂದ ಬರುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ಹೀಗಾಗಿ ಪ್ರಯೋಗಾಲಯ ಶುರುವಾದರೂ ಒತ್ತಡ ಕಡಿಮೆ ಆಗಬಹುದು’ ಎಂದು ಕಾರ್ಮಿಕ ಮುಖಂಡ ರಾಘವೇಂದ್ರ ಹೊಸಮನಿ ಹೇಳಿದರು.

**
ಇನ್ನೂ ಒಂದೆರಡು ಯಂತ್ರಗಳು ಬರಬೇಕಿದೆ. ಗುರುವಾರದಿಂದ ಪ್ರಾಯೋಗಾಲಯ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
-ಡಾ.ಶಂಕರಗೌಡ ಐರೆಡ್ಡಿ, ಯಾದಗಿರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿಶೇಷ ಅಧಿಕಾರಿ

**
ಈಗಾಗಲೇ ಕೆಲವೊಂದು ಯಂತ್ರಗಳು ಬಂದಿವೆ. ಅವುಗಳನ್ನು ಜೋಡಿಸಲಾಗುತ್ತಿದೆ. ಬುಧವಾರ ಇನ್ನಷ್ಟು ಯಂತ್ರಗಳು ಬರಲಿವೆ.
-ಡಾ.ರಂಗಪ್ಪ ಮೇತ್ರೆ, ಸೂಕ್ಷ್ಮಜೀವಿ ತಜ್ಞ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು