ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯು.ಬಿ ಸಿಟಿ: ಸೂಚನಾ ಫಲಕ ಸ್ಥಳಾಂತರಿಸಿದ ಪೊಲೀಸರು

Last Updated 9 ಏಪ್ರಿಲ್ 2018, 19:28 IST
ಅಕ್ಷರ ಗಾತ್ರ

ಬೆಂಗಳೂರು: ಯು.ಬಿ ಸಿಟಿ ಎದುರಿನ ಸಿದ್ಧಲಿಂಗಯ್ಯ ವೃತ್ತದಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿದ್ದ ಸಂಚಾರ ನಿಯಮಗಳ ಸೂಚನಾ ಫಲಕಗಳನ್ನು ಪೊಲೀಸರು ಕೊನೆಗೂ ಸ್ಥಳಾಂತರಿಸಿದ್ದಾರೆ.

‘ಚಾಲಕರ ದಿಕ್ಕುತಪ್ಪಿಸಿ ದಂಡ ವಸೂಲಿ ಮಾಡುವುದಕ್ಕಾಗಿ ಕಬ್ಬನ್‌ ಪಾರ್ಕ್‌ ಠಾಣೆಯ ಪೊಲೀಸರು, ಮರೆಯಲ್ಲಿ ಫಲಕ ಅಳವಡಿಸಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸಿದ್ದರು. ಆ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಪೊಲೀಸರು, ಎಲ್ಲರಿಗೂ ಗೋಚರಿಸುವಂಥ ಸ್ಥಳದಲ್ಲೇ ಇದೀಗ ಫಲಕಗಳನ್ನು ಅಳವಡಿಸಿದ್ದಾರೆ.

‘ಸಿದ್ಧಲಿಂಗಯ್ಯ ವೃತ್ತದಲ್ಲಿ ಅಪಘಾತಗಳು ಸಂಭವಿಸುತ್ತಿದ್ದವು. ಹೀಗಾಗಿ, ಎಡಭಾಗದ ಜಾಗದಲ್ಲಿ ವಾಹನ ಚಲಾಯಿಸಿಕೊಂಡು ಹೋಗುವುದನ್ನು ನಿರ್ಬಂಧಿಸಿ ಫಲಕ ಹಾಕಿದ್ದೆವು. ಅವು ಅವೈಜ್ಞಾನಿಕ ಎಂದು ಜನರು ಆರೋಪಿಸಿದ್ದರಿಂದ, ಫಲಕಗಳನ್ನು ಬೇರೆಡೆ ಅಳವಡಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಖಾಸಗಿ ಕಂಪನಿ ಉದ್ಯೋಗಿ, ‘ಕಸ್ತೂರಬಾ ರಸ್ತೆ ಹಾಗೂ ವಿಠ್ಠಲ ಮಲ್ಯ ರಸ್ತೆಗೆ ಹೊಂದಿಕೊಂಡಿರುವ ಈ ವೃತ್ತದ ಮೂಲಕ ನಿತ್ಯವೂ ಸಾವಿರಾರು ವಾಹನಗಳು ಓಡಾಡುತ್ತವೆ. ನಾಲ್ಕು ಕಡೆ ರಸ್ತೆಯ ಎಡಭಾಗದಲ್ಲೂ ವಾಹನಗಳ ಸಂಚಾರಕ್ಕೆ ಜಾಗವಿದೆ. ಅಲ್ಲಿ ವಾಹನ ಚಲಾಯಿಸಿಕೊಂಡು ಹೋಗುವುದನ್ನು (ಹಸಿರು ಸಿಗ್ನಲ್‌ ಇರುವಾಗ ಹೋಗಬಹುದು) ತಿಂಗಳಿನಿಂದ ನಿರ್ಬಂಧಿಸಿರುವ ಪೊಲೀಸರು, ನಮಗೆ ಕಾಣಿಸದ ಸ್ಥಳದಲ್ಲಿ ಫಲಕ ಅಳವಡಿಸಿದ್ದರು’ ಎಂದು ಹೇಳಿದರು.

‘ಫಲಕ ನೋಡದೆ ವಾಹನ ಚಲಾಯಿಸಿಕೊಂಡು ಹೋದಾಗ, ಪೊಲೀಸರು ತಡೆದು ದಂಡ ಹಾಕುತ್ತಿದ್ದರು. ಈಗ ಸೂಕ್ತ ಸ್ಥಳದಲ್ಲೇ ಫಲಕ ಅಳವಡಿಸಿದ್ದಾರೆ. ಆದರೆ, ಈ ಸ್ಥಳದಲ್ಲಿ ಫಲಕದ ಅವಶ್ಯಕತೆಯೇ ಇಲ್ಲ. ಅವುಗಳೆಲ್ಲವನ್ನೂ ತೆರವು ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT