ಶಹಾಪುರ: ನನ್ನ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿರಿಸಿ ಗೆಲ್ಲಿಸಿರುವುದರಿಂದ ನಿಮ್ಮ ಮುಂದೆ ಸಚಿವನಾಗಿ ಬಂದು ನಿಂತಿದ್ದೇನೆ. ದಕ್ಷ ಮತ್ತು ಪಾರದರ್ಶಕ ಆಡಳಿತ ನೀಡುವುದರ ಜತೆಗೆ ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಭರವಸೆ ನೀಡಿದರು.
ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿಶನಿವಾರ ಶಹಾಪುರ ವಿಧಾನಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರು,ಅಭಿಮಾನಿಗಳು ಹಾಗೂ ಎಲ್ಲಾ ಮತದಾರರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರದ ಅಭಿವೃದ್ದಿ ವಿಷಯ ಬಂದಾಗ ರಾಜಕೀಯ ಮಾಡಬಾರದು. ಸರ್ಕಾರದ ಗ್ಯಾರಂಟಿ ಯೋಜನೆ ಪ್ರತಿ ಫಲಾನುಭವಿಗೆ ತಲುಪುವಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು. ನಮಗೆ ಮತ ಹಾಕಿಲ್ಲವೆಂದು ದ್ವೇಷ ಮಾಡಬೇಡಿ. ಜನಕಲ್ಯಾಣ ಕೆಲಸಗಳನ್ನು ಮಾಡಿ ಅವರ ಮನಸ್ಸು ಗೆಲ್ಲುವ ಕಾಯಕ ನಮ್ಮದಾಗಬೇಕು. ಅಸೂಯೆ, ದ್ವೇಷ ಯಾರೂ ಬಯಸಬಾರದು. ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿನ ಬೆಂಬಲ ನೀಡಿ ಗೆಲುವಿನ ಉಡುಗೊರೆ ನೀಡಿದ್ದೀರಿ ಎಂದು ನೆನಪಿಸಿಕೊಂಡು ಭಾವುಕರಾದರು.
ಗ್ಯಾರಂಟಿ ಯೋಜನೆ ಜಾರಿಯು ಕಾಂಗ್ರೆಸ್ಸಿನ ಐತಿಹಾಸಿಕ ನಿರ್ಣಯವಾಗಿದೆ. ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದ ತೃಪ್ತಿ ನಮಗಿದೆ. ಭ್ರಷ್ಟಾಚಾರ ಕಡಿಮೆಯಾದರೆ ದುಡ್ಡು ಉಳಿಯುತ್ತದೆ. ಅದನ್ನು ಜನಪರ ಯೋಜನೆಗಳಿಗೆ ಸದ್ಭಳಕೆ ಮಾಡಿಕೊಳ್ಳಲು ಯಾವುದೇ ಅಡಚಣೆಯಾಗುವುದಿಲ್ಲ. ಬಿಜೆಪಿಯು ಎಂದೂ ಜನಾಶೀರ್ವಾದ ಪಡೆದುಕೊಂಡು ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದರು ಎಂದು ಕುಟುಕಿದರು.
ಕ್ಷೇತ್ರದ ಅಭಿವೃದ್ಧಿ ನಮ್ಮ ಕಣ್ಣು ಮುಂದೆ ಇದೆ. ನಗರದಲ್ಲಿ ಒಳಚರಂಡಿ ಯೋಜನೆ ಜಾರಿ,ಕುಡಿಯುವ ನೀರಿನ ಯೋಜನೆ ಜಾರಿಗೆ ಪ್ರಾಮಾಣಿಕ ಯತ್ನ ಮಾಡುವೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನ ಹಿರಿಯ ಮುಖಂಡರಾದ ತಿಪ್ಪಣ್ಣಪ್ಪ ಕಮಕನೂರ, ರಾಜಶೇಖರ ಪಾಟೀಲ್ ವಜ್ಜಲ, ಚಂದ್ರಶೇಖರ ಆರಬೋಳ, ಶಂಕ್ರಣ್ಣ ವಣಿಕ್ಯಾಳ, ಗುರುನಾಥರಡ್ಡಿ ಪಾಟೀಲ್ ಹಳಿಸಗರ, ಡಾ.ಮಲ್ಲಣಗೌಡ ಉಕ್ಕಿನಾಳ, ಶರಣಪ್ಪ ಸಲಾದಪುರ, ಹಣಮಂತರಾಯ ದೊರೆ ವನದುರ್ಗ, ಆರ್.ಚೆನ್ನಬಸ್ಸು ವನದುರ್ಗ, ಮಲ್ಲಪ್ಪ ನಾಯಕ ವನದುರ್ಗ, ಸಯ್ಯದ ಇಬ್ರಾಹಿಂಸಾಬ್ ಜಮಾದಾರ, ಶಾಂತಗೌಡ ಪಾಟೀಲ್ ಹಾಲಬಾವಿ, ಗೌಡಪ್ಪಗೌಡ ಆಲ್ದಾಳ, ಗುಂಡಪ್ಪ ತುಂಬಿಗಿ, ವಸಂತ ಸುರಪುರಕರ್, ಅಮರೇಶ ಇಟಗಿ, ಚರಿತಾ ಕೊಂಕಲ್, ನೀಲಕಂಠ ಬಡಿಗೇರ, ಲಾಲ್ ಅಹ್ಮದ್ ಬಾಂಬೆಸೇಠ್, ಬಸಣ್ಣಗೌಡ ಯಾಳಗಿ, ಸಿದ್ದಣ್ಣಗೌಡ ಪಾಟೀಲ್, ಇಬ್ರಾಹಿಂ ಶಿರವಾಳ, ಶಾಂತಗೌಡ ನಾಗನಟಿಗಿ, ಅಲ್ಲಾಪಟೇಲ್ ಮಕ್ತಾಪುರ, ಸಿದ್ದಣ್ಣಗೌಡ, ನಿಂಗಣಗೌಡ ದೇಸಾಯಿ, ಡಾ.ಭೀಮರಡ್ಡಿ ಮರಕಲ್, ಡಾ.ಬಸವರಾಜ ಇಜೇರಿ, ಹೇಮರಡ್ಡಿ ಕೊಂಗಂಡಿ, ಬಸವರಾಜ್ ಚಿಂಚೋಳಿ, ರುದ್ರಣ್ಣ ಚಟ್ರಕಿ,ಸಯ್ಯದ ಸಫಿಯುದ್ದಿನ ಖಾದ್ರಿ, ರೇಣುಕಾ ಚಟ್ರಕಿ, ಬಸಮ್ಮ ರಾಂಪುರೆ ಇದ್ದರು.
‘ಕಾರ್ಯಕರ್ತರಿಗೆ ಭೇಟಿಗೆ ಅವಕಾಶ ನೀಡಿ’
ಶಹಾಪುರ: ಗ್ರಾಮೀಣ ಪ್ರದೇಶದಿಂದ ಆಗಮಿಸುವ ಒಬ್ಬ ಸಾಮಾನ್ಯ ಕಾರ್ಯಕರ್ತನು ನೇರವಾಗಿ ಸಚಿವರಿಗೆ ಭೇಟಿಯಾಗಲು ಅವಕಾಶ ನೀಡಬೇಕು. ಎಲ್ಲಾ ಕಾರ್ಯಕರ್ತರು ಸಮಾನರು ಎಂಬ ಭಾವನೆ ಮೂಡಿಸಬೇಕು. ಸಾಧ್ಯವಾದಷ್ಟು ಹೊಗಳು ಭಟ್ಟರು ದೂರವಿಡಿ ಎಂದು ಕೆಪಿಸಿಸಿ ರಾಜ್ಯ ಘಟಕದ ಕಾರ್ಯದರ್ಶಿ ಚರಿತಾ ಕೊಂಕಲ್ ಸಚಿವರಿಗೆ ಕಿವಿ ಮಾತು ಹೇಳಿದರು. ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬರಿಗೂ ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಹೆದ್ದಾರಿ ಮೇಲೆ ಟ್ರಾಫಿಕ್ ಜಾಮ್ ಪ್ರಯಾಣಿಕರು ಪರದಾಡಬೇಕಾಯಿತು.
‘ಟಿ.ವಿ. ಮಾಧ್ಯಮಗಳ ಬಾಯಿ ಬಂದ್’
ಶಹಾಪುರ: ಬಿಜೆಪಿ ಪಕ್ಷಕ್ಕಿಂತ ಟಿವಿ ಮಾಧ್ಯಮದವರಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಚಿಂತೆ ಜಾಸ್ತಿಯಾಗಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪಗೌಡ ದರರ್ಯನಾಪುರ ಮಾಧ್ಯಮಗಳ ವಿರುದ್ದ ಹರಿ ಹಾಯ್ದರು. ಗ್ಯಾರಂಟಿ ಯೋಜನೆ ಕುರಿತು ಅನವಶ್ಯಕವಾಗಿ ಗೊಂದಲ ಉಂಟು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಒಂದು ದಿನವೂ ಬಿಜೆಪಿ ಕಪ್ಪು ಹಣ ತರುವ ಬಗ್ಗೆ ಬೆಲೆ ಏರಿಕೆ ವಿರುದ್ಧ ಟಿ.ವಿ. ಮಾಧ್ಯಮದವರು ಚಕಾರ ಎತ್ತಲಿಲ್ಲ ಎಂದು ಕಿಡಿಕಾರಿದರು. ಕಟೀಲ್ ಅಧ್ಯಕ್ಷ ಮಾಡಿದ್ದರಿಂದ ಬಿಜೆಪಿ ಸತ್ಯಾನಾಶ: ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಏನು ಮಾತಾಡುತ್ತಾರೆ ಗೊತ್ತಾಗುವುದಿಲ್ಲ. ಗ್ಯಾರಂಟಿ ಯೋಜನೆ ಕನ್ನಡದಲ್ಲಿವೆ ಮೊದಲು ಓದಿ ನಂತರ ಮಾತನಾಡಲಿ. ಅವರನ್ನು ಅಧ್ಯಕ್ಷ ಮಾಡಿದ್ದರಿಂದ ಬಿಜೆಪಿ ಸತ್ಯಾನಾಶ ಆಗಿದೆ ಎಂದು ಶರಣಬಸಪ್ಪಗೌಡ ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.