ಸಂಚಾರ ನಿಯಮ ಸಡಿಲ: ಪೊಲೀಸರಿಗೆ ತರಾಟೆ

7
ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದ ಜಿಲ್ಲಾಧಿಕಾರಿ

ಸಂಚಾರ ನಿಯಮ ಸಡಿಲ: ಪೊಲೀಸರಿಗೆ ತರಾಟೆ

Published:
Updated:
Deccan Herald

ಯಾದಗಿರಿ: ಜಿಲ್ಲಾಕೇಂದ್ರದ ನಗರ ಪ್ರದೇಶದಲ್ಲಿ ನಿತ್ಯ ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದ್ದರೂ, ಸಂಚಾರ ಪೊಲೀಸರು ಕಂಡು ಕಾಣದಂತಿದ್ದಾರೆ. ಸುಪ್ರೀಂ ಕೋರ್ಟ್ ಹೆಲ್ಮೆಟ್‌ ಕಡ್ಡಾಯಗೊಳಿಸಿ ಆದೇಶಿಸಿದ್ದರೂ ನಗರದಲ್ಲಿ ಒಬ್ಬರೂ ಹೆಲ್ಮೆಟ್ ಧರಿಸುತ್ತಿರುವುದು ಕಂಡುಬರುತ್ತಿಲ್ಲ.

ಹಾಗಾದರೆ, ಜಿಲ್ಲೆಯಲ್ಲಿನ ಸಂಚಾರ ಪೊಲೀಸರು ಏನು ಮಾಡುತ್ತಿದ್ದಾರೆ? ಅವರ ಕರ್ತವ್ಯದ ಬಗ್ಗೆ ನಾವು ಅರಿವು ಮೂಡಿಸಬೇಕೇ? ಸಂಚಾರ ನಿಯಮ ಉಲ್ಲಂಘಿಸುವ ಸವಾರರಿಗೆ ಸ್ಥಳದಲ್ಲಿಯೇ ತಕ್ಷಣ ದಂಡ ವಿಧಿಸುವ ಮೂಲಕ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ನೀವು ಕ್ರಮ ಎದುರಿಸಬೇಕಾಗುತ್ತದೆ..

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಸಂಚಾರ ಪೊಲೀಸರಿಗೆ ಚಾಟಿ ಬೀಸಿದ ಪರಿ ಇದು.

‘ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಚಕ್ರದ ವಾಹನಗಳ ಚಾಲಕರು ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಕೆಲ ಸವಾರರು ವೃತ್ತಗಳಲ್ಲಿ ಕೇವಲ 10 ಮೀಟರ್‌ನಷ್ಟು ರಸ್ತೆ ಕ್ರಮಿಸುವುದನ್ನು ಉಳಿಸಲು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿ, ನಿಯಮವನ್ನು ಉಲ್ಲಂಘಿಸುತ್ತಾರೆ. ಇದರಿಂದ ಇತರೆ ವಾಹನಗಳ ಸವಾರರಿಗೆ ತೊಂದರೆಯಾಗಿ ಅಪಘಾತ ಸಂಭವಿಸುತ್ತವೆ. ಇಂತಹ ಸಾಮಾನ್ಯ ತಿಳಿವಳಿಕೆಯೂ ಕೂಡ ಜನರಲ್ಲಿ ಇಲ್ಲ. ಇನ್ನು ಸಂಚಾರ ಪೊಲೀಸರು ಕೂಡ ಇದನ್ನು ಕಂಡು ಕಾಣದಂತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಗರದಲ್ಲಿ ಸ್ಥಳಾವಕಾಶ ಇರುವ ಕಡೆಗಳಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ, ಟ್ರಾಫಿಕ್ ಸಿಗ್ನಲ್ ಅಳವಡಿಕೆ ಹಾಗೂ ರಸ್ತೆ ಉಬ್ಬುಗಳನ್ನು ನಿರ್ಮಿಸುವ ಸಂಬಂಧ ಪ್ರಾದೇಶಿಕ ಸಾರಿಗೆ ಇಲಾಖೆ, ನಗರಸಭೆ ಮತ್ತು ಸಂಚಾರ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ಸೂಚಿಸಿದರು.

‘ಹೊಸ ಬಸ್ ನಿಲ್ದಾಣ ಎದುರುಗಡೆ ಆಟೊಗಳ ನಿಲುಗಡೆಗೆ ಒಂದು ತಿಂಗಳೊಳಗೆ ರೇಲಿಂಗ್ ವ್ಯವಸ್ಥೆ ಮಾಡಬೇಕು. ಸುಭಾಶ್ಚಂದ್ರ ಬೋಸ್ ವೃತ್ತದ ಬಳಿ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು, ರಸ್ತೆಯನ್ನು ಸಮನಾಂತರಗೊಳಿಸಬೇಕು. ಶಹಾಪುರ ನಗರದಲ್ಲಿ ಸಿ ಸಿ ಟಿವಿ ಕ್ಯಾಮೆರಾ ಹಾಗೂ ಸಿಗ್ನಲ್‌ಗಳ ಅಳವಡಿಕೆ ಕೆಲಸವನ್ನು 20 ದಿನಗಳಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ರಸ್ತೆ ಸಾರಿಗೆ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾರಿಗೆ, ಪೊಲೀಸ್ ಇಲಾಖೆ ಮತ್ತು ಸಂಚಾರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಬೇಕು. ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಅಪಘಾತ ಸಂಭವಿಸಿದ ನಂತರ ಅವರ ಕುಟುಂಬಗಳ ಮೇಲಾಗುವ ಪರಿಣಾಮಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದು ಸೂಚಿಸಿದರು.

ಯಾದಗಿರಿ ರೈಲು ನಿಲ್ದಾಣದ ಬಳಿ ಆಟೊಗಳ ನಿಲುಗಡೆಗೆ ರೇಲಿಂಗ್ ವ್ಯವಸ್ಥೆ ಮಾಡಿಸುವಂತೆ ಸ್ಟೇಷನ್ ವ್ಯವಸ್ಥಾಪಕರಿಗೆ ಪತ್ರ ಬರೆಯುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸಲಹೆ ನೀಡಿದರು.

ಬಿಡಾಡಿದನ ರಸ್ತೆಗೆ ಬಿಟ್ಟರೆ ದಂಡ: ಬಿಡಾಡಿದನಗಳನ್ನು ರಸ್ತೆಗೆ ಬಿಡುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾರೆ. ಆದ್ದರಿಂದ ಬಿಡಾಡಿದನಗಳನ್ನು ರಸ್ತೆಗೆ ಬಿಡದಂತೆ ಎಚ್ಚರಿಕೆ ನೀಡಬೇಕು. ಉಲ್ಲಂಘಿಸಿದಲ್ಲಿ ಅವುಗಳನ್ನು ವಶಪಡಿಸಿಕೊಂಡು ನಗರದ ಹನುಮಾನ ಗೋಶಾಲೆ ಅಥವಾ ಶಹಾಪುರದ ವಿಶ್ವ ಗೋಮಾತಾ ಗುರುಕುಲ ಗೋಶಾಲೆಗಳಿಗೆ ಸಾಗಿಸಬೇಕು. ಬಿಡಾಡಿದನಗಳ ಮಾಲೀಕರು ಬಿಡಿಸಿಕೊಂಡು ಹೋಗಲು ಬಂದಾಗ ಹೆಚ್ಚಿನ ದಂಡ ವಿಧಿಸುವಂತೆ ಪೌರಾಯುಕ್ತ ಸಂಗಪ್ಪ ಉಪಾಸೆ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತರಾವ ವಿ.ಕುಲಕರ್ಣಿ, ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ, ವಾರ್ತಾಧಿಕಾರಿ ಸಿದ್ದೇಶ್ವರಪ್ಪ, ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ನಾಗರಾಜ, ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್ ಭೀಮರತ್ನಾ ಸಜ್ಜನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉಪವಿಭಾಗದ ಎಇಇ ಸಿದ್ದಲಿಂಗಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಚನ್ನಬಸಪ್ಪ ಸಭೆಯಲ್ಲಿ ಇ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !