ವಾಹನ ಅಧಿಗೃಹಣ ಆದೇಶಕ್ಕೆ ನಲುಗಿದ ರೈತರು

7
ಸ್ತಬ್ಧಚಿತ್ರ ಮೆರವಣಿಗೆಗೆ ರೈತರ ಟ್ರ್ಯಾಕ್ಟರ್‌ಗಳ ಬಳಕೆ; ಚಳಿಯಲ್ಲಿಯೇ ರಾತ್ರಿ ಕಳೆದ ರೈತರು

ವಾಹನ ಅಧಿಗೃಹಣ ಆದೇಶಕ್ಕೆ ನಲುಗಿದ ರೈತರು

Published:
Updated:
Deccan Herald

ಯಾದಗಿರಿ: ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಕನ್ನಡ ರಾಜ್ಯೋತ್ಸವ ಆಚರಣೆ ಉದ್ದೇಶದ ಹಿನ್ನೆಲೆಯಲ್ಲಿ ಹೊರಡಿಸಿದ್ದ ‘ವಾಹನ ಅಧಿಗೃಹಣ ಆದೇಶ’ಕ್ಕೆ ಸಿಲುಕಿದ ಗ್ರಾಮೀಣ ಕೆಲ ರೈತರು ಬುಧವಾರ ನಾಡಹಬ್ಬದಂದು ನಲುಗಿದ್ದಾರೆ.

ಸಾರ್ವಜನಿಕ ಉದ್ದೇಶದ ಹಿನ್ನೆಲೆಯಲ್ಲಿ ವಾಹನ ಅಧಿಗೃಹಣ ಆದೇಶ (ರಿಕ್ವಿಜೇಷನ್‌) ಅಧಿಕಾರ ಬಳಸಲು ಜಿಲ್ಲಾ ದಂಡಾಧಿಕಾರಿಗೆ ಅಧಿಕಾರವಿದೆ. ಹಾಗಾಗಿ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ 2 ಬುಲೆರೊ, 12 ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಳ್ಳುವಂತೆ ಅ.26ರಂದು ಆದೇಶ ಹೊರಡಿಸಿದ್ದರು.

ಅ.31ರಂದು ನಗರದಲ್ಲಿ ವಾಹನಗಳಿಗಾಗಿ ಜಾಲಾಡಿದ ಸಾರಿಗೆ ಅಧಿಕಾರಿಗಳು ಗ್ಯಾರೇಜ್‌ಗಳಲ್ಲಿ ರೈತರು ದುರಸ್ತಿಗೆ ಬಿಟ್ಟಿದ್ದ ಮತ್ತು ಹಳ್ಳಿಗಳಿಂದ ಹತ್ತಿ ತುಂಬಿಕೊಂಡು ಮಾರುಕಟ್ಟೆಗೆ ಬಂದಿದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಸಾರಿಗೆ ಅಧಿಕಾರಿಗಳ ಏಕಾಏಕಿ ದಾಳಿಯಿಂದ ಗಲಿಬಿಲಿಗೊಂಡ ರೈತರು ಪ್ರಶ್ನಿಸಿದಾಗ ಜಿಲ್ಲಾಧಿಕಾರಿ ಹೊರಡಿಸಿದ ವಾಹನ ಅಧಿಗೃಹಣ ಆದೇಶ ಕೈಗಿತ್ತು ನ. 1ರಂದು ಹಾಜರಾಗುವಂತೆ ಸೂಚಿಸಿದ್ದಾರೆ.

‘ಹೊಲದಲ್ಲಿ ತುರ್ತು ಕೆಲಸ ಇದೆ ಸಾರ್..’ ಎಂದು ರೈತರು ಬೇಡಿಕೊಂಡರೂ,‘ಇದು ಜಿಲ್ಲಾಧಿಕಾರಿ ಆದೇಶ. ಸುಮ್ಮನೆ ಬರಬೇಕು.. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ’ ಎಂದು ಸಾರಿಗೆ ಅಧಿಕಾರಿಗಳು ರೈತರಿಗೆ ಧಮಕಿ ಹಾಕಿದ್ದಾರೆ. ಅಂಜಿದ ರೈತರು ಅ31.ರಂದು ಟ್ರ್ಯಾಕ್ಟರ್‌ಗಳನ್ನು ಜಿಲ್ಲಾಡಳಿತ ಭವನದ ಅಂಗಳಲ್ಲಿ ತಂದು ನಿಲ್ಲಿಸಿ ಇಡೀ ರಾತ್ರಿ ಹಸಿವಿನಿಂದ ಬಳಲಿ, ಚಳಿಯಲ್ಲಿ ನಲುಗಿದ್ದಾರೆ.

‘ಟ್ರಾಲಿಯ ಮುಂಭಾಗದ ರಾಡ್‌ ಕಿತ್ತು ಹೋಗಿತ್ತು. ಹೊಲದಲ್ಲಿ ಸಸಿಮಡಿ ಹಾಕಲು ದುರಸ್ತಿ ಮಾಡಿಸಬೇಕಿತ್ತು. ಅದಕ್ಕಾಗಿ ನಗರಕ್ಕೆ ಬಂದಿದ್ದೆ. ಆರ್‌ಟಿಒ ಅಧಿಕಾರಿಗಳು ಏಕಾಏಕಿ ನುಗ್ಗಿ ಟ್ರ್ಯಾಕ್ಟರ್ ವಶಪಡಿಸಿಕೊಂಡರು. ಯಾವ ಅಪರಾಧವನ್ನೂ ಮಾಡಿಲ್ಲ. ಆದರೂ, ವಾಹನ ವಶಪಡಿಸಿಕೊಂಡಿದ್ದೇಕೆ? ಎಂದು ಪ್ರಶ್ನಿಸಿದರೆ, ‘ಜಿಲ್ಲಾಧಿಕಾರಿಯನ್ನೇ ಕೇಳಿಕೊಳ್ಳಿ’ ಎಂದು ಹೇಳಿ ಹೋದರು.

‘ನಾವೆಲ್ಲ ಹಳ್ಳಿಯಿಂದ ತುರ್ತು ಕಾರ್ಯ ನಿಮಿತ್ತ ನಗರಕ್ಕೆ ಬಂದಿದ್ದೇವು. ವಿವೇಚನಾಧಿಕಾರ ಇದೆ ಎಂದು ಅಧಿಕಾರಿಗಳು ದಿಢೀರ್‌ ಅಂತ ನಮ್ಮನ್ನು ಒಂದೆಡೆ ಹಿಡಿದಿಟ್ಟುಬಿಟ್ಟರೆ ನಮ್ಮ ಕುಟುಂಬ ಮತ್ತು ಕೆಲಸ, ಕಾರ್ಯದ ಗತಿಯೇನು? ನಮಗಾದ ನಷ್ಟವನ್ನು ಜಿಲ್ಲಾಧಿಕಾರಿ ತುಂಬಿ ಕೊಡುತ್ತಾರೆಯೇ? ವಿವೇಚನಾಧಿಕಾರ ಬಳಸಿ ಈ ರೀತಿ ಜನರಿಗೆ ಸಂಕಷ್ಟ ಕೊಡುವುದು ಎಷ್ಟು ಸರಿ? ಎಂದು ನಾಯ್ಕಲ್‌ ಗ್ರಾಮದ ಟ್ರಾಕ್ಟರ್‌ ರೈತತೋಟಪ್ಪ, ವಡಗೇರಾದ ಭೀಮಣ್ಣ, ನಾಗಪ್ಪ, ಅಬ್ಬೇತುಮಕೂರಿನ ಧನಂಜಯ ಖಾರವಾಗಿ ಪ್ರಶ್ನಿಸಿದರು.

‘ನಗರದಲ್ಲಿ ನೂರಾರು ಟ್ರ್ಯಾಕ್ಟರ್‌ಗಳು ಇವೆ. ಸಾರಿಗೆ ಕಚೇರಿಯಲ್ಲಿ ಮಾಲೀಕರ ಮೊಬೈಲ್‌ ದೂರವಾಣಿ ಸಹಿತ ವಿಳಾಸ ಸಿಗುತ್ತದೆ. ಆ ಮಾಲೀಕರಿಗೆ ಜಿಲ್ಲಾಡಳಿತ ಒಂದು ಮನವಿ ಕಳುಹಿಸಿದರೆ ಎಲ್ಲರೂ ಪ್ರೀತಿಯಿಂದಲೇ ಬರುತ್ತಾರೆ. ನಾಡಹಬ್ಬದ ಮೆರವಣಿಗೆಯಲ್ಲಿ ಖುಷಿಯಿಂದಲೇ ಭಾಗವಹಿಸುತ್ತಾರೆ. ಅದನ್ನು ಬಿಟ್ಟು, ತುರ್ತು ಕಾರ್ಯ ನಿಮಿತ್ತ ನಗರಕ್ಕೆ ಬಂದ ರೈತರ ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಳ್ಳುವುದು ಎಷ್ಟು ಸರಿ?’ ಎಂದು ಅಬ್ಬೆತುಮಕೂರಿನ ರಾಜಣ್ಣ ಬೇಸರ ವ್ಯಕ್ತಪಡಿಸಿದರು.

‘ಕಳೆದ ವರ್ಷವೂ ಸಾರಿಗೆ ಅಧಿಕಾರಿಗಳು ಬಲವಂತವಾಗಿ ನನ್ನ ಟ್ರ್ಯಾಕ್ಟರ್ ವಶಪಡಿಸಿಕೊಂಡು ನಾಡಹಬ್ಬದ ಮೆರವಣಿಗೆಯಲ್ಲಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಬಳಸಿಕೊಂಡರು. ಒಂದು ಲೀಟರ್‌ ಡಿಸೇಲ್‌ಗೆ ಕನಿಷ್ಠ ₹50 ಕೂಡ ನೀಡಲಿಲ್ಲ. ಬಿಸಿಲಲ್ಲಿ ನಗರದ ಪ್ರಮುಖ ಬೀದಿ, ರಸ್ತೆಗಳಲ್ಲಿ ಸ್ತಬ್ಧಚಿತ್ರ ಪ್ರದರ್ಶಿಸಿ ಬಳಲಿದೆವು. ಈ ವರ್ಷವೂ ಇವರಿಗೆ ದೊರೆತು ಸಂಕಷ್ಟ ಅನುಭವಿಸುವಂತಾಗಿದೆ’ ಎಂದು ರೈತ ನಾಗಪ್ಪ ಅಲವತ್ತುಕೊಂಡರು.

**

ನಾಡಹಬ್ಬದಲ್ಲಿ ಮೆರವಣಿಗೆಗೆ ವಾಹನ ನೀಡುವಂತೆ ಜಿಲ್ಲಾಧಿಕಾರಿ ಒಂದು ಪ್ರಕಟಣೆ ನೀಡಲಿ. ರೈತರು ಮುಂದೆ ಬಂದು ವಾಹನ ನೀಡುತ್ತಾರೆ. ಈ ರೀತಿ ಬಲವಂತವಾಗಿ ಹಿಡಿದಿಡುವುದು ಎಷ್ಟು ಸರಿ? 
–ತೋಟಪ್ಪ, ರೈತ, ನಾಯ್ಕಲ್ ಗ್ರಾಮ

**

ಹತ್ತಿ ಮಾರಾಟ ಮಾಡಿ ಕಾರ್ಮಿಕರಿಗೆ ದಿನಗೂಲಿ ವಿತರಿಸಬೇಕಿತ್ತು. ಅಷ್ಟರಲ್ಲಿ ಸಾರಿಗೆ ಅಧಿಕಾರಿಗಳು ಏನೆಂದು ವಿಚಾರಿಸದೆ ವಾಹನ ವಶಪಡಿಸಿಕೊಂಡರು. ಪರಿಸ್ಥಿತಿ ವಿವರಿಸಿದರೂ ಕಿವಿಗೊಡಲಿಲ್ಲ.
ಭೀಮಣ್ಣ, ರೈತ, ವಡಗೇರಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !