ಮಿಷನ್ ಇಂದ್ರಧನುಷ್ ಅಭಿಯಾನದ ಯಶಸ್ಸಿಗೆ ಶ್ರಮಿಸಿ

7
ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಸಲಹೆ

ಮಿಷನ್ ಇಂದ್ರಧನುಷ್ ಅಭಿಯಾನದ ಯಶಸ್ಸಿಗೆ ಶ್ರಮಿಸಿ

Published:
Updated:
Deccan Herald

ಯಾದಗಿರಿ:‘ಮಹತ್ವಾಕಾಂಕ್ಷೆ ಜಿಲ್ಲೆಯ ಗ್ರಾಮ ಸ್ವರಾಜ್ ಅಭಿಯಾನದಡಿ ಆಗಸ್ಟ್ 13ರಿಂದ 24 ರವರೆಗೆ ಜಿಲ್ಲೆಯಾದ್ಯಂತ ನಡೆಯುವ ನೇ ಸುತ್ತಿನ ವಿಶೇಷ ಮಿಷನ್ ಇಂದ್ರಧನುಷ್ ಕಾರ್ಯಕ್ರಮ ಯಶಸ್ವಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮಿಷನ್ ಇಂದ್ರಧನುಷ್ ಯಶಸ್ವಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಮಿಷನ್ ಇಂದ್ರಧನುಷ್ ಅಭಿಯಾನದಲ್ಲಿ ಯಾವುದೇ ಮಗು ಮತ್ತು ಗರ್ಭಿಣಿಯರು ಲಸಿಕೆ ಹಾಗೂ ಚುಚ್ಚುಮದ್ದಿನಿಂದ ವಂಚಿತವಾಗಬಾರದು. ತಪ್ಪದೇ ಲಸಿಕೆ ನೀಡಬೇಕು. ಇಂದ್ರಧನುಷ್ ಲಸಿಕಾ ಅಭಿಯಾನ ಮತ್ತು ಅದರ ಪ್ರಯೋಜನಗಳ ಬಗ್ಗೆ ಮಹಿಳೆಯರು ಹಾಗೂ ಗರ್ಭಿಣಿಯರಲ್ಲಿ ಅರಿವು ಮೂಡಿಸಿದಾಗ ಅವರೇ ಮುಂದೆ ಬಂದು ಲಸಿಕೆ ಪಡೆಯುತ್ತಾರೆ’ ಎಂದರು.

‘ಅಧಿಕಾರಿಗಳು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡಿದೆ ಪ್ರತಿದಿನ ಕೆಲಸ ಮಾಡಬೇಕು. ಆಗ ಶೇ100ರಷ್ಟು ಗುರಿ ಸಾಧನೆ ಸಾಧ್ಯವಾಗುತ್ತದೆ. ಆರೋಗ್ಯ ಸಮಸ್ಯೆಗಳಾದ ಡೆಂಗಿ, ಚಿಕೂನ್‌ಗುನ್ಯ, ಅತಿಸಾರ, ಭೇದಿ ಮುಂತಾದ ರೋಗಗಳನ್ನು ಮುನ್ನೆಚ್ಚರಿಕೆ ಕ್ರಮಗಳ ಮೂಲಕ ತಡೆಗಟ್ಟಬೇಕು’ ಎಂದು ಸಲಹೆ ನೀಡಿದರು.

‘ಶಹಾಪುರ ತಾಲ್ಲೂಕಿನ ಹತ್ತಿಗೂಡೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮಕ್ಕಳಿಗೆ ಲಸಿಕೆ ನೀಡಿದರೂ ಇದರ ವರದಿ ಅಪ್‌ಲೋಡ್ ಮಾಡದ ಕಾರಣ ಪ್ರತಿಶತ ಸಾಧನೆ ಕಡಿಮೆಯಾಗಿದೆ’ ಎಂದು ಜಿಲ್ಲಾಧಿಕಾರಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಜಿಲ್ಲೆಯ 2–3 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಒಬ್ಬ ಡಾಟಾ ಎಂಟ್ರಿ ಆಪರೇಟರ್ ಅನ್ನು ಅರ್ಹ ಮಾನವ ಸಂಪನ್ಮೂಲ ಸಂಸ್ಥೆಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಈ ಬಗ್ಗೆ ಅವಶ್ಯವಿರುವ ಡಾಟಾ ಎಂಟ್ರಿ ಆಪರೇಟರ್‌ಗಳ ಬಗ್ಗೆ ವಿಚಾರಿಸಿ ತಿರ್ಮಾನ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಭಗವಂತ ಅನವಾರ ಅವರಿಗೆ ಸೂಚಿಸಿದರು.

‘ಜಿಲ್ಲೆಯ ಜನರು ಆರೋಗ್ಯ ಸಮಸ್ಯೆಗಳಿಗೆ ಯಾದಗಿರಿ ಜಿಲ್ಲಾ ಆಸ್ಪತ್ರೆ ಸಮೀಪವಿದ್ದರೂ ಪಕ್ಕದ ಜಿಲ್ಲೆಗಳಿಗೆ ತೆರಳುತ್ತಾರೆ ಎಂಬ ದೂರು ಇದೆ. ಇದನ್ನು ಪರಿಹರಿಸಲು ವೈದ್ಯರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳ ವಿಶ್ವಾಸ ಗಳಿಸಬೇಕು’ ಎಂದು ಸೂಚಿಸಿದರು. ಆಗ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವಕುಮಾರ್ ರಾಯಚೂರಕರ್ ಮಾತನಾಡಿ,‘ಅಪರೂಪದ ಪ್ರಕರಣಗಳನ್ನು ಮಾತ್ರ ರಾಯಚೂರು ಮತ್ತು ಕಲಬುರ್ಗಿ ಜಿಲ್ಲಾಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತಿದೆ’ ಎಂದು ಉತ್ತರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಮಾತನಾಡಿ,‘ಆರೋಗ್ಯ ಇಲಾಖೆಯ ಅಧಿಕಾರಿಗಳು ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು. ಅಗತ್ಯ ಲಸಿಕೆ ಸಂಗ್ರಹಿಸಿಟ್ಟುಕೊಂಡಿರಬೇಕು. ನಿಗದಿತ ಅವಧಿಯಲ್ಲಿ ಫಲಾನುಭವಿಗಳಿಗೆ ಲಸಿಕೆ ತಲುಪಿಸಬೇಕು’ ಎಂದು ಸೂಚಿಸಿದರು.

ಕಲಬುರ್ಗಿ ವಿಭಾಗಮಟ್ಟದ ವೈದ್ಯಕೀಯ ಸರ್ವೇಕ್ಷಣಾಧಿಕಾರಿ (ವಿಶ್ವ ಆರೋಗ್ಯ ಸಂಸ್ಥೆ) ಡಾ.ಅನಿಲ್‌ಕುಮಾರ್ ಎಸ್.ತಾಳಿಕೋಟಿ ಮಾತನಾಡಿ, ಮಕ್ಕಳ ಸರ್ವೇ ಕುರಿತು ಹಾಗೂ ಇಂದ್ರಧನುಷ್ ಮಿಷನ್ ಯಶಸ್ವಿಗೆ ರೂಪಿಸಿರುವ ಯೋಜನೆಯ ಕುರಿತು ಸಭೆಯಲ್ಲಿ ವಿವರಿಸಿದರು.

13ರಿಂದ ಲಸಿಕೆ ಆರಂಭ:
ಗ್ರಾಮ ಸ್ವರಾಜ್ ಅಭಿಯಾನದ ಅಡಿ ಜಿಲ್ಲೆಯಾದ್ಯಂತ ಆಗಸ್ಟ್ 13ರಂದು ಸೋಮವಾರ ಇಂದ್ರಧನುಷ್ ಮಿಷನ್ ಆರಂಭವಾಗಲಿದೆ. ಆ.14, 17, 18, 20, 21 ಹಾಗೂ 24ರಂದು ಒಟ್ಟು 7 ದಿನಗಳ ಕಾಲ 0–2 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಮತ್ತು ಗರ್ಭಿಣಿಯರಿಗೆ ಚುಚ್ಚುಮದ್ದು ನೀಡಲಾಗುವುದು’ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಮಾಹಿತಿ ನೀಡಿದರು.

ಯುನಿಸೆಫ್ ಕನ್ಸಲ್‌ಟೆಂಟ್ ಡಾ.ಅಶ್ವಿನಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸೂರ್ಯಪ್ರಕಾಶ ಎಂ.ಕಂದಕೂರ, ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !