ಶನಿವಾರ, ಆಗಸ್ಟ್ 24, 2019
27 °C
ನಾರಾಯಣಪುರ ಜಲಾಶಯದಿಂದ 4.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಸಾಧ್ಯತೆ

ಚೆನ್ನೂರು, ಗೊಂದೆನೂರ ಸ್ಥಳಾಂತರಕ್ಕೆ ಡಿಸಿ ಸೂಚನೆ

Published:
Updated:
Prajavani

ಯಾದಗಿರಿ: ‘ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಾಗಿ ಜಿಲ್ಲೆಯ ನಾರಾಯಣಪುರ ಜಲಾಶಯದ ಒಳಹರಿವು 3.97 ಲಕ್ಷ ಕ್ಯೂಸೆಕ್ ತಲುಪಿದೆ. 4.5 ಲಕ್ಷ ಕ್ಯೂಸೆಕ್‍ ಹೆಚ್ಚಾಗುವ ಸಾಧ್ಯತೆ ಇದ್ದು, ನೀರು ಕೃಷ್ಣಾ ನದಿಗೆ ಹರಿಬಿಡಲಾಗುತ್ತದೆ. ಹೀಗಾಗಿ ವಡಗೇರಾ ತಾಲ್ಲೂಕಿನ ಚೆನ್ನೂರು ಮತ್ತು ಗೊಂದೆನೂರ ಗ್ರಾಮಗಳ ಜನರನ್ನು ಸ್ಥಳಾಂತರಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

‘ಚೆನ್ನೂರು ಮತ್ತು ಗೊಂದೆನೂರ ಗ್ರಾಮಗಳು ಸೇರಿದಂತೆ ಪ್ರವಾಹ ಎದುರಿಸುವ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕುರಿತು ಡಂಗೂರ ಸಾರಬೇಕು. ಈ ಎರಡೂ ಗ್ರಾಮಗಳ ಜನರನ್ನು ವಾಹನಗಳಲ್ಲಿ ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಗಂಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳುವ ಜನರ ಹೆಸರು ಮತ್ತು ಸಂಪೂರ್ಣ ವಿವರ ಪಡೆಯಬೇಕು. ಒಂದು ವೇಳೆ ಅವರು ತಮ್ಮ ಸಂಬಂಧಿಕರ ಮನೆಗೆ ತೆರಳಿದರೂ ಮಾಹಿತಿ ಪಡೆಯಬೇಕು. ಜಾನುವಾರುಗಳನ್ನು ಕೂಡ ಸ್ಥಳಾಂತರಿಸಬೇಕು’ ಎಂದರು.

ಪ್ರವಾಹ ನಿರ್ವಹಣಾ ತಂಡ ಭೇಟಿ: ‘ಜಿಲ್ಲೆಗೆ ಪ್ರವಾಹ ನಿರ್ವಹಣೆ 60 ಜನರ (1 ಕಾಲಮನ್) ತಂಡ ಮಂಗಳವಾರ ಸುರಪುರಕ್ಕೆ ಬಂದಿದೆ. ವಡಗೇರಾ ಮತ್ತು ತಿಂಥಣಿಯಲ್ಲಿ ಅಗ್ನಿ ಶಾಮಕ ವಾಹನಗಳನ್ನು ನಿಲ್ಲಿಸಲಾಗಿದೆ. ವಡಗೇರಾದಲ್ಲಿ ಚಾಲಕ ಸಹಿತ 1 ಒಬಿಎಂ ಬೋಟ್, ತಿಂಥಣಿ ದೇವಸ್ಥಾನದ ಹತ್ತಿರ ಚಾಲಕ ಸಹಿತ 1 ಫೈಬರ್ ಹಾಗೂ 1 ಒಬಿಎಂ ಬೋಟ್‍ಗಳು ಸನ್ನದ್ಧವಾಗಿವೆ. ಮಾಹಿತಿಗಾಗಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪಾಟೀಲ ಮೊ:79756 03663 ಸಂಪರ್ಕಿಸುವಂತೆ’ ತಿಳಿಸಿದರು.

ಶೆಳ್ಳಗಿ, ನೀಲಕಂಠರಾಯನ ಗಡ್ಡಿ, ಕೊಳ್ಳೂರು (ಎಂ) ಸೇರಿದಂತೆ ಕೃಷ್ಣಾ ನೀರಿನಿಂದ ಹಾನಿಗೊಳಗಾಗುವ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಆದರೆ, ರೈತರು ಕಂಬಗಳಿಗೆ ವಿದ್ಯುತ್ ವೈಯರ್‌ಗಳಿಗೆ ಕೊಂಡಿ ಹಾಕಿ ವಿದ್ಯುತ್ ಪಡೆಯುತ್ತಿದ್ದಾರೆ ಎಂದು ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ರಾಘವೇಂದ್ರ ಸಭೆಯ ಗಮನಕ್ಕೆ ತಂದರು. ‘ಪ್ರವಾಹ ನಿರ್ವಹಣಾ ಕ್ರಮವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ವಿದ್ಯುತ್ ವೈಯರ್‌ಗಳಿಗೆ ಕೊಂಡಿ ಹಾಕಿದರೆ ಅವಘಡ ಸಂಭವಿಸುತ್ತದೆ. ರೈತರು ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಜಿಲ್ಲಾ ಪಂಚಾಯಿತಿ ನೈಸರ್ಗಿಕ ಸಂಪನ್ಮೂಲಗಳ ದತ್ತಾಂಶ ನಿರ್ವಹಣಾ ಕೇಂದ್ರದ ಅಧಿಕಾರಿ ಸಿದ್ಧಾರೆಡ್ಡಿ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಸಭೆಯಲ್ಲಿ ಇದ್ದರು.

Post Comments (+)