‘ಶಿಕ್ಷಣದಿಂದ ಅಸಮಾನತೆ ನಿವಾರಣೆ’

ಬುಧವಾರ, ಮಾರ್ಚ್ 27, 2019
22 °C
ದಲಿತ ವಚನಕಾರರ ಜಯಂತ್ಯುತ್ಸವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಅಭಿಮತ

‘ಶಿಕ್ಷಣದಿಂದ ಅಸಮಾನತೆ ನಿವಾರಣೆ’

Published:
Updated:
Prajavani

ಯಾದಗಿರಿ:‘ಶಿಕ್ಷಣದಿಂದ ಮಾತ್ರ ಸಮಾಜದಲ್ಲಿನ ಅಸಮಾನತೆ ತೊಲಗಿಸಲು ಸಾಧ್ಯ’ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಅಭಿಪ್ರಾಯ ಪಟ್ಟರು.

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಸೋಮವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ದಲಿತ ವಚನಕಾರರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

‘ಹಿಂದುಳಿದ ಯಾವುದೇ ಸಮುದಾಯದಲ್ಲಿ ಹಿಂದುಳಿದವರು, ಆರ್ಥಿಕ ದುರ್ಬಲರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ವಂಚಿರಾದವರು ಎಂದಿಗೂ ಏಳಿಗೆ ಹೊಂದಲು ಸಾಧ್ಯವಿಲ್ಲ. ಆದ್ದರಿಂದ, ಮಕ್ಕಳಿಗೆ ಪೊಷಕರು ಕಡ್ಡಾಯವಾಗಿ ಶಿಕ್ಷಣವಂತರನ್ನಾಗಿಸಬೇಕು’ ಎಂದು ಸಲಗೆ ನೀಡಿದರು.

‘ಸಮಾಜವನ್ನು ಒಗ್ಗೂಡಿಸಲು ಮತ್ತು ಶರಣರ ಸಂದೇಶಗಳನ್ನು ಜನರಿಗೆ ತಲುಪಿಸಲು ಸರ್ಕಾರ ಜಯಂತಿಗಳನ್ನು ಆಚರಣೆ ಮಾಡುತ್ತಿದೆ. 12ನೇ ಶತಮಾನದ ಎಲ್ಲಾ ಶರಣರು ಸರಳವಾದ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದರು. ಆ ಸಾಲಿನಲ್ಲಿ ಬರುವ ದಲಿತ ವಚನಕಾರರಾದ ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಚನ್ನಯ್ಯ, ಉರಿಲಿಂಗಪೆದ್ದಿ, ಮಾದಾರ ಧೂಳಯ್ಯ ಅವರು ಕೂಡ ಸಮಾಜದಲ್ಲಿನ ಅನಿಷ್ಠ ಪದ್ಧತಿಗಳನ್ನು ತೊಲಗಿಸಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಅವರ ಸಂದೇಶಗಳು ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಲಿಂಗೇರಿ ಕೋನಪ್ಪ ಮಹಿಳಾ ಮಹಾವಿದ್ಯಾಲಯದ ಉನ್ಯಾಸಕಿ ಜ್ಯೋತಿಲತಾ ತಡಬಿಡಿ ಉಪನ್ಯಾಸ ನೀಡಿ, ‘ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12ನೇ ಶತಮಾನ ಕನ್ನಡಿಗರ ಪಾಲಿಗೆ ಸುವರ್ಣ ಯುಗವಾಗಿದೆ. ಈ ಐದು ಜನ ಶರಣರನ್ನು ದಲಿತ ವಚನಕಾರರು ಎನ್ನುವ ಬದಲು ದೀನ, ದಲಿತೋದ್ಧಾರ ವಚನಕಾರರು ಎಂದರೆ ತಪ್ಪಾಗಲಾರದು. ಅವರ ವಚನಗಳ ಸಾರದಂತೆ ನಡೆದಾಗ ವಚನಗಳಿಗೆ ಅರ್ಥ ಬರುತ್ತದೆ’ ಎಂದು ಹೇಳಿದರು.

‘ಮಾದಾರ ಚನ್ನಯ್ಯನವರ ವಚನಗಳಲ್ಲಿ ದಲಿತ ಸಂವೇದನೆ, ಸಾಮಾಜಿಕ ಕಳಕಳಿ ಕಂಡುಬರುತ್ತದೆ. ಶಿವನಿಷ್ಠರಾಗಿದ್ದ ಅವರು ಬಸವಣ್ಣನವರ ಕಾಯಕಕ್ಕೆ ಸಾಥ್ ನೀಡುತ್ತಿದ್ದರು. ಮಾದಾರ ಧೂಳಯ್ಯನವರು ರಚಿಸಿದ 106 ವಚನಗಳಲ್ಲಿ ಧ್ಯಾನ, ಮೋಕ್ಷಗಳಿಗೆ ಸರಿ ವಾಕ್ಯಗಳನ್ನು ಕಾಣಬಹುದು. ಇನ್ನು ರೈತ ಕುಟುಂಬದಿಂದ ಬಂದ ಡೋಹರ ಕಕ್ಕಯ್ಯನವರ ಆರು ವಚನಗಳು ಲಭ್ಯವಾಗಿದ್ದು, ಸಮಾಜದ ಓರೆಕೋರೆಗಳನ್ನು ತಿದ್ದುವ, ಅಧ್ಯಾತ್ಮ ಮತ್ತು ವೈಜ್ಞಾನಿಕ ವಿಚಾರವನ್ನು ಮೇಳೈಸುವ ಅಂಶಗಳು ಇವರ ವಚನಗಳಲ್ಲಿವೆ. ಸಮಗಾರ ಹರಳಯ್ಯನವರು ಸಮಾನತೆಯನ್ನು ಉಳಿಸುವುದಕ್ಕಾಗಿ ಬಸವಣ್ಣನವರಿಗೆ ಬೆಂಬಲವಾಗಿ ನಿಂತವರು. ಅಂತರ್ಜಾತಿ ವಿವಾಹದಿಂದ ಜಾತೀಯತೆ ತೊಡೆದು ಹಾಕಲು ಸಾಧ್ಯ ಎಂಬುದಾಗಿ ಸಾರಿದರು. ಉರಿಲಿಂಗ ಪೆದ್ದಿಯವರ 366 ವಚನಗಳು ದೊರೆತಿದ್ದು, ಅವುಗಳಲ್ಲಿ ವೈಚಾರಿಕತೆಯನ್ನು ಕಾಣಬಹುದು’ ಎಂದು ವಿವರಿಸಿದರು.

ಡೋಹರ ಕಕ್ಕಯ್ಯ ಸಮಾಜದ ವಿಮಲಾಬಾಯಿ ಘಜಕೋಶ ಮಾತನಾಡಿ,‘ಸಣ್ಣಪುಟ್ಟ ಸಮುದಾಯಗಳನ್ನು ಒಟ್ಟುಗೂಡಿಸಿ ಸರ್ಕಾರವು ದಲಿತ ವಚನಕಾರರ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭೀಮವ್ವ ಮಲ್ಲೇಶಪ್ಪ ಅಚ್ಚೋಲ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ತಹಶೀಲ್ದಾರ್ ಶಿವರಾಜ, ಮಾದಾರ ಚನ್ನಯ್ಯ ಸಮಾಜದ ಶಾಂತರಾಜ ಮೋಟ್ನಳ್ಳಿ, ಮಾದಾರ ಧೂಳಯ್ಯ ಸಮಾಜದ ಎಂ.ಎಂ.ಕಾಂತಿಮನಿ, ಉರಿಲಿಂಗಪೆದ್ದಿ ಸಮಾಜದ ಮರೆಪ್ಪ ಚಟ್ಟೆರಕರ್, ಸಮಗಾರ ಹರಳಯ್ಯ ಸಮಾಜದ ಮುತ್ತಣ್ಣ ಇದ್ದರು.

ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಮತ್ತು ತಂಡದವರು ನಾಡಗೀತೆ ಹಾಡಿದರು. ಸುಬಮ ಪದವಿ ಕಾಲೇಜಿನ ಉಪನ್ಯಾಸಕ ಗುರುಪ್ರಸಾದ ವೈದ್ಯ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !