ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ದುಪ್ಪಟ್ಟು ಆಮಿಷ ಒಡ್ಡಿ ವಂಚನೆ: ಬಂಧನ

ಗುರುಮಠಕಲ್‌ ಪಟ್ಟಣದಲ್ಲಿ ಬಾಡಿಗೆಗೆ ಮನೆ ಪಡೆದು ಬೀಡುಬಿಟ್ಟು ಜನರಿಂದ ₹15.70 ಲಕ್ಷ ಪಡೆದಿದ್ದ ಆರೋಪಿಗಳು
Last Updated 24 ಮೇ 2022, 4:41 IST
ಅಕ್ಷರ ಗಾತ್ರ

ಗುರುಮಠಕಲ್: ಒಂದು ವಾರದಲ್ಲಿ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಆರೋಪಿಗಳನ್ನು ಗುರುಮಠಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ತಂಡ ಬಂಧಿಸಿದೆ.

ತಾಲ್ಲೂಕಿನ ಗಾಜರಕೋಟ ಗ್ರಾಮದ ಲಕ್ಷ್ಮೀ ರಾಮರೆಡ್ಡಿ ಗುನ್ನೆನ್ನೋರ ಹಾಗೂ ರಾಮರೆಡ್ಡಿ ಆಶಪ್ಪ ಗುನ್ನೆನ್ನೋರ ಬಂಧಿತರು.

ಘಟನೆಯ ವಿವರ: ಲಕ್ಷ್ಮೀ ರಾಮರೆಡ್ಡಿ ಗುನ್ನೆನ್ನೋರ, ರಾಮರೆಡ್ಡಿ ಆಶಪ್ಪ ಗುನ್ನೆನ್ನೋರ ಹಾಗೂ ಕಲಬುರಗಿಯ ವಿಜಯಕುಮಾರ (ಮೋಹನರೆಡ್ಡಿ), ಒಂದು ವಾರದಲ್ಲಿ ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ₹3.20 ಲಕ್ಷ ಪಡೆದು ಪರಾರಿಯಾಗಿದ್ದಾರೆ ಎಂದು ಪಟ್ಟಣದ ಹಸೀನಾ ಬಶೀರ್ ಶೇಖ್ ದೂರು ನೀಡಿದ್ದರು. ಆರೋಪಿಗಳು 15 ವರ್ಷಗಳ ಹಿಂದೆ ಗಾಜರಕೋಟ ಗ್ರಾಮದಿಂದ ಚಿತ್ತಾಪುರಕ್ಕೆ ತೆರಳಿದ್ದರು. ಕೆಲ ದಿನಗಳ ಹಿಂದೆ ಗುರುಮಠಕಲ್ ಪಟ್ಟಣದ ಪ್ರೀತಿಬಾಯಿ ತಿವಾರಿ ಎನ್ನುವವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಇಲ್ಲಿನ ಜನರನ್ನು ಪರಿಚಯಿಸಿಕೊಂಡು ಬೆಂಗಳೂರು ನಗರ ಸೇರಿ ಇತರೆಡೆ ನಮ್ಮದು ಹಣಕಾಸು ಲೇವಾದೇವಿ ಸಂಸ್ಥೆಗಳಿವೆ ಎಂದು ನಂಬಿಸಿದ್ದರು. ಹಣ ದುಪ್ಪಟ್ಟು ಮಾಡಿಕೊಡುವ ನಂಬಿಕೆ ಮೂಡಿಸಿ ದೂರದಾರರೂ ಸೇರಿ ಇತರರಿಂದ ₹15.70 ಲಕ್ಷ ಪಡೆದಿದ್ದರು. ಮುಂದಿನ ವಾರ ಕೊಡುವುದಾಗಿ ಹೇಳಿ ಪರಾರಿಯಾಗಿದ್ದರು ಎಂದು ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದರು. ‘ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ಡಿವೈಎಸ್ಪಿ ವೀರೇಶ ಕರಡಿಗುಡ್ಡ ಅವರ ಮಾರ್ಗದರ್ಶನದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ₹1.19 ಲಕ್ಷ ನಗದು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ನೀಡಿದ್ದೇವೆ ಹಾಗೂ ಮೂರನೇ ಆರೋಪಿ ವಿಜಯಕುಮಾರ ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ಪಿಐ ಖಾಜಾ ಹುಸೇನ್ ತಿಳಿಸಿದರು.

ಹಣ ದೋಚಿ ಪರಾರಿ; ಆರೋಪಿ ಬಂಧನ

ಯಾದಗಿರಿ: ಅಂಗಡಿಯಲ್ಲಿ ಔಷಧಿ ತೆಗೆದುಕೊಳ್ಳುವಾಗ ವ್ಯಕ್ತಿಯೊಬ್ಬರಿಂದ ₹4.90 ಲಕ್ಷ ದೋಚಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗುಂಜಿ ಜಬ್ಬರಾಜ ದೇವದಾನಂ ಬಂಧಿತ. ಆರೋಪಿಯಿಂದ ₹4.50 ಲಕ್ಷ ಪಡಿಸಿಕೊಳ್ಳಲಾಗಿದೆ.

ವಡಿಗೇರಾ ತಾಲ್ಲೂಕಿನ ಕೋನಳ್ಳಿ ಗ್ರಾಮದ ಖಾಜಾಸಾಬ್ ಇಮಾಮ್ ಸಾಬ್ ಮುಲ್ಲಾ ಅವರು ಮೇ 5ರಂದು ನಗರದ ರೈಲು ನಿಲ್ದಾಣ ರಸ್ತೆಯ ಎಸ್‌ಬಿಐ ಬ್ಯಾಂಕ್‌ನಲ್ಲಿ ₹5 ಲಕ್ಷ ಡ್ರಾ ಮಾಡಿಕೊಂಡಿದ್ದರು. ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಹಣ ಇಟ್ಟುಕೊಂಡು ಸುಭಾಷ ವೃತ್ತದ ಮೆಡಿಕಲ್‌ನಲ್ಲಿ ಔಷಧಿ ತೆಗೆದುಕೊಳ್ಳುತ್ತಿದ್ದರು.‌ ಆರೋಪಿ‌ ಗಮನ ಬೇರೆಡೆ ಸೆಳೆದು ಬೈಕ್ ಟ್ಯಾಂಕ್‌ ಮೇಲಿಟ್ಟಿದ್ದ ಹಣ ದೋಚಿಕೊಂಡು ಪರಾರಿಯಾಗಿದ್ದ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT