ಸೋಮವಾರ, ಡಿಸೆಂಬರ್ 9, 2019
20 °C
ಯಾದಗಿರಿಯಲ್ಲಿ 66ನೇ ಅಖಿಲ ಭಾರತ ಸಹಕಾರ ಸಪ್ತಾಹ

‘ಯಾದಗಿರಿಯಲ್ಲಿ ಡಿಸಿಸಿ ಬ್ಯಾಂಕ್‌ ಸ್ಥಾಪನೆಯಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಜಿಲ್ಲೆಯಾಗಿ ಹತ್ತು ವರ್ಷಗಳಾಗುತ್ತಿದ್ದರೂ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ ಇಲ್ಲ. ಸಾಲ ತೆಗೆದುಕೊಳ್ಳಲು ಕಲಬುರ್ಗಿಗೆ ಹೋಗಬೇಕು. ಇಲ್ಲಿಯೇ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಪ್ರಯತ್ನಿಸುವೆ’ ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಹೇಳಿದರು.

ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಹಕಾರ ಸಂಸ್ಥೆಗಳ ಯಶೋಗಾಥೆಗಳ ಮೂಲಕ ಸಹಕಾರ ಶಿಕ್ಷಣ, ತರಬೇತಿಯನ್ನು ಪುನರ್‌ ರೂಪಿಸುವುದು’ ದಿನಾಚರಣೆ ಹಾಗೂ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಸ್ಥಾಪಿಸುವುದರಿಂದ ಹಲವು ಉಪಯೋಗಗಳಿವೆ. ಸಂಘ ಸಂಸ್ಥೆಗಳು ಹೆಚ್ಚದಾರೆ ಬ್ಯಾಂಕ್ ತರಲು ಸಾಧ್ಯ. ಸಹಕಾರ ಸದಸ್ಯರು ಶಿಫಾರಸು ಮಾಡಿದರೆ ಮಾತ್ರ ಸಾಲ ದೊರಕುತ್ತದೆ ಎನ್ನುವ ಮಾತಿದೆ. ಇದು ತೊಲಗಬೇಕು. ರೈತರೇ ನೇರವಾಗಿ ಸಾಲ ಪಡೆಯುವಂತಾಗಬೇಕು. ಆ ರೀತಿಯಲ್ಲಿ ಸಹಕಾರ ಯೋಜನೆಗಳು ರೈತರಿಗೆ ಸಿಗಬೇಕು’ ಎಂದರು.

‘ರಾಜ್ಯದಲ್ಲಿ ಮೊದಲ ಬಾರಿಗೆ ಸಹಕಾರ ಸಂಘ ಸ್ಥಾಪನೆ ಮಾಡುವ ಮೂಲಕ ಸಹಕಾರ ಕ್ಷೇತ್ರಕ್ಕೆ ರಾಜ್ಯ ಹೆಚ್ಚಿನ ಕೊಡುಗೆ ನೀಡಿದೆ. ಗದಗನಲ್ಲಿ ಪ್ರಥಮವಾಗಿ ಪತ್ತಿನ ಸಹಕಾರ ಸಂಘದ ಮೂಲಕ ಸಹಕಾರಕ್ಕೆ ನಾಂದಿ ಹಾಡಿದೆ’ ಎಂದು ತಿಳಿಸಿದರು.

ಶಾಸಕ ನಾಗನಗೌಡ ಕಂದಕೂರ ಮಾತನಾಡಿ, ‘ಸಹಕಾರಿ ಸಮಾರಂಭ ಸರ್ಕಾರದ ವತಿಯಿಂದ ಆಚರಣೆ ಮಾಡುತ್ತಿದ್ದರೂ ಯಾವುದೇ ಸರ್ಕಾರದ ಪ್ರತಿನಿಧಿ ಬಂದಿಲ್ಲ. ಇದು ದುರ್ದೈವದ ಸಂಗತಿ. ಮುಂದೆ ಈ ರೀತಿ ಆಗಬಾರದು. ಕಲಬುರ್ಗಿ–ಯಾದಗಿರಿ ಡಿಸಿಸಿ ಬ್ಯಾಂಕ್‌ ಹೀನಾಯ ಪರಿಸ್ಥಿತಿಗೆ ಬಂದಿದೆ. ಕ್ಷೇತ್ರ ಕ್ಷೀಣಿಸಲು ಇಲ್ಲಿಯವರೆ ಕಾರಣರಾಗಿದ್ದಾರೆ’ ಎಂದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಸಿದ್ರಾಮರೆಡ್ಡಿ ವಿ.ಪಾಟೀಲ ಗುಂಡಗುರ್ತಿ ಮಾತನಾಡಿ,‘ ರೈತರು ಆರ್ಥಿಕವಾಗಿ ಸಬಲರಾಗಲು ಸಹಕಾರ ಅಗತ್ಯ. ಕುರಿ ಸಾಕಾಣಿಕೆ, ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸಹಕಾರ ಸಂಘದಿಂದ ಮಾಡುವ ಕೆಲಸಗಳನ್ನು ರೈತರಿಗೆ ಮುಟ್ಟಿಸಲಾಗುವುದು. ಸಂಘದ ಮೂಲಕ ರಿಯಾಯ್ತಿ ಕೂಡ ಲಭ್ಯವಿದೆ. ಇದನ್ನು ಉಪಯೋಗ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು. 

ಕಲಬುರ್ಗಿಯ ಸರ್ಕಾರಿ ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ.ಟಿ.ಗುರುಬಸಪ್ಪ ಆರ್‌., ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್‌ ವಸ್ತು ಪ್ರದರ್ಶನ ಉದ್ಘಾಟಿಸಿದರು. ಶಾಸಕ ನಾಗನಗೌಡ ಕಂದಕೂರ ಸಹಕಾರ ಧ್ವಜಾರೋಹಣ ನೆರವೇರಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಎನ್‌.ಗಂಗಣ್ಣ, ನಿರ್ದೇಶಕರಾದ ಆರ್‌.ಕೆ.ಪಾಟೀಲ, ಬಿ.ಸಿ.ಸತೀಶ, ನಾಮ ನಿರ್ದೇಶಿತ ಸದಸ್ಯೆ ಎಚ್.ಎಸ್‌.ಪೂರ್ಣಿಮಾ, ಕಲಬುರ್ಗಿ–ಯಾದಗಿರಿ ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ವೀರಾರೆಡ್ಡಿ ಎಸ್‌.ಪಾಟೀಲ ದರ್ಶನಾಪುರ, ಕರ್ನಾಟಕ ರಾಜ್ಯ ಎಣ್ಣೆ ಬೀಜ ಬೆಳೆಗಾರರ ಸಹಕಾರ ಮಹಾಮಂಡಳ ಉಪಾಧ್ಯಕ್ಷ ಶಂಕ್ರಪ್ಪಗೌಡ ಪೊಲೀಸ್‌ ಪಾಟೀಲ, ಸಹಕಾರ ಸಂಘಗಳ ಉಪನಿಬಂಧಕ ಕೆ.ಎಂ.ಪೂಜಾರ್‌, ಸಹಕಾರ ಸಂಘಗಳ ಜಂಟಿ ನಿಬಂಧಕ (ಆಡಳಿತ ಮತ್ತು ಅಭಿವೃದ್ಧಿ) ಎಚ್‌.ಸಿ.ಜೋಶಿ, ಕಲಬುರ್ಗಿ ಪ್ರಾಂತ ಸಹಕಾರ ಸಂಘಗಳ ಜಂಟಿ ನಿಬಂಧಕ ಚವ್ಹಾಣ ಗೋಪಾಲ, ಮಾಣಿಕರೆಡ್ಡಿ ಕುರಕುಂದಿ ಸೇರಿದಂತೆ ಸಹಕಾರಿಗಳು ಭಾಗವಹಿಸಿದ್ದರು.

 ***

‌ಯಾದಗಿರಿ ತಾಲ್ಲೂಕಿಗೆ ಕೇವಲ ₹8 ಕೋಟಿ ರೂಪಾಯಿ ಸಾಲ ನೀಡಲಾಗುತ್ತಿದೆ. ಆದರೆ ಕಲಬುರ್ಗಿಯ ಆಳಂದ, ಅಫಜಲಪುರ ಒಂದು ಸೊಸೈಟಿಗೆ ₹8 ಕೋಟಿ ನೀಡಲಾಗುತ್ತಿದೆ. ಇದು ತಾಲ್ಲೂಕನ್ನು ಕಡೆಗಣಿಸಿದಂತಾಗುತ್ತದೆ.

- ನಾಗನಗೌಡ ಕಂದಕೂರ, ಶಾಸಕ

ಪ್ರತಿಕ್ರಿಯಿಸಿ (+)