ಗುರುವಾರ , ಡಿಸೆಂಬರ್ 5, 2019
20 °C

ಹೆಸರು ಬೆಳೆ ಕೀಟ, ರೋಗ ನಿರ್ವಹಣೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ ಸಮೀಪದ ಹತ್ತಿಕುಣಿ ಸುತ್ತಮುತ್ತಲಿನ ರೈತರ ಹೊಲಗಳಿಗೆ ಕೃಷಿ ಅಧಿಕಾರಿ ರಾಜ್‌ಕುಮಾರ್ ರಾಥೋಡ ರೈತ ಮಹಿಳೆಯರಿಗೆ ಕೀಟ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಿದರು

ಯಾದಗಿರಿ: ‘ಜಿಲ್ಲೆಯ ಮುಂಗಾರು ಹಂಗಾಮಿನ ಮುಖ್ಯ ಬೆಳೆಯಾದ ಹೆಸರು ಬೆಳೆಯು ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ರೈತರು ಹೆಸರು ಬೆಳೆಯ ಕೀಟ ಮತ್ತು ರೋಗ ನಿರ್ವಹಣೆ ಮಾಡಿದಲ್ಲಿ ಉತ್ತಮ ಫಸಲು ಪಡೆಯಬಹುದು’ ಎಂದು ಕೃಷಿ ಅಧಿಕಾರಿ ರಾಜಕುಮಾರ ರಾಥೋಡ ಸಲಹೆ ನೀಡಿದರು.

ಯಾದಗಿರಿ ತಾಲ್ಲೂಕಿನ ಚಾಮನಳ್ಳಿ ಗ್ರಾಮದ ಹೆಸರು ಬೆಳೆ ಕ್ಷೇತ್ರಗಳಿಗೆ ಭೇಟಿ ನೀಡಿ, ರೈತರಿಂದ ಬೆಳೆಗಳ ಮಾಹಿತಿ ಪಡೆದು ಅವರು ಮಾತನಾಡಿದರು. ‘ಹೆಸರು ಕಡಿಮೆ ಅವಧಿಯ ಲಾಭದಾಯಕ ಬೆಳೆಯಾಗಿರುವುದರಿಂದ ಮಳೆ ಆಶ್ರಿತ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಹತ್ತಿಕುಣಿ ಹೋಬಳಿಯ ಯಡ್ಡಳ್ಳಿ, ಬಂದಳ್ಳಿ, ಚಾಮನಳ್ಳಿ, ಹತ್ತಿಕುಣಿ, ಸಮನಾಪುರ ಗ್ರಾಮಗಳಲ್ಲಿ ಮಳೆಯಾಗಿರುವುದರಿದ ಉತ್ತಮ ಬೆಳೆಯಾಗಿ ಬೆಳೆದಿರುತ್ತದೆ. ಆದರೆ, ಈ ಬೆಳೆಗೆ ಅನೇಕ ಕೀಟ ಮತ್ತು ರೋಗಗಳ ಬಾಧೆ ಅಲ್ಲಲ್ಲಿ ಕಂಡುಬರುತ್ತಿದೆ’ ಎಂದರು.

‘ಸಸ್ಯ ಹೇನು, ಥ್ರೀಪ್ಸ್ ಮತ್ತು ಎಲೆ ತಿನ್ನುವ ಹುಳುಗಳು ಚಿಗುರೆಲೆ ಮತ್ತು ಕಾಯಿಗಳಿಂದ ರಸ ಹೀರುತ್ತವೆ. ಅವುಗಳ ನಿಯಂತ್ರಣಕ್ಕೆ ಪ್ರತಿ ಲೀಟರ್ ನೀರಿಗೆ 1 ಮಿಲಿ ಲೀಟರ್ ಮಿಥೈಲ್ ಪ್ಯಾರಾಥಿಯಾನ್ 50 ಇ.ಸಿ ಅಥವಾ 1 ಮಿಲಿ ಲೀಟರ್ ಮನೋಕ್ರೋಟೊಫಾಸ್ 36 ಎಸ್.ಎಲ್ ಅಥವಾ 1.7 ಮಿ.ಲಿ ಡೈಮಿಥೋಯೆಟ್ 30 ಇ.ಸಿ ಬೆರೆಸಿ ಸಿಂಪಡಿಸಬೇಕು’ ಎಂದು ಮಾಹಿತಿ ನೀಡಿದರು.

ಅಗ್ರೋಮೈಜಿಡ್ ನೊಣಬಾಧೆ: ಈ ನೊಣವು ಎಳೆಯ ಎಲೆಗಳ ಮೇಲೆ ಮೊಟ್ಟೆಯಿಡುತ್ತದೆ. ಮರಿಗಳು ದಂಟು ಮತ್ತು ಕಾಂಡಾ ಕೊರೆಯುತ್ತದೆ. ಕೊರೆದ ಕಾಂಡಾದ ಸಸಿಗಳು ಬಾಡುತ್ತವೆ. ಎಳೆಯ ಗಿಡಗಳಿಗೆ ಹೆಚ್ಚು ನಷ್ಟವಾಗುತ್ತದೆ. ಈ ಬಾಧೆ ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿಗೆ 0.2 ಮಿಲಿ ಲೀಟರ್ ಇಮಿಡಾಕ್ಲೋಪಿಡ್ 17.8 ಎಸ್.ಎಲ್ ಅಥವಾ 0.3 ಗ್ರಾಂ. ಥೈಯಾಮಿಥಾಕ್ಸಾಮ್ 25 ಡಬ್ಲ್ಯೂ.ಜಿ. ಅಥವಾ 1.7 ಮಿ.ಲೀ ಡೈಮಿಥೋಯೆಟ್ 30 . ಇ.ಸಿ ಬೆರೆಸಿ ಸಿಂಪಡಿಸಬೇಕು ಎಂದು ಹೇಳಿದರು.

ನಂಜುರೋಗದ ಲಕ್ಷಣ: ಎಲೆಗಳ ಮೇಲೆ ದಟ್ಟ ಮತ್ತು ತಿಳಿ ಹಳದಿ ಬಣ್ಣದ ಮಚ್ಚೆಗಳು ಕಾಣಿಸುತ್ತದೆ. ಗಿಡಗಳು ಕುಳ್ಳಗಾಗಿರುವವು. ಈ ರೋಗ ತೀವ್ರವಾಗಿದ್ದರೆ ಕಾಯಿ ಬಿಡುವುದಿಲ್ಲ. ನಂಜು ರೋಗ ಮತ್ತು ಬೂದಿ ರೋಗ ನಿಯಂತ್ರಣಕ್ಕೆ 0.5 ಮಿಲಿ ಲೀಟರ್ ಪ್ರೋಪಿಕೋನಾಜೋಲ್ 25 ಇ.ಸಿ ಅಥವಾ 3.0 ಗ್ರಾಂ ಶೇ 80 ನೀರಿನಲ್ಲಿ ಕರಗುವ ಗಂಧಕ ಅಥವಾ 1 ಗ್ರಾಂ ಕಾರ್ಬನ್ ಡೈಜಿಮ್ 50 ಡಬ್ಲೂಪ್ ಅಥವಾ 1 ಮಿಲಿ ಲೀಟರ್ ಹೆಕ್ಸಾಕೋನಾಜೋಲ್ 5 ಇ.ಸಿ ನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.

‘ಹೂವಾಡುವ ಮತ್ತು ಕಾಳು ಕಟ್ಟುವ ಸಮಯದಲ್ಲಿ ಶೇ1ರ 19:19 (ಲೀಟರ್ ನೀರಿಗೆ 10ಗ್ರಾಂ,) ಅಥವಾ ಶೇ 2ರ ಡಿಎಪಿ (20ಗ್ರಾಂ ಡಿಎಪಿ ಪ್ರತಿ ಲೀಟರ್ ನೀರಿಗೆ) ಬೆರೆಸಿ ಸಿಂಪರಣೆ ಮಾಡಬೇಕು’ ಎಂದು ಸೂಚಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು