ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 300 ಕೋಟಿ ವೆಚ್ಚದ ಬ್ರಿಜ್ ಕಂ ಬ್ಯಾರೇಜ್: ರಮೇಶ್ ಜಾರಕಿಹೊಳಿ

Last Updated 1 ಜುಲೈ 2020, 15:48 IST
ಅಕ್ಷರ ಗಾತ್ರ

ಸುರಪುರ: ‘ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ತಿಂಥಣಿ- ಬಂಡೋಳಿ ಹತ್ತಿರ ಕೃಷ್ಣಾ ನದಿಗೆ ₹300 ಕೋಟಿ ವೆಚ್ಚದಲ್ಲಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಲಾಗುವುದು’ ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಶಾಸಕ ರಾಜೂಗೌಡ ಅವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಸುರಪುರ ತಾಲ್ಲೂಕಿನ ಕಾಲುವೆ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪದಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಈಗಾಗಲೇ ಸಮಗ್ರ ವರದಿ ತರಿಸಿಕೊಳ್ಳಲಾಗಿದೆ. ಸಂಪುಟದಲ್ಲಿ ಚರ್ಚಿಸಿ ಕಾಲುವೆಗಳ ನವೀಕರಣಕ್ಕೆ ಕ್ರಮ ಕೈಗೊಂಡು ರೈತರ ಭೂಮಿಗೆ ನೀರು ಮುಟ್ಟಿಸಲಾಗುವುದು. ಕಾಲುವೆಗಳ ನೀರು ಪೋಲಾಗದಂತೆ ಮುಖ್ಯ ಕಾಲುವೆಗಳಿಗೆ ಶೀಘ್ರದಲ್ಲಿಯೇ ಗೇಟ್‍ಗಳನ್ನು ಅಳವಡಿಸಲಾಗುವುದು’ ಎಂದು ಹೇಳಿದರು.

ಎಚ್.ವಿಶ್ವನಾಥ್‌ ಬಗ್ಗೆ ಸುದ್ದಿಗಾರರು ಕೇಳಿದ ಪಶ್ನೆಗೆ, ‘ಮಾಜಿ ಸಚಿವ ಎಚ್. ವಿಶ್ವನಾಥ್ ಏಕಾಂಗಿಯಾಗಿಲ್ಲ. ಅವರ ಜತೆಗೆ ನಾವೆಲ್ಲರೂ ಇದ್ದೇವೆ. ಮುಂಬರುವ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಸಿಗಲಿವೆ’ ಎಂದರು.

ಶಾಸಕ ರಾಜೂಗೌಡ ಮಾತನಾಡಿ, ‘ಈ ಭಾಗದ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಗೊಳಿಸುವುದು ನನ್ನ ಬಹು ದಿನಗಳ ಕನಸಾಗಿತ್ತು. ಅದು ನನಸಾಗುವ ಕಾಲ ಹತ್ತಿರವಾಗಿದೆ. ಈಗ ಒಂದು ಹಂತದ ಕಾರ್ಯ ಮುಗಿದಿದ್ದು, ಕ್ರಿಯಾ ಯೋಜನೆ ಅನುಮೋದನೆಗೊಂಡು ಅನುದಾನ ಬಿಡುಗಡೆಗೆ ನಿರೀಕ್ಷಿಸಲಾಗುತ್ತಿದೆ. ನಮ್ಮ ಕೂಗಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಜಲ ಸಂಪನ್ಮೂಲ ಸಚಿವರಿಗೆ ಋಣಿಯಾಗಿದ್ದೇನೆ’ ಎಂದರು.

ಸಂಸದ ರಾಜಾ ಅಮರೇಶನಾಯಕ, ಶಾಸಕ ಶಿವರಾಜ ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಪ್ರತಾಪಗೌಡ ಪಾಟೀಲ್, ಮಾನಪ್ಪ ವಜ್ಜಲ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಭೂಪಾಲ ರೆಡ್ಡಿ, ಪ್ರಮುಖರಾದ ರಾಜಾ ಹನುಮಪ್ಪನಾಯಕ, ಯಲ್ಲಪ್ಪ ಕುರುಕುಂದಿ, ಎಚ್.ಸಿ.ಪಾಟೀಲ್, ಬಸವರಾಜ ಸ್ಥಾವರಮಠ, ಬಿ.ಎಂ.ಹಳ್ಳಿಕೋಟಿ, ವೇಣುಗೋಪಾಲ ಜೇವರ್ಗಿ, ದೊಡ್ಡ ದೇಸಾಯಿ, ಭೀಮಣ್ಣ ಬೇವಿನಾಳ, ನರಸಿಂಹಕಾಂತ ಪಂಚಮಗಿರಿ, ಶಂಕರನಾಯಕ, ಶ್ರೀನಿವಾಸನಾಯಕ ದರಬಾರಿ, ಕೆಬಿಜೆಎನ್‍ಎಲ್ ಎಂಡಿ ಪ್ರಭಾಕರ ಚಿನ್ನಿ, ನಾರಾಯಣಪುರ ಡ್ಯಾಂ ಇಇ ರಂಗರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT