ವಿವಿಧ ಬೇಡಿಕೆ ಈಡೇರಿಸಲು ಆಗ್ರಹ

7
ಬಿಸಿಯೂಟ ತಯಾರಕರ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಸಲು ಆಗ್ರಹ

Published:
Updated:
Deccan Herald

ಯಾದಗಿರಿ: ಬಿಸಿಯೂಟ ತಯಾರಕರಿಗೆ ರಾಜ್ಯ ಸರ್ಕಾರ ಕನಿಷ್ಠ ವೇತನ ₹10,500 ಜಾರಿಗೆ ಮಾಡುವಂತೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಬಿಸಿಯೂಟ ಜಿಲ್ಲಾ ಸಮಿತಿ ಅಧ್ಯಕ್ಷೆ ಕಲ್ಪನಾ ಗುರಸಣಗಿ ಮಾತನಾಡಿ,‘ಬಿಸಿಯೂಟ ತಯಾರಕರಿಗೆ ಕೆಲಸ ಮತ್ತು ಜೀವನ ಭದ್ರತೆಗಾಗಿ ತಮಿಳುನಾಡು ಮಾದರಿಯಲ್ಲಿ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಪಿಎಫ್, ಇಎಸ್‌ಐ, ವಿಮಾ ಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘ಗೌರವ ಸಂಭಾವನೆ ಹೆಸರಿನಲ್ಲಿ ದುಡಿಯುತ್ತಿರುವ ಮಹಿಳೆಯರನ್ನು ಸರ್ಕಾರಗಳು ಇದುವರೆಗೂ ಯಾವ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಈಗ ರಾಜ್ಯದಲ್ಲಿ ಅಸ್ತಿತ್ವ ಪಡೆದ ಸಮ್ಮಿಶ್ರ ಸರ್ಕಾರ ಕೂಡ ಬಿಸಿಯೂಟ ತಯಾರಿಕರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮೀನಮೇಷ ಎಣಿಸುತ್ತಿದೆ’ ಎಂದು ಆರೋಪಿಸಿದರು.

‘ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದನ್ನೇ ನೆಪ ಮಾಡಿ ಬಿಸಿಯೂಟ ತಯಾರಕರನ್ನು ಕೆಲಸದಿಂದ ಬಿಡಿಸಬಾರದು. ಮಾಸಿಕ ₹3 ಸಾವಿರ ನಿವೃತ್ತಿ ಪಿಂಚಣಿ ಜಾರಿಗೊಳಿಸಬೇಕು. ಬಿಸಿಯೂಟ ನೌಕರರು ಯಾವುದೇ ರೀತಿಯ ಮರಣ ಹೊಂದಿದಲ್ಲಿ ₹2ಲಕ್ಷ ಪರಿಹಾರ ಮತ್ತು ಮೃತಪಟ್ಟಲ್ಲಿ ಅಂತ್ಯಕ್ರಿಯೆಗಾಗಿ ₹20 ಸಾವಿರ ನೀಡಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿದರು.

ಬಿಸಿಯೂಟ ತಯಾರಿಕರಿಗೆ ಪ್ರತಿ ವರ್ಷ ಒಂದು ಜತೆ ಸಮವಸ್ತ್ರ ನೀಡಬೇಕು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಿರುವ ಗುತ್ತಿಗೆಯನ್ನು ರದ್ದುಗೊಳಿಸಬೇಕು. ದಸರಾ ಮತ್ತು ಬೇಸಿಗೆಯ ರಜೆಯ ಸಂಬಳ ಒದಗಿಸಬೇಕು. ಪ್ರತಿ ತಿಂಗಳು 5ನೇ ದಿನಾಂಕದೊಳಗೆ ವೇತನ ಪಾವತಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಬಿಸಿಯೂಟ ಜಿಲ್ಲಾ ಸಮಿತಿ ಉಪಾಧ್ಯಕ್ಷ ದೇವೇಂದ್ರಪ್ಪ ಪತ್ತಾರ್, ಶ್ರೀದೇವಿ ಕೂಡಲಗಿ, ಬಸವರಾಜ ಪೂಜಾರಿ, ರಮೇಶಗೌಡ ನಡಿಗಾಳ, ಶೋಪಣ್ಣ ಸಗರ, ಬಸಮ್ಮ ತಡಿಬಿಡಿ, ಶಹಾಜಾಬಿ ಸುರಪುರ, ಮಂಜುಳಾ ಮುಟ್ಟಳ್ಳಿ, ಯಮುನಾ ಕಕ್ಕೇರಿ, ಗೋವಿಂದಮ್ಮ ಹಸ್ನಾಪುರ, ಗೌರಮ್ಮ ರತ್ತಾಳ, ಶಿವುಬಾಯಿ ಕಕ್ಕೇರಿ, ಲಕ್ಷ್ಮೀ ದಿವಳಗುಟ್ಟ, ಚಾಂದಬಿ ಮುಟ್ಟಳ್ಳಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹಲವು ವರ್ಷಗಳಿಂದ ಸೌಲಭ್ಯಕ್ಕಾಗಿ ಬೇಡಿಕೆ ಇಟ್ಟರೂ ಸರ್ಕಾರಗಳು ಸ್ಪಂದಿಸಿಲ್ಲ. ಸಮ್ಮಿಶ್ರ ಸರ್ಕಾರ ನಿರ್ಲಕ್ಷಿಸಿದ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ.
- ಕಲ್ಪನಾ ಗುರಸಣಗಿ, ಅಧ್ಯಕ್ಷೆ  ಬಿಸಿಯೂಟ ತಯಾರಕರ ಜಿಲ್ಲಾ ಸಮಿತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !