14 ಸಾವಿರ ಹೊಸ ಮತದಾರರ ಸೇರ್ಪಡೆ

ಗುರುವಾರ , ಏಪ್ರಿಲ್ 25, 2019
29 °C
ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಡಾ.ಜೆ.ರವಿಶಂಕರ್ ಹೇಳಿಕೆ

14 ಸಾವಿರ ಹೊಸ ಮತದಾರರ ಸೇರ್ಪಡೆ

Published:
Updated:
Prajavani

ಯಾದಗಿರಿ:‘ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಜ.16ರಿಂದ ಮಾರ್ಚ್21ರವರೆಗೆ 14,488 ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ’ ಎಂದು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಡಾ.ಜೆ.ರವಿಶಂಕರ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ವಿಧಾನಸಭಾ,ಲೋಕಸಭಾ ಚುನಾವಣೆಯ ಮಸ್ಟರ್ ರೋಲ್ ಕುರಿತ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು.

‘2019ರ ಜ.16ರಂತೆ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ 9,77,217 ಮತದಾರರಿದ್ದಾರೆ. ನಿರಂತರವಾಗಿ ಅಪ್‌ಡೇಟ್ ಮಾಡುತ್ತಿರುವುದರಿಂದ 14,488 ಹೊಸ ಮತದಾರರ ಸೇರ್ಪಡೆಯಾಗಿದೆ. 3,815 ಅನರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ’ ಎಂದರು.

‘ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿಧಾನಸಭಾ ಕ್ಷೇತ್ರಗಳ ಮತದಾರರ ಭಾವಚಿತ್ರ ಒಳಗೊಂಡ ಪಟ್ಟಿಯನ್ನು ಯಾವುದೇ ಲೋಪದೋಷ ಇಲ್ಲದಂತೆ ಸಿದ್ಧಪಡಿಸಿದರೆ ಲೋಕಸಭಾ ಚುನಾವಣೆ ಸುಸೂತ್ರವಾಗಿ ನಡೆಸಲು ಸಾಧ್ಯವಾಗುತ್ತದೆ. ಅರ್ಹ ಮತದಾರರು ಅರ್ಜಿ ನಮೂನೆ 6ರಲ್ಲಿ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಲು ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಅಂದರೆ ಏಪ್ರಿಲ್ 4ರವರೆಗೂ ಅವಕಾಶ ಇದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿ ಮತದಾರರ ಪಟ್ಟಿ ಸಿದ್ಧಪಡಿಸಬೇಕು. ತದನಂತರ ಅರ್ಹ ಮತದಾರರಿಗೆ ಚುನಾವಣಾ ಗುರುತಿನ ಚೀಟಿ ತಲುಪಿಸಲು ಕ್ರಮ ವಹಿಸಬೇಕು’ ಎಂದು ನಿರ್ದೇಶಿಸಿದರು.

‘ಕೇವಲ ಚುನಾವಣಾ ಗುರುತಿನ ಚೀಟಿ ಹೊಂದಿದ್ದ ಮಾತ್ರಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ಇದೆ ಎಂದು ಭಾವಿಸುವಂತಿಲ್ಲ. ಕಾರಣ, ಪ್ರಸ್ತುತ ಚಾಲ್ತಿಯಲ್ಲಿರುವ ಪಟ್ಟಿಯಲ್ಲಿ ಮತದಾರರು ತಮ್ಮ ಹೆಸರು ಇರುವ ಬಗ್ಗೆ ಖಚಿತಪಡಿಸಿಕೊಳ್ಳಲು ತಿಳಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ಸಹಾಯವಾಣಿ ಸಂಖ್ಯೆ-1050 ಗೆ ಕರೆ ಮಾಡಿ ಅಥವಾ ವೆಬ್‌ಸೈಟ್ http://ceokarnataka.kar.nic.in ಅಥವಾ ವೋಟರ್ ಹೆಲ್ಪಲೈನ್ ಮೊಬೈಲ್ ಆಪ್ ಮೂಲಕ ಖಚಿತಪಡಿಸಿಕೊಳ್ಳಬಹು. ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ,‘ಜಿಲ್ಲೆಯಲ್ಲಿ ಒಟ್ಟು 1,135 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆವಾರು ಮತದಾರರ ಪಟ್ಟಿಯನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಹೊಸ ಮತದಾರರ ಸೇರ್ಪಡೆಗಾಗಿ ಅರ್ಜಿ ನಮೂನೆ 6 ಅನ್ನು ಮಾತ್ರ ಸ್ವೀಕರಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಮತದಾರರ ಪಟ್ಟಿಯಲ್ಲಿ ಮತದಾರರ ಭಾವಚಿತ್ರವನ್ನು ಅಳವಡಿಸುವ ಕಾರ್ಯ ಶೇ.99.99ರಷ್ಟು ಪೂರ್ಣಗೊಂಡಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಾದ್ಯಂತ ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗಾಗಿ ನೇಮಕ ಮಾಡಿರುವ ವಿವಿಧ ತಂಡಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್, ಎಂಸಿಸಿ ನೋಡಲ್ ಅಧಿಕಾರಿಗಳಾದ ಕವಿತಾ ಎಸ್.ಮನ್ನಿಕೇರಿ ಮಾತನಾಡಿ,‘ಅರ್ಹ ಮತದಾರರು ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಲು ಇನ್ನೂ ಅವಕಾಶ ಇರುವುದರಿಂದ 18 ವರ್ಷ ತುಂಬಿದ ಪ್ರತಿಯೊಬ್ಬರೂ ಹೆಸರು ನೋಂದಾಯಿಸಿಕೊಳ್ಳಲು ತಿಳಿಸಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿರುವ ಗ್ರಾಮಗಳಲ್ಲಿ, ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿರುವ ಗ್ರಾಮಗಳಲ್ಲಿ ಹಾಗೂ ಮತದಾನ ಕೇಂದ್ರಗಳಿಂದ ದೂರ ಇರುವ ಗ್ರಾಮಗಳಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕಾಗಿ ಎಲ್ಲರೂ ಮತದಾನ ಮಾಡುವಂತೆ ಸ್ವೀಪ್ ಚಟುವಟಿಕೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲಾಧಿಕಾರಿ ಕಚೇರಿ ಸಹಾಯಕಅರುಣಕುಮಾರ ಕುಲಕರ್ಣಿ, ಚುನಾವಣಾ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ತಹಶೀಲ್ದಾರರಾದ ಶಿವರಾಜ, ಶ್ರೀಧರಾಚಾರ್ಯ, ಸಂತೋಷಿರಾಣಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !