ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಪುರಸಭೆ ಟಿಕೆಟ್‌ಗಾಗಿ ‘ಪಕ್ಷಾಂತರ’ ಪರ್ವ

ಕಕ್ಕೇರಾ, ಕೆಂಭಾವಿ ಪುರಸಭೆ ಚುನಾವಣೆಯಲ್ಲಿ ಮೂರೂ ಪಕ್ಷಗಳಿಗೆ ಅಗ್ನಿ ಪರೀಕ್ಷೆ
Last Updated 14 ಡಿಸೆಂಬರ್ 2021, 4:44 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಕಕ್ಕೇರಾ, ಕೆಂಭಾವಿ ಪುರಸಭೆ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆಗಾಗಿ ಕೇವಲ ಎರಡೇ ದಿನ ಉಳಿದಿದ್ದು, ಪಕ್ಷಾಂತರ ಪರ್ವ ಜೋರಾಗಿದೆ.

ಕಕ್ಕೇರಾ, ಕೆಂಭಾವಿ ಪುರಸಭೆಯಲ್ಲಿ ತಲಾ 23 ಸ್ಥಾನಗಳಿದ್ದು, ಒಂದು ವಾರ್ಡ್‌ಗೆ 4ರಿಂದ 5 ಅಭ್ಯರ್ಥಿಗಳು ಆಕಾಂಕ್ಷಿಗಳಿದ್ದಾರೆ. ಇದರಿಂದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳ ಮುಖಂಡರಿಗೆ ತಲೆಬಿಸಿಯಾಗಿದೆ. ಯಾರಿಗೆ ಟಿಕೆಟ್‌ ಕೊಟ್ಟರೂ ಬಂಡಾಯದ ಬಿಸಿ ಅನುಭವಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಒಳಗೊಳಗೆ ಪಕ್ಷದ ಅಭ್ಯರ್ಥಿಗಳನ್ನು ತಲಾಷ್‌ ಮಾಡಲಾಗಿದೆ. ಎಲ್ಲಿ ಹೊರಗೆ ಗೊತ್ತಾದರೆ ಅಭ್ಯರ್ಥಿಗಳು ಬಂಡೇಳುತ್ತಾರೆ ಎನ್ನುವ ಆತಂಕ ಪಕ್ಷದ ಮುಖಂಡರಲ್ಲಿ ಕಾಣಬರುತ್ತಿದೆ.

ಪುರಸಭೆಗಳಲ್ಲಿ ಭರ್ಜರಿ ತಯಾರಿ: ಕಕ್ಕೇರಾ, ಕೆಂಭಾವಿ ಪುರಸಭೆ ಚುನಾವಣೆಗಾಗಿ ಹಲವರು ತಿಂಗಳ ಕಾಲ ಭರ್ಜರಿ ತಯಾರಿ ನಡೆಸಿದ್ದಾರೆ. ಟಿಕೆಟ್‌ ತಮಗೇ ಸಿಗುತ್ತದೆ ಎನ್ನುವ ಭರವಸೆಯಲ್ಲಿ ಮುಖಂಡರ ಜೊತೆ ಸಂಪರ್ಕದಲ್ಲಿ ಇದ್ದಾರೆ. ಆದರೆ, ಕೆಲವರು ಬಿ ಫಾರಂ ಕೈ ತಪ್ಪುವ ಭೀತಿಯಿಂದ ಬೇರೆ ಪಕ್ಷಕ್ಕೆ ಜಿಗಿಯುವ ಪ್ರಯತ್ನ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್‌ನಲ್ಲಿ ಆಕಾಂಕ್ಷಿಗಳಿದ್ದರೂ ತೀವ್ರ ಸ್ಪರ್ಧೆ ಕಂಡುಬರುತ್ತಿಲ್ಲ. ಉಳಿದ ಎರಡು ಪಕ್ಷಗಳಲ್ಲಿ ಮಾತ್ರ ಟಿಕೆಟ್‌ ಪಡೆಯಲು ವಿವಿಧ ಕಸರತ್ತು ನಡೆಯುತ್ತಿದೆ.

ಈಗಾಗಲೇ ಸುರಪುರ ಶಾಸಕ ರಾಜೂಗೌಡ ಕಕ್ಕೇರಾ ಮುಖಂಡರೊಂದಿಗೆ, ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾ‍ಪುರ ಅವರು ಕೆಂಭಾವಿಯಲ್ಲಿ ಈಚೆಗೆ ಸಭೆ ನಡೆಸಿದ್ದಾರೆ. ಆದರೆ, ಟಿಕೆಟ್‌ ಯಾರಿಗೆ ಎನ್ನುವ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದರಿಂದ ಆಕಾಂಕ್ಷಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಒಂದು ಹೆಜ್ಜೆ ಮುಂದೆ ಹೋಗಿ ಬೇರೆ ಪಕ್ಷಗಳಲ್ಲಿ ಕಾಲಿಟ್ಟು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕೆಂಭಾವಿಯಲ್ಲಿ ಮೂರು ಬಾಗಿಲು: ಕೆಂಭಾವಿ ಪುರಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರೂ ಪಕ್ಷಗಳು ಮನೆಯೊಂದು ಮೂರು ಬಾಗಿಲು ಎನ್ನುವಂತೆ ಆಗಿದೆ. ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ ಹತ್ತಿರ ಬಂದರೂ ಬಿ ಫಾರಂ ನೀಡುವ ಗುಟ್ಟು ಬಿಟ್ಟುಕೊಟ್ಟಿಲ್ಲ. ಅಭ್ಯರ್ಥಿಗಳನ್ನು ಅಳೆದುತೂಗಿಬಿಫಾರಂ ನೀಡಲು ಸಿದ್ಧತೆ ನಡೆದಿದೆ.

ಕಕ್ಕೇರಾದಲ್ಲಿ ಅಭಿವೃದ್ಧಿ ಗಲಾಟೆ: ಕಕ್ಕೇರಾ ಪುರಸಭೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷದಲ್ಲಿ ಅಭಿವೃದ್ಧಿ ವಿಚಾರ ಜೋರಾಗಿ ಚರ್ಚೆ ನಡೆಯುತ್ತಿದೆ. ಬಿಜೆಪಿಯವರು ಅಧಿಕಾರದಲ್ಲಿದ್ದರೂ ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಕಾಂಗ್ರೆಸ್‌ನವರು ಆರೋಪಿಸಿದರೆ, ಶಾಸಕರ ಕಾರ್ಯಗಳೇ ನಮಗೆ ಶ್ರೀರಕ್ಷೆ ಎಂದು ಬಿಜೆಪಿ ಮುಖಂಡರು ಹೇಳಿಕೊಂಡು ತಿರುಗಾಡುತ್ತಿದ್ದಾರೆ.

ದಾಬಾ, ಹೋಟೆಲ್‌ಗಳಲ್ಲೂ ಚರ್ಚೆ:

ಚುನಾವಣಾ ಕಾವು ಜೋರು ಪಡೆದಿದ್ದು, ದಾಬಾ, ಹೋಟೆಲ್‌ಗಳಲ್ಲೂ ಚರ್ಚೆಯ ಕಾವು ಪಡೆದಿದೆ. ಯಾರಿಗೆ ಟಿಕೆಟ್‌ ನೀಡಲಾಗುತ್ತಿದೆ. ಕಳೆದ ಅವಧಿಯಲ್ಲಿ ಇಂಥವರು ಏನು ಮಾಡಿದರು.ಮುಂದೆ ಏನು ಎನ್ನುವ ವಿಷಯಗಳ ಕುರಿತು ಚರ್ಚೆಗಳು ಜೋರಾಗಿವೆ. ಅಲ್ಲದೇ ದಾಬಾಗಳಲ್ಲಿ ಗುಂಡು, ತುಂಡು ವ್ಯವಸ್ಥೆಯೂ ಭರ್ಜರಿಯಾಗಿ ನಡೆದಿದೆ ಎನ್ನಲಾಗುತ್ತಿದೆ.

***
ಕಕ್ಕೇರಾ ಪಟ್ಟಣದಲ್ಲಿ ಈ ಚುನಾವಣೆಗೆ ಭಾರಿ ಪೈಪೋಟಿ ನಡೆದಿದ್ದು, ಶಾಸಕ ರಾಜೂಗೌಡರ ಉತ್ತಮ ಕೆಲಸಗಳೇ ನಮಗೆ ಶ್ರೀರಕ್ಷೆಯಾಗಿದ್ದು, ಮತದಾರರು ನಮ್ಮನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸ ನಮಗಿದೆ.
-ರಾಜೂ ಹವಾಲ್ದಾರ್, ಬಿಜೆಪಿ ಮುಖಂಡ

***
ಪುರಸಭೆಗೆ ಶಾಸಕರಿಂದ ಯಾವುದೇ ಅನುದಾನ ಒದಗಿಲ್ಲ. ಕಾಂಗ್ರೆಸ್ ಅಲೆ ಜೋರಾಗಿದ್ದು, ಸಾವಿರಾರು ಜನರು ಕಾಂಗ್ರೆಸ್ ಕಡೆ ಬರುತ್ತಿದ್ದು, ನಮ್ಮ ಶಾಸಕರು ಶಾಲಾ- ಕಾಲೇಜು, ನೀಲಕಂಠರಾಯನಗಡ್ಡಿ ಸೇತುವೆ ಹೀಗೆ ಹಲವಾರು ಕೆಲಸಗಳನ್ನು ಮಾಡಿದ್ದು, ಈ ಸಲ ಪುರಸಭೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ
-ಗುಂಡಪ್ಪ ಸೋಲ್ಲಾಪುರ, ಕಾಂಗ್ರೆಸ್ ಮುಖಂಡ

***
ಪುರಸಭೆ ಚುನಾವಣೆ ಪ್ರಕ್ರಿಯೆ

ಡಿ. 8; ಅಧಿಸೂಚನೆ ಪ್ರಕಟ
ಡಿ.15; ನಾಮಪತ್ರ ಸಲ್ಲಿಕೆಗೆ ಕೊನೆ ದಿನ
ಡಿ.16; ನಾಮಪತ್ರ ಪರಿಶೀಲನೆ
ಡಿ.18; ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆ ದಿನ
ಡಿ.27; ಮತದಾನ ‌
ಡಿ. 30; ಮತ ಎಣಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT