ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: ನೋಡಲ್ ಅಧಿಕಾರಿ ಭೇಟಿಗೆ ಸೂಚನೆ

ಗ್ರಾಮವಾರು ನೋಡಲ್ ಅಧಿಕಾರಿಯಾಗಿ ನೇಮಕ; ಡಿಸಿ ಸೂಚನೆ
Last Updated 13 ಆಗಸ್ಟ್ 2022, 3:44 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಯಾದಗಿರಿ: ಜಿಲ್ಲಾ ವಿಪತ್ತು ನಿರ್ವಹಣಾ ಸಹಾಯವಾಣಿ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ಸಹಾಯವಾಣಿ ನಿರ್ವಹಣೆಗೆ ಪಾಳಿಯಲ್ಲಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ. 08473-253800 ಈ ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ 2022- 23 ನೇ ಸಾಲಿನ ಕೃಷ್ಣಾ ನದಿ ಪಾತ್ರದ ಹತ್ತಿರದಲ್ಲಿರುವ ಗ್ರಾಮಗಳ ಜನ-ಜಾನುವಾರುಗಳ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಕ್ಕಾಗಿ ಗ್ರಾಮವಾರು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ನೋಡಲ್ ಅಧಿಕಾರಿಗಳು ಕಂಟ್ರೋಲ್ ರೂಂ ನಲ್ಲಿ ಕರೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತವಾಗಿ ಕಾರ್ಯ ಪ್ರವೃತ್ತರಾಗಿ ಮಾಹಿತಿ ತಲುಪಿಸಲು ಜಿಲ್ಲಾಧಿಕಾರಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಹ ಪೀಡಿತ ಗ್ರಾಮಗಳು: ಜಿಲ್ಲೆಯಲ್ಲಿ ಕೃಷ್ಣಾ ನದಿಯಿಂದ ಒಟ್ಟು 17 ಗ್ರಾಮಗಳಲ್ಲಿ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಎಸ್‌ಡಿಆರ್‌ಎಫ್‌ ತಂಡ ನಿಯೋಜನೆ: ಸುರಪುರ ಮತ್ತು ವಡಗೇರಾ ತಾಲ್ಲೂಕಿನಲ್ಲಿ ಈ ತಂಡವು ರಕ್ಷಣಾ ಸಾಮಗ್ರಿಗಳ ಜೊತೆಗೆ ನಿಯೋಜಿಸಿ, ಪ್ರವಾಹಕ್ಕೆ ಒಳಗಾಗುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ವಾಹನಗಳ ಸಿದ್ಧತೆ ಅವಶ್ಯಕವಾಗಿಟ್ಟುಕೊಂಡು, ಪ್ರವಾಹ ಪೀಡಿತ ಸಂತ್ರಸ್ತರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು

ಬಸ್ಸುಗಳ ವ್ಯವಸ್ಥೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಪ್ರವಾಹ ಸಂಭವಿಸಬಹುದಾದ ಎಲ್ಲಾ ಗ್ರಾಮಗಳಲ್ಲಿನ ಜಾನುವಾರುಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಹಾಗೂ ಅವಶ್ಯವಿದ್ದಲ್ಲಿ ಗೋಶಾಲೆಗಳನ್ನು ತೆರೆಯುವುದರ ಕುರಿತು ಪಶು ಸಂಗೋಪನಾ ಮತ್ತು ಪಶು ಸೇವಾ ವೈದ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಪ್ರವಾಹ ಸಂಭವಿಸಬಹುದಾದ ಗ್ರಾಮಗಳಲ್ಲಿನ ಸೇತುವೆ, ಬ್ರಿಡ್ ಹಾಗೂ ಅರಣ್ಯ ಪ್ರದೇಶ ಹತ್ತಿರವಿರುವ ಗ್ರಾಮಗಳಲ್ಲಿ ಪೊಲೀಸ್ ಸಿಬ್ಬಂದಿ ಜೊತೆಗೆ ತಮ್ಮ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಿ ಮುಂಜಾಗ್ರತೆ ವಹಿಸಲು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಿಗೆ ಸುರಪುರ ತಾಲ್ಲೂಕಿನ ತಿಂಥಣಿ ಮತ್ತು ವಡಗೇರಾ ಗ್ರಾಮಗಳಲ್ಲಿನ ಸುಸಜ್ಜಿತ ಬೋಟ್ ಹಾಗೂ ರಕ್ಷಣಾ ಸಾಮಗ್ರಿಗಳೊಂದಿಗೆ ಸಿಬ್ಬಂದಿಗಳನ್ನು ನಿಯೋಜಿಸತಕ್ಕದ್ದು, ರಕ್ಷಣೆಗೆ ಸಂಬಂಧಪಟ್ಟಂತೆ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಜಿಲ್ಲೆಯಲ್ಲಿ ನುರಿತ ಈಜುಗಾರರನ್ನು ಸಿದ್ಧವಾಗಿಟ್ಟುಕೊಳ್ಳಲು ಸೂಚಿಸಿದರು.

ಎಲ್ಲಾ ಅಧಿಕಾರಿಗಳು ತಮಗೆ ನಿಯೋಜಿಸಿದ ಗ್ರಾಮಗಳಲ್ಲಿಯೇ ಇರಬೇಕು. ಮೀನುಗಾರರು ನದಿ ತೀರಕ್ಕೆ ಇಳಿಯದಂತೆ ಎಚ್ಚರ ವಹಿಸಬೇಕು. ಪ್ರವಾಹದ ಕುರಿತು ಕ್ಷಣ ಕ್ಷಣದ ಮಾಹಿತಿಯನ್ನು ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಮಾಹಿತಿ ರವಾನಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT