ನಗರದ ಜನರಿಗೂ ‘ಹಾಪ್‌ಕಾಮ್ಸ್’ ಸಿಗಲಿ: ಡಿಸಿ ಎಂ.ಕೂರ್ಮಾ ರಾವ್ ಅಧಿಕಾರಿಗಳಿಗೆ ಸಲಹೆ

6

ನಗರದ ಜನರಿಗೂ ‘ಹಾಪ್‌ಕಾಮ್ಸ್’ ಸಿಗಲಿ: ಡಿಸಿ ಎಂ.ಕೂರ್ಮಾ ರಾವ್ ಅಧಿಕಾರಿಗಳಿಗೆ ಸಲಹೆ

Published:
Updated:
Prajavani

ಯಾದಗಿರಿ: ‘ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಹಾಪ್‌ಕಾಮ್ಸ್ ಇವೆ. ಆದರೆ ತೋಟಗಾರಿಕೆ ಇಲಾಖೆ ಜಿಲ್ಲೆಯ ಜನರಿಗೆ ಇಂತಹ ಸೌಲಭ್ಯ ನೀಡಲು ಮುಂದಾಗಿಲ್ಲ. ಕೂಡಲೇ ಜಿಲ್ಲಾಕೇಂದ್ರದಲ್ಲಿ ‘ಹಾಪ್‌ಕಾಮ್ಸ್’ ಮಳಿಗೆ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ತೋಟಗಾರಿಕೆ ಕ್ಷೇತ್ರ, ಸಸ್ಯಾಗಾರಗಳ ದಾಖಲಾತಿ, ಒತ್ತುವರಿ ಹಾಗೂ ನ್ಯಾಯಾಲಯದ ಪ್ರಕರಣಗಳ ಸಂಬಂಧ ವಿವಿಧ ಇಲಾಖೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹಾಪ್‌ಕಾಮ್ಸ್ ಮಳಿಗೆ ಆರಂಭಕ್ಕೆ ನಗರಸಭೆಗೆ ಸೂಕ್ತ ಪ್ರಸ್ತಾವ ಸಲ್ಲಿಸಬೇಕು. ತೋಟಗಾರಿಕೆ ಇಲಾಖೆಗೆ ಬರುವ ಅನುದಾನವನ್ನು ಯಾವುದೇ ಕಾರಣಕ್ಕೂ ವಾಪಸ್ ಹೋಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಹೂಗುಚ್ಛ ಮಾರಾಟ ಮಳಿಗೆ ಇಲ್ಲ. ಮದುವೆ, ಸಭೆ-ಸಮಾರಂಭ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೂ ಹೂಗುಚ್ಛಗಳ ಬೇಡಿಕೆ ಇರುತ್ತದೆ. ಆದರೆ, ಜಿಲ್ಲೆಯ ಜನ ಪಕ್ಕದ ಜಿಲ್ಲೆಗಳಾದ ರಾಯಚೂರು ಮತ್ತು ಕಲಬುರ್ಗಿಯಿಂದ ಹೂಗುಚ್ಛ ಕೊಂಡು ತರುವಂತಹ ಸ್ಥಿತಿ ಇದೆ’ ಎಂದರು.

ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾಬು ಮಾತನಾಡಿ, ‘1972ರಲ್ಲಿ ಹತ್ತಿಕುಣಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ಭೂಸ್ವಾಧೀನಗೊಂಡ ಜಮೀನಿನಲ್ಲಿ ತೋಟಗಾರಿಕೆ ಕ್ಷೇತ್ರ ಸ್ಥಾಪನೆಯಾಗಿದೆ. ಕ್ಷೇತ್ರದ ಒಟ್ಟು ವಿಸ್ತೀರ್ಣ 63.28 ಎಕರೆ ಇದ್ದು, ಇದರಲ್ಲಿ 18.19 ಎಕರೆ ಮಾತ್ರ ತೋಟಗಾರಿಕೆ ಇಲಾಖೆಯ ಹೆಸರಿಗಿದೆ. ಇಲಾಖೆಯ ಕಬ್ಜೆಯಲ್ಲಿರುವ ಉಳಿದ 45.09 ಎಕರೆ ಜಮೀನು ಇಲಾಖೆ ಹೆಸರಿಗೆ ಸೇರಿಸಬೇಕಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ,ತೋಟಗಾರಿಕೆ ಇಲಾಖೆ ಹೆಸರಿಗೆ ಬದಲಾಯಿಸಲು ಮುಖ್ಯವಾಗಿ ಸರ್ವೇ ಕಾರ್ಯ ನಡೆಸಬೇಕು. ಈ ಪ್ರಕ್ರಿಯೆ ಒಂದು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ, ಹತ್ತಿಕುಣಿ ಜಲಾಶಯ ಜಿಲ್ಲಾ ಕೇಂದ್ರಕ್ಕೆ ಹತ್ತಿರವಾಗಿರುವುದರಿಂದ ಸಾಕಷ್ಟು ಪ್ರವಾಸಿಗರು ಜಲಾಶಯಕ್ಕೆ ಭೇಟಿ ನೀಡುತ್ತಾರೆ. ಆದ್ದರಿಂದ ಪ್ರವಾಸೋದ್ಯಮ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಪರಸ್ಪರ ಸಹಕಾರದಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂದು ಹತ್ತಿಕುಣಿ ತೋಟಗಾರಿಕೆ ಕ್ಷೇತ್ರದ ಸಹಾಯಕ ನಿರ್ದೇಶಕ ಸಮಿಯುದ್ದೀನ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಜನೀಕಾಂತ ಅವರಿಗೆ ಸೂಚಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಬಸವಸಾಗರ ಜಲಾಶಯ ನಿರ್ಮಾಣದಡಿಯಲ್ಲಿ ಭೂಸ್ವಾಧೀನಗೊಂಡ ಜಮೀನಿನಲ್ಲಿ ತೋಟಗಾರಿಕೆ ಇಲಾಖೆಗೆ 93.34 ಎಕರೆ ಹಂಚಿಕೆ ಮಾಡಲಾಗಿದೆ. ಆದರೆ, ಪಹಣಿಗಳಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಎಂದು ಬರುತ್ತಿರುವುದರಿಂದ ಈ ಜಮೀನನ್ನು ತೋಟಗಾರಿಕೆ ಇಲಾಖೆ ಹೆಸರಿಗೆ ಬದಲಾಯಿಸಿಕೊಡುವಂತೆ ಸಹಾಯಕ ಆಯುಕ್ತರಿಗೆ ಪತ್ರ ಬರೆಯಲು ನಿರ್ದೇಶಿಸಿದರು. ತದನಂತರ ಸಹಾಯಕ ಆಯುಕ್ತರು, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ವಿಶೇಷ ಭೂಸ್ವಾಧೀನಾಧಿಕಾರಿಗೆ ಪತ್ರ ಬರೆಯಲಿ. ಅವರ ಪ್ರತಿಕ್ರಿಯೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಯಾದಗಿರಿ ಜಿಲ್ಲಾ ಕಚೇರಿ ನರ್ಸರಿಯಲ್ಲಿ ಸುಮಾರು 40 ವರ್ಷಗಳಿಂದ ತೋಟಗಾರಿಕೆ ಇಲಾಖೆಯ ಚಟುವಟಿಕೆಗಳು ನಡೆಯುತ್ತಿವೆ. ಆದರೆ, ಈ ಆಸ್ತಿಯಲ್ಲಿ ನಗರಸಭೆಯ ಆಸ್ತಿ ಎಂದು ನಮೂದಾಗಿರುವುದರಿಂದ ಅಭಿವೃದ್ಧಿಗಾಗಿ ಅನುದಾನ ಖರ್ಚು ಮಾಡಲು ತೊಂದರೆಯಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಬಾಬು ಅವರು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಆಗ ಜಿಲ್ಲಾಧಿಕಾರಿ ಮಾತನಾಡಿ, ಈ ಜಾಗವನ್ನು ತೋಟಗಾರಿಕೆ ಇಲಾಖೆಗೆ ವರ್ಗಾವಣೆ ಮಾಡಲು ಸೂಕ್ತ ಕ್ರಮ ಕೈಗೊಂಡು, ಶೀಘ್ರ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಪೌರಾಯುಕ್ತ ಸಂಗಪ್ಪ ಉಪಾಸೆ ಅವರಿಗೆ ಸೂಚಿಸಿದರು.

ಅದೇ ರೀತಿ ವಡಗೇರಾ ತಾಲ್ಲೂಕಿನ ಉಳ್ಳೇಸೂಗೂರ ತೋಟಗಾರಿಕೆ ಕ್ಷೇತ್ರದ ಪಹಣಿಯಲ್ಲಿ ರಾಜ್ಯಪಾಲರು ಕರ್ನಾಟಕ ಸರ್ಕಾರ ಎಂದು ನಮೂದಾಗಿರುವುದನ್ನು ತೋಟಗಾರಿಕೆ ಇಲಾಖೆ ಕರ್ನಾಟಕ ಸರ್ಕಾರ ಎಂದು ಬದಲಾಯಿಸಲು ಕ್ರಮ ಕೈಗೊಳ್ಳಬೇಕು. ಉಳಿದ ಶಹಾಪುರ ಮತ್ತು ಸುರಪುರ ತಾಲ್ಲೂಕು ಕಚೇರಿ ನರ್ಸರಿಗಳನ್ನು ಸಹ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ, ಇಲಾಖೆಗೆ ವರ್ಗಾಯಿಸುವಂತೆ ಸಂಬಂಧಪಟ್ಟ ತಹಶೀಲ್ದಾರರಿಗೆ ನಿರ್ದೇಶಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಉಪ ವಿಭಾಗಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ಸುರೇಶ ಅಂಕಲಗಿ, ಸಂಗಮೇಶ ಜಿಡಗೆ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವೈಜಂತಾ ಎಂ.ಕದಮ್, ಆಂಜನೇಯ, ನಾರಾಯಣಪುರ ತೋಟಗಾರಿಕೆ ಕ್ಷೇತ್ರದ ಸಹಾಯಕ ನಿರ್ದೇಶಕ ಬಸನಗೌಡ ಪಾಟೀಲ್, ಶಹಾಪುರ ಹಿರಿಯ ಸಹಾಯಕ ನಿರ್ದೇಶಕ ಶಶಿಕಾಂತ, ಸುರಪುರ ಹಿರಿಯ ಸಹಾಯಕ ನಿರ್ದೇಶಕ ಭೀಮರಾವ್ ಸಭೆಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !