ಶುಕ್ರವಾರ, ಜೂನ್ 25, 2021
30 °C
ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ನೋವು ತೋಡಿಕೊಂಡ ಗ್ರಾಮಸ್ಥರು

ಬೆಳೆ ಹಾನಿ ಪರಿಹಾರ ನೀಡಿಲ್ಲ‌: ರೈತರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕಳೆದ ವರ್ಷ ಕೃಷ್ಣಾ ನದಿ ಪ್ರವಾಹದಿಂದ ಶಹಾಪುರ ಹಾಗೂ ವಡಗೇರಾ ತಾಲ್ಲೂಕಿನ ನದಿ ತೀರದ ಗ್ರಾಮಗಳ ರೈತರ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು.‌ ಆದರೆ, ಇಲ್ಲಿಯವರೆಗೆ ಇನ್ನೂ ಪರಿಹಾರದ ಹಣ ನೀಡಿಲ್ಲ. ಮತ್ತೆ ಪ್ರವಾಹ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ಕೊಳ್ಳೂರ, ಯಕ್ಷಂತಿ, ಮದರಕಲ್, ಟೊಣ್ಣೂರು, ಐಕೂರ, ಅನಕಸೂಗುರ ಸೇರಿದಂತೆ ಹಲವಾರು ಗ್ರಾಮಗಳ ರೈತರು ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ತಮ್ಮ ನೋವು ತೋಡಿಕೊಂಡರು.

ಈ‌ ವೇಳೆ ಸಚಿವರು, ಕೃಷಿ ಅಧಿಕಾರಿಗಳನ್ನು ಕರೆದು ತರಾಟೆಗೆ ತೆಗೆದುಕೊಂಡು, ಸಮಗ್ರ ಮಾಹಿತಿ ಜಿಲ್ಲಾಡಳಿತಕ್ಕೆ ಇನ್ನು ಯಾಕೆ ನೀಡಿಲ್ಲ. ಅವರಿಗೆ ನ್ಯಾಯ ಒದಗಿಸಿಕೊಡಿ ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಮಧ್ಯೆ ಪ್ರವೇಶಿಸಿ ರೈತರ ಆಧಾರ್ ಕಾರ್ಡ್‌ಗಳಲ್ಲಿ ಕೆಲ‌ ಲೋಪದೋಷಗಳು ಕಂಡು ಬಂದಿರುವುದರಿಂದ ಕೆಲ ರೈತರಿಗೆ ಪರಿಹಾರ ಹಣ ಸಂದಾಯವಾಗಿಲ್ಲ. ಸಮಸ್ಯೆ ಬಗೆಹರಿಸುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು.

ಇನ್ನು ಕೆಲ ರೈತರು ಫಸಲ್‌ ಬಿಮಾ ಯೋಜನೆ ಅಡಿ ವಿಮೆ ಹಣ ಕಟ್ಟಿದ್ದೇವೆ. ಬೆಳೆ ನಷ್ಟ ಪರಿಹಾರ ಹಣ ನೀಡಿಲ್ಲ ಎಂದು‌ ದೂರಿದರು. ಈ ವರ್ಷ ನಾವು ಹಣ ಕಟ್ಟುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಮಾತನಾಡಿ, ಕಂಪನಿಗಳ ಜೊತೆ ಈ ಸಮಸ್ಯೆ ಕುರಿತು ಚರ್ಚಿಸುತ್ತೇನೆ ಎಂದು ಸಮಾಧಾನ ಪಡಿಸಲು ಯತ್ನಿಸಿದರು. ಆದರೂ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಯಾದಗಿರಿ ಮತ ಕ್ಷೇತ್ರದ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನಾವಣೆ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.