ಯಾದಗಿರಿ ಜಿಲ್ಲೆಯಲ್ಲಿ ₹99.07 ಕೋಟಿ ಬೆಳೆಹಾನಿ

ಯಾದಗಿರಿ: ಶೇ80ರಷ್ಟು ಮಳೆಕೊರತೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 1.37 ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಉಂಟಾಗಿದ್ದು, ರೈತರು ಒಟ್ಟು 99.07 ಕೋಟಿ ಬೆಳೆನಷ್ಟ ಅನುಭವಿಸಿದ್ದಾರೆ.
ಹೆಸರು, ತೊಗರಿ, ಹತ್ತಿ, ಉದ್ದು, ಸಜ್ಜೆ, ಸೂರ್ಯಕಾಂತಿ ಹೀಗೆ ಸಾಲು ಸಾಲು ಬೆಳೆಗಳು ಈ ಸಲ ರೈತರಿಗೆ ಕೈಕೊಟ್ಟಿವೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರು ಒಟ್ಟು 2.50 ಲಕ್ಷ ಎಕರೆ ಪ್ರದೇಶದಲ್ಲಿ ಬಿತ್ತನೆ ನಡೆಸಿದ್ದರು. ಆದರೆ, ಬಿತ್ತನೆ ಗುರಿಯಲ್ಲಿ 1,37,067 ಹೆಕ್ಟೇರ್ ಪ್ರದೇಶ ಬರಕ್ಕೆ ತುತ್ತಾಗಿದೆ. ಈ ಸಲ ಹಿಂಗಾರು– ಬೇಸಿಗೆ ಹಂಗಾಮು ಕೂಡ ರೈತರಿಗೆ ಆಶಾದಾಯಕವಾಗಿಲ್ಲ.
ನೂತನ ತಾಲ್ಲೂಕುಗಳಿಗೆ ಸಿಗದ ಅನುದಾನ!
ಬರ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಪ್ರತಿ ತಾಲ್ಲೂಕಿಗೆ ₹25 ಲಕ್ಷ ನೀಡಿದೆ. ಆದರೆ, ಜಿಲ್ಲೆಯಲ್ಲಿ ಒಟ್ಟು ಆರು ತಾಲ್ಲೂಕುಗಳಿವೆ. ನೂತನ ತಾಲ್ಲೂಗಳಾಗಿ ಘೋಷಣೆ ಆಗಿರುವ ಹುಣಸಗಿ, ಗುರುಮಠಕಲ್, ವಡಗೇರಾ ತಾಲ್ಲೂಕುಗಳಲ್ಲಿನ ಬರ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಅನುದಾನ ನೀಡಿಲ್ಲ. ಮೊದಲೇ ಮೂಲ ಸೌಕರ್ಯಗಳಿಂದ ನರಳುತ್ತಿರುವ ತಾಲ್ಲೂಕುಗಳನ್ನು ಸರ್ಕಾರ ಕಡೆಗಣೆಸಿದೆ ಎಂಬುದಾಗಿ ವಡಗೇರಾ ಗ್ರಾಮದ ಮುಖಂಡ ಸುಭಾಷ್ ಕರಣಗಿ ದೂರುತ್ತಾರೆ.
ವಾಸ್ತವ ಸ್ಥಿತಿ ನೋಡದ ಸಿಇಒ
ಜಿಲ್ಲೆಯ ಗಡಿಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಪರಿಸ್ಥಿತಿ ಇದೆ. ಸುರಪುರ ತಾಲ್ಲೂಕಿನ ಗಡಿಹೋಬಳಿ ಅಗ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಡರತಳ್ಳಿ, ಹೂವಿನಹಳ್ಲೀ, ಅಗತೀರ್ಥ, ಕರಿಬಾವಿ, ಬೂಚಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಲಗಿ, ಖಾನಹಳ್ಳಿ, ಬೈಚಬಾಳ , ದೇವರ ಗೋನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳು, ಶಹಾಪುರ ತಾಲ್ಲೂಕಿನ ಕೊಳ್ಳೂರ, ಕುರಕುಂದಾ, ಉಳ್ಳೇಸೂಗೂರು ಹೈಯಾಳ (ಬಿ), ಕಾಡಂಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಜಿಲ್ಲಾ ಪಂಚಾಯಿತಿ ಭರವಸೆ ನೀಡಿರುವಂತೆ ಈ ಗ್ರಾಮಗಳಲ್ಲಿ ಟ್ಯಾಂಕರ್ ನೀರು ಮಾತ್ರ ಪೂರೈಕೆ ಆಗಿಲ್ಲ ಎಂಬುದಾಗಿ ಈ ಗ್ರಾಮಗಳ ಗ್ರಾಮಸ್ಥರು ‘ಪ್ರಜಾವಾಣಿ’ ಗೆ ಅಲವತ್ತುಕೊಂಡಿದ್ದಾರೆ.
ಬಹುಮುಖ್ಯವಾಗಿ ನೂತನ ತಾಲ್ಲೂಕು ಗಳಾಗಿರುವ ವಡಗೇರಾ ಮತ್ತು ಗುರುಮಠಕಲ್ ತಾಲ್ಲೂಕು ಗಡಿಭಾಗದ ಗ್ರಾಮಗಳಲ್ಲಿ ಕ್ಷಾಮ ಪರಿಸ್ಥಿತಿಯೇ ಉಂಟಾಗಿದೆ. ಮಧ್ವಾರ, ಕಾಳೆಬೆಳಗುಂದಿ, ಅಜಲಾಪುರ, ಕಡೇಚೂರು, ಬಾಡಿಯಾಳ, ಯಂಪಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹನಿ ನೀರಿಗೂ ಹಾಹಾಕಾರ ಇದೆ. ಆದರೆ, ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವುದಾಗಿ ಸರ್ಕಾರಕ್ಕೆ ವರದಿ ನೀಡುವ ಜಿಲ್ಲಾ ಪಂಚಾಯಿತಿ ಸಿಇಒ ಜಿಲ್ಲಾ ಪ್ರವಾಸ ಮಾಡಿ ವಾಸ್ತವ ಸ್ಥಿತಿ ಕಂಡಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.