ಮಂಗಳವಾರ, ಜೂನ್ 28, 2022
25 °C
ಬಂಡೋಳಿ ಚೆಕ್‍ಪೋಸ್ಟ್‌ನಲ್ಲಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಪರಿಶೀಲನೆ

‘ಪ್ರಯಾಣಿಕರಿಗೆ ಕೋವಿಡ್ ತಪಾಸಣೆ ಕಡ್ಡಾಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಒಳ ಬರುವ ಕಾರ್ಮಿಕರು ಮತ್ತು ಇತರೆ ಪ್ರಯಾಣಿಕರಿಗೆ ಸರ್ಕಾರ ಕೋವಿಡ್ ತಪಾಸಣೆ ಕಡ್ಡಾಯಗೊಳಿಸಿದ ಕಾರಣ ತಾಲ್ಲೂಕು ಆಡಳಿತದ ಅಧಿಕಾರಿಗಳ ತಂಡ ಮಂಗಳವಾರ ತಾಲ್ಲೂಕಿನ ವಿವಿಧ ಚೆಕ್ ಪೋಸ್ಟ್‌ಗಳಲ್ಲಿ ಪ್ರಯಾಣಿಕರ ಮತ್ತು ಕಾರ್ಮಿಕರ ತಪಾಸಣೆ ನಡೆಸಿತು.

ತಾಲ್ಲೂಕಿನ ಬಂಡೋಳಿ ಹತ್ತಿರದ ಚೆಕ್‌ಪೋಸ್ಟ್‌ನಲ್ಲಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ನೇತೃತ್ವದ ತಂಡ ಬೆಳಿಗ್ಗೆ ಕಾರ್ಯಾಚರಣೆಗೆ ಇಳಿಯಿತು. ಪೊಲೀಸ್, ಆರೋಗ್ಯ ಇಲಾಖೆ ಹಾಗೂ ಕಂದಾಯ ಮತ್ತು ಪಿಡಿಒ ಸೇರಿದಂತೆ ಇತರೆ ಸಿಬ್ಬಂದಿ ಇದ್ದರು.

ಬೆಂಗಳೂರು, ಹುಬ್ಬಳಿ, ರಾಯಚೂರು ಸೇರಿದಂತೆ ಇತರೆ ಜಿಲ್ಲೆಗಳಿಂದ ಬರುವ ವಾಹನಗಳನ್ನು ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಕೋವಿಡ್ ತಪಾಸಣೆ ಮಾಡಿದರು.

ಸಾರಿಗೆ ಸಂಸ್ಥೆ ಬಸ್, ಖಾಸಗಿ ಬಸ್, ಟ್ರಾವೆಲ್ಸ್, ಕ್ರೂಜರ್, ಮ್ಯಾಕ್ಸಿ ಕ್ಯಾಬ್, ಕ್ಯಾಂಟರ್, ಟಂಟಂ ಸೇರಿದಂತೆ ಇತರೆ ವಾಹನಗಳನ್ನು ತಡೆಹಿಡಿಯಲಾಯಿತು. ಸುಮಾರು 30ರಿಂದ 40 ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪ್ರತಿಯೊಬ್ಬ ಪ್ರಾಯಾಣಿಕರಿಗೂ ರ್‍ಯಾಪಿಡ್‌ ಆ್ಯಂಟಿಜನ್ ತಪಾಸಣೆ ಮಾಡಲಾಯಿತು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ, ‘ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಕ್ಷೇತ್ರದ ಎಲ್ಲಾ ಚೆಕ್‍ಪೋಸ್ಟ್‌ಗಳಲ್ಲಿ ಕೋವಿಡ್ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ. ಬೆಂಗಳೂರು ಮಾರ್ಗದಲ್ಲಿ ವಾಹನ ಮತ್ತು ಪ್ರಯಾಣಿಕರ ಸಂಖ್ಯೆ ಹೆಚ್ಚು ಇರುವುದರಿಂದ ಬಂಡೋಳಿ ಚೆಕ್ ಪೋಸ್ಟ್‌ನಲ್ಲಿ ಎರಡು ಮತ್ತು ಸುರಪುರ ಬಸ್ ನಿಲ್ದಾಣದಲ್ಲಿ ಒಂದು ಕೇಂದ್ರ ಸ್ಥಾಪಿಸಲಾಗಿದೆ’ ಎಂದು ತಿಳಿಸಿದರು.

‘ಸುಮಾರು 300ಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಡಲಾಗಿದೆ. ಕೋವಿಡ್ ತಪಾಸಣೆ ಮಾಡಿಸಿಕೊಂಡ ಪ್ರತಿಯೊಬ್ಬ ಪ್ರಯಾಣಿಕರು ಹೊರಗಡೆ ತಿರುಗಾಡದೆ ಯಾರೊಂದಿಗೂ ಬೆರೆಯದೆ ಕನಿಷ್ಠ 10 ದಿನ ಮನೆಯಲ್ಲಿ ಕ್ವಾರಂಟೈನ್ ಆಗುವ ಮೂಲಕ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ಸಾಮಾಜಿಕವಾಗಿ ಬೆರೆತಲ್ಲಿ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವದು’ ಎಂದು ತಿಳಿಸಿದರು.

ಕಂದಾಯ ನಿರೀಕ್ಷಕ ವಿಠ್ಠಲ್ ಬಂದಾಳ, ಗುರುಬಸಪ್ಪ, ಪ್ರದೀಪ, ರವಿ ಸೇರಿದಂತೆ ಆರೋಗ್ಯ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು