ಸೋಮವಾರ, ಜನವರಿ 18, 2021
27 °C
ಅತಿವೃಷ್ಟಿ, ಪ್ರವಾಹದಿಂದಾದ ಗಾಯಕ್ಕೆ ಶೀತಗಾಳಿಯ ಬರೆ

ಯಾದಗಿರಿ: ಭತ್ತ ರಾಶಿ, ಹತ್ತಿ ಬಿಡಿಸಲು ’ನಿವಾರ್’ ಚಂಡಮಾರುತ ಅಡ್ಡಿ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಅಧಿಕ ಮಳೆ, ಪ್ರವಾಹದಿಂದ ಕಂಗೆಟ್ಟದ್ದ ರೈತ ಸಮೂಹಕ್ಕೆ ‘ನಿವಾರ್‌’ ಚಂಡಮಾರುತ ಗಾಯಕ್ಕೆ ಬರೆ ಎಳೆದಂತೆ ಆಗಿದೆ. ಶೀತಗಾಳಿ ಬೀಸುತ್ತಿದ್ದು, ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಕೃಷ್ಣಾ, ಭೀಮಾ ನದಿ ಪ್ರವಾಹದಿಂದ ರೈತರು ಇನ್ನೂ ಚೇತರಿಸಿಕೊಂಡಿಲ್ಲ. ಅದರ ಮಧ್ಯೆದಲ್ಲಿಯೇ ಚಂಡಮಾರುತ ಪ್ರಭಾವದಿಂದ ಹತ್ತಿ, ಭತ್ತದ ಬೆಳೆಗೆ ಕಂಟಕ ಎದುರಾಗಿದೆ. 

ಎಕರೆಗೆ ಸಾವಿರಾರು ಖರ್ಚು ಮಾಡಿ ಹತ್ತಿ, ಭತ್ತ ಬೆಳೆದಿದ್ದರು. ಎರಡು ನದಿಗಳ ಪ್ರವಾಹದಿಂದ ನದಿ ಪಾತ್ರದ ರೈತರು ಹೈರಾಣಾಗಿದ್ದರು. ಈಗ ‘ನಿವಾರ್‌’ ತುಂತುರು ಮಳೆ ಮಳೆಯಿಂದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಗುರಿ ಮಾಡಿದೆ. 

ಹೊಲದಲ್ಲೇ ಉಳಿದ ಹತ್ತಿ, ಭತ್ತ: ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣದಿಂದ ರೈತರಿಗೆ ಹತ್ತಿ ಬಿಡಿಸಲು, ಭತ್ತ ರಾಶಿ ಮಾಡಲು ಆಗಿಲ್ಲ. ಇದೇ ವಾತಾವರಣ ಮುಂದುವರಿದರೆ ಮತ್ತೊಂದು ಸಮಸ್ಯೆಗೆ ಸಿಲುಕಬೇಕಾಗುತ್ತದೆ. ಬೇಗ ನಾಟಿ ಮಾಡಿದ ಭತ್ತ ಕಟಾವು ಮುಗಿದಿದ್ದರೂ ರಾಶಿ ಮಾಡಲು ಬಿಸಿಲಿನ ವಾತಾವರಣ ಇಲ್ಲದಿದ್ದರಿಂದ ರೈತರ ಆತಂಕಕ್ಕೆ ಕಾರಣವಾಗಿದೆ.

ಮೋಡ ಕವಿದ ಪರಿಣಾಮ ಭತ್ತ ಕಟಾವು ಮಾಡುವ ಯಂತ್ರಗಳು ಕಾರ್ಯಾಚರಣೆ ಸ್ಥಗಿತಗೊಳಿಸಿ ಗದ್ದೆಗಳಲ್ಲಿ ಬೀಡು ಬಿಟ್ಟಿವೆ.  ಇನ್ನೂ ಜಿಲ್ಲೆಯಾದ್ಯಂತ ಶುಕ್ರವಾರ ಆಗಾಗ ತುಂತುರು ಮಳೆಯಾಗಿದ್ದು, ಇದರಿಂದ ಹತ್ತಿ ಬಿಡಿಸಲು ಸಾಧ್ಯವಾಗಿಲ್ಲ. ಇದರಿಂದ ಜಮೀನು, ಗದ್ದೆಗಳಲ್ಲಿಯೇ ಹತ್ತಿ, ಭತ್ತ ಉಳಿಯುವಂತಾಗಿದೆ. 

ರೈತ ಸಮೂಹ ಜರ್ಝರಿತ: ಮುಂಗಾರು ಆರಂಭದಿಂದಲೂ ರೈತರಿಗೆ ಒಂದಾದ ನಂತರ ಒಂದು ಪೆಟ್ಟು ಬೀಳುತ್ತಲೇ ಇದೆ. ಆಗ ಅಧಿಕ ಮಳೆಯಿಂದ ಹೆಸರು, ಉದ್ದಿನ ಬೆಳೆ ನಾಶವಾಗಿತ್ತು. ನಂತರ ಕೃಷ್ಣಾ, ಭೀಮಾ ನದಿ ಪ್ರವಾಹ ಪಾತ್ರದ ಜಮೀನನ್ನು ಆಪೋಷನ ಮಾಡಿಕೊಂಡಿತ್ತು. ಆಗ ಚಂಡುಮಾರುತ ಪ್ರಭಾವದಿಂದ ರೈತ ಸಮೂಹ ಜರ್ಝರಿತಗೊಳ್ಳುವಂತೆ ಮಾಡಿದೆ.

ಮಾಹಿತಿ ನೀಡಿದ ಅಧಿಕಾರಿಗಳು: ‘ನಿವಾರ್‌’ ಚಂಡಮಾರುತದ ಬಗ್ಗೆ ಅಧಿಕಾರಿಗಳು ರೈತರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ರೈತರು ಆರೋಪಿಸಿದ್ದಾರೆ. 

‘ರೈತರು ಭತ್ತ ಕಟಾವು, ಹತ್ತಿ ಬಿಡಿಸುವುದರಲ್ಲಿ ತೊಡಿಸಿಕೊಂಡಿದ್ದಾರೆ. ಆದರೆ, ಚಂಡುಮಾರುತದ ಬಗ್ಗೆ ಜಿಲ್ಲಾಡಳಿತ ಅಥವಾ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಎಚ್ಚರಿಕೆ ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಎಚ್ಚರಿಕೆ ನೀಡಿದ್ದರೆ ರೈತರು ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿತ್ತು ಎಂದು ರೈತ ಗದ್ದೆಪ್ಪ ವಡಿಗೇರಿ ಆಕ್ರೋಶ ವ್ಯಕ್ತಪಡಿಸುತ್ತಾರೆ. 

‘ಮೌನ ವಹಿಸಿರುವ ಅಧಿಕಾರಿಗಳಿಂದ ರೈತ ಸಮೂಹಕ್ಕೆ ಚಂಡಮಾರುತ ಬಗ್ಗೆ ಜಿಲ್ಲೆಯಲ್ಲಿ ಮಾಹಿತಿ ಇಲ್ಲದಂತಾಗಿದೆ. ಈ ಬಾರಿ ಭತ್ತದ ಬೆಲೆಯಲ್ಲಿ ಭಾರಿ ಕುಸಿತವಾಗಿದೆ. ಮುಚ್ಚರಿಕೆ ನೀಡಿದ್ದರೆ ರೈತರು ಹೇಗಾದರೂ ಮಾಡಿ ಕಟಾವು ಮಾಡಿರುವ ಬೆಳೆಯನ್ನು ಸಂರಕ್ಷಣೆ ಮಾಡಿಕೊಳ್ಳುತ್ತಿದ್ದರು. ಮಳೆ ಬರುವುದಿಲ್ಲ ಎಂದು ಅಂದಾಜಿಸಿದ ರೈತರಿಗೆ ಜಮೀನುನಲ್ಲಿಯೇ ಭತ್ತ ಬಿಡುವ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ರೈತ ಗಿರೇಪ್ಪ ಮೇಟಿ ಹೇಳುತ್ತಾರೆ. 

ಇಳಿಕೆಯಾದ ತಾಪಮಾನ: ಶುಕ್ರವಾರ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್‌ ಇದ್ದರೆ ಕನಿಷ್ಠ 19 ಇತ್ತು. ಶನಿವಾರ ಗರಿಷ್ಠ 27 ಡಿಗ್ರಿ ಉಷ್ಣಾಂಶ, ಕನಿಷ್ಠ 21 ಡಿಗ್ರಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

***

ಸಂಕಷ್ಟದಲ್ಲಿ ಭತ್ತ ಬೆಳೆಗಾರರು
ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯಲಾಗಿದ್ದ ಬಹುತೇಕ ಭತ್ತವು ರಾಶಿ ಮಾಡುವ ಹಂತದಲ್ಲಿದ್ದು, ಮುಂಚಿತವಾಗಿ ನಾಟಿ ಮಾಡಿದ ಭತ್ತ ಬೆಳೆಯ ಕಟಾವು ಮಾಡಲಾಗಿದೆ. ಚಂಡಮಾರುತದ ಶೀತಗಾಳಿ ರೈತರನ್ನು ಕಂಗೆಡುವಂತೆ ಮಾಡಿದ್ದು, ರೈತ ವಲಯದಲ್ಲಿ ಆತಂಕದ ಛಾಯೆ ಮನೆ ಮಾಡಿದೆ.

ಹುಣಸಗಿ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಭತ್ತದ ಬೆಳೆಯೇ ಪ್ರಮುಖ ಬೆಳೆಯಾಗಿದೆ. ಈ ಬಾರಿ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಸದ್ಯ ಬೆಲೆ ಕುಸಿತದ ಭೀತಿಯಿಂದಾಗಿ ರೈತರು ನಲುಗಿ ಹೋಗಿದ್ದಾರೆ.

‘ಕಳೆದ ತಿಂಗಳು ತಾಲ್ಲೂಕಿನಲ್ಲಿ ಸುರಿದ ಅಧಿಕ ಮಳೆ ಹಾಗೂ ಕೃಷ್ಣೆಯ ಪ್ರವಾಹದಿಂದಾಗಿ ನಷ್ಟ ಅನುಭವಿಸಿದ ರೈತರಿಗೆ ಚಂಡಮಾರುತ ನಮ್ಮ ಬದುಕಿನ ಬಂಡಿಯನ್ನೇ ಡೋಲಾಯಮಾನ ಮಾಡುವತ್ತ ಸಾಗುತ್ತಿದೆ’ ಎಂದು ವಜ್ಜಲ ಗ್ರಾಮದ ಪ್ರಗತಿಪರ ರೈತ ಚಂದಪ್ಪ ಗಿಂಡಿ ಹಾಗೂ ಮಲ್ಲನಗೌಡ ಅಮಲಿಹಾಳ ತಮ್ಮ ನೋವು ವ್ಯಕ್ತಪಡಿಸಿದರು.

‘ಲಕ್ಷಾಂತರ ರೂಪಾಯಿ ಹೊಂದಾಣಿಕೆ ಮಾಡಿಕೊಂಡು ಭತ್ತ ನಾಟಿ ಮಾಡಿದ್ದರು. ಇನ್ನೇನು ಸಮಯಕ್ಕೆ ಸರಿಯಾಗಿ ಭತ್ತದ ರಾಶಿ ಯಂತ್ರ ಸಿಕ್ಕಲ್ಲಿ ಒಂದೆರಡು ದಿನದಲ್ಲಿ ಕಟಾವು ಮಾಡಲಾಗುತ್ತದೆ. ಆದರೆ, ಶೀತಗಾಳಿ ಹಾಗೂ ತುಂತುರು ಮಳೆಯಿಂದಾಗಿ ಕೈಗೆ ಬಂದ ತುತ್ತು ಎಲ್ಲ ಮಳೆಯಲ್ಲಿ ತೊಯ್ದು ಹೋಗುತ್ತದೆ ಎನ್ನುವ ಆತಂಕ ಮನೆ ಮಾಡಿದೆ’ ಎಂದು ದ್ಯಾಮನಹಾಳ ಗ್ರಾಮದ ಲಕ್ಷ್ಮಿಕಾಂತ ಕುಲಕರ್ಣಿ, ಶ್ರೀನಿವಾಸ ರಡ್ಡಿ ನೊಂದು ನುಡಿದರು.

ಬೆಲೆ ಕುಸಿತಕ್ಕೆ ಯಾರು ಹೊಣೆ:  ‘ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸೋನಾ ಮಸೂರಿ ತಳಿಯ ಭತ್ತವನ್ನೇ ನಾಟಿ ಮಾಡಲಾಗಿದೆ. ಈ ಹಿಂದೆ ಪ್ರತಿ ಬಾರಿಯೂ ಸೋನಾ ಭತ್ತದ ಧಾರಣೆ ಅಂದಾಜು ₹1,250 ರಿಂದ ₹1,400 ರ ವರೆಗೂ ಇತ್ತು. ಆದರೆ, ಈ ಬಾರಿ ₹1,100 ರ ವರೆಗೆ ಮಾತ್ರ ವಹಿವಾಟು ನಡೆದಿದ್ದು, ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಯಾರು ಹೊಣೆ’ ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ಪ್ರಮುಖ ಮಲ್ಲಿಕಾರ್ಜುನ ಸತ್ಯಂಪೇಟೆ ಅವರ ಪ್ರಶ್ನೆಯಾಗಿದೆ.

ಎಲ್ಲ ರೈತರ ಭತ್ತವನ್ನು ಸರ್ಕಾರವೇ ಖರೀದಿಸಲಿ:  ‘ಈಗಾಗಲೇ ತೆಲಂಗಾಣ ರಾಜ್ಯದಲ್ಲಿ ಸರ್ಕಾರವೇ ನೇರವಾಗಿ ಕ್ವಿಂಟಲ್‌ಗೆ ₹1,880 ರಂತೆ ಭತ್ತ ಖರೀದಿಸಿ ರೈಸ್ ಮಿಲ್‌ಗಳಿಗೆ ನೀಡುತ್ತಿದೆ. ಇದರಿಂದಾಗಿ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದು, ನಮ್ಮ ರಾಜ್ಯದಲ್ಲಿಯೂ ಸರ್ಕಾರ ರೈತರ ನೆರವಿಗೆ ಬರುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡುವ ಮೂಲಕ ಮಾದರಿಯಾಗಲಿ’ ಎಂದು ಭಾರತೀಯ ಕಿಸಾನ ಸಂಘದ ಉತ್ತರ ಪ್ರಾಂತ ಕಾರ್ಯದರ್ಶಿ ರಾಘವೇಂದ್ರ ಕಾಮನಟಗಿ ಹಾಗೂ ತಾಲ್ಲೂಕು ಅಧ್ಯಕ್ಷ ರುದ್ರಗೌಡ ಗುಳಬಾಳ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

‘ಒಂದು ಎಕರೆ ಭತ್ತ ನಾಟಿಯಿಂದ ರಾಶಿವರೆಗೂ ₹30 ರಿಂದ ₹35 ಸಾವಿರ ಖರ್ಚು ತಗುಲುತ್ತಿದ್ದು, ಹಾಕಿದ ಹಣ ಬರದಂಥ ಸ್ಥಿತಿ ಇದೆ’ ಎಂದು ಹುಣಸಗಿಯ ಯುವ ರೈತ ಸೋಮನಗೌಡ ಪಾಟೀಲ ಸಮಸ್ಯೆಯ ಕುರಿತು ತಿಳಿಸಿದರು.
-ಭಿಮಶೇನರಾವ ಕುಲಕರ್ಣಿ

***
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ರಾಶಿ ಮಾಡುವ ಹಂತದಲ್ಲಿದ್ದು, ಭತ್ತ ಬೆಳೆಗಾರರಿಗೆ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿ.
-ರಂಗಪ್ಪ ಡಂಗಿ, ರೈತ ಕಾಮನಟಗಿ

***
ಹುಣಸಗಿಯಲ್ಲಿ ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಿ ಪ್ರತಿ ರೈತರಿಂದ ಗರಿಷ್ಠ 300 ಕ್ವಿಂಟಲ್ ವರೆಗೂ ಭತ್ತ ಖರೀದಿಸಿ ರೈತರ ಹಿತ ಕಾಪಾಡಲಿ.
-ಮಹಾದೇವಿ ಬೇನಾಳಮಠ, ರಾಜ್ಯ ರೈತ ಸಂಘದ ಪ್ರಮುಖರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು