ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರೋಡೆಕೋರರನ್ನು ಓಡಿಸಿದ ಸಹೋದರಿಯರು

ಮಹಿಳೆಯರ ಸಾಹಸ ಸಿ.ಸಿ.ಟಿ.ವಿಯಲ್ಲಿ ಸೆರೆ
Last Updated 1 ಜೂನ್ 2018, 19:47 IST
ಅಕ್ಷರ ಗಾತ್ರ

ಬೆಂಗಳೂರು: ಅಪ್ರತಿಮ ಧೈರ್ಯ ತೋರಿದ ಸಹೋದರಿಯರಿಬ್ಬರು ದರೋಡೆಕೋರರ ದಾಳಿಯಿಂದ ಅಪಾಯದಲ್ಲಿದ್ದ ತಂದೆಯನ್ನು ರಕ್ಷಿಸಿ, ಆರು ಜನ ದರೋಡೆಕೋರರನ್ನು ಓಡಿಸಿದ ಪ್ರಕರಣ ಜಯನಗರ ಎರಡನೇ ಬ್ಲಾಕ್‌ನಲ್ಲಿ ನಡೆದಿದೆ.

‘ಇದೇ 21ರಂದು ರಾತ್ರಿ 8.20ರ ಸುಮಾರಿಗೆ ಹೆಲ್ಮೆಟ್‌ ಮತ್ತು ಕೈಗವುಸು ತೊಟ್ಟ ಶಸ್ತ್ರಸಜ್ಜಿತ ದರೋಡೆಕೋರರು ಆಭರಣದ ಅಂಗಡಿಗೆ ನುಗ್ಗಿ, ಅಂಗಡಿಯ ಮಾಲೀಕ ರವಿ ಮತ್ತು ಕೆಲಸದವನನ್ನು ಬೆದರಿಸಿದ್ದಾರೆ. ತಕ್ಷಣ ರವಿ ಸೈರನ್‌ ಬಟನ್‌ ಒತ್ತಿ, ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ‘ ಎಂದು ಪೊಲೀಸರು ತಿಳಿಸಿದ್ದಾರೆ.

‘ತಂದೆ ಕೂಗುವುದನ್ನು ಕೇಳಿದ ಸಹೋದರಿಯರಾದ ಸುರಕ್ಷಾ ಮತ್ತು ರಕ್ಷಾ (ಹೆಸರು ಬದಲಿಸಲಾಗಿದೆ) ಅಂಗಡಿಗೆ ಓಡಿ ಬಂದಿದ್ದಾರೆ. ದರೋಡೆಕೋರರ ಬಳಿ ಆಯುಧಗಳಿವೆ ಎನ್ನುವುದನ್ನೂ ಲೆಕ್ಕಿಸದೆ ಅವರನ್ನು ಅಂಗಡಿಯಿಂದ ಹೊರಗೆ ಓಡಿಸಿದ್ದಾರೆ‘ ಎಂದು ಅವರು ಹೇಳಿದ್ದಾರೆ.

ಸಹೋದರಿಯರು ದರೋಡೆಕೋರರನ್ನು ಓಡಿಸಿದ ದೃಶ್ಯಗಳು ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿವೆ. ದರೋಡೆಕೋರರು ಸ್ಥಳದಿಂದ ಪಲಾಯನವಾಗುವುದಕ್ಕೂ ಮೊದಲು ಚಾಕು ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಹೋದರಿಯರು ಧೈರ್ಯ ತೋರಿ ದರೋಡೆಕೋರರನ್ನು ಹೊರಗಟ್ಟಿದ್ದರೂ ಮುಂದಿನ ದಿನಗಳಲ್ಲಿ ಆರೋಪಿಗಳ ಬಂಧನವಾಗಿ, ಜಾಮೀನಿನ ಮೇಲೆ ಬಿಡುಗಡೆಯಾದರೆ ತನ್ನ ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳಬಹುದು ಎಂಬ ಆತಂಕ ತಂದೆ ರವಿ ಅವರನ್ನು ಕಾಡುತ್ತಿದೆ.

‘ನನ್ನ ಇಬ್ಬರು ಹೆಣ್ಣು ಮಕ್ಕಳು ಅಪಾಯದಲ್ಲಿದ್ದ ನನ್ನನ್ನು ರಕ್ಷಿಸಿದ್ದಾರೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ರವಿ. ಇಬ್ಬರಿಗೂ ಮದುವೆಯಾಗಿದ್ದು ಪತಿಯೊಂದಿಗೆ ತವರು ಮನೆಯಲ್ಲೇ ನೆಲೆಸಿ, ತಂದೆಯ ವ್ಯಾಪಾರಕ್ಕೆ ನೆರವಾಗುತ್ತಿದ್ದಾರೆ.

ಸಹೋದರಿಯರು ತೋರಿದ ಧೈರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಇಬ್ಬರೂ ಮಹಿಳೆಯರು ಅಪ್ರತಿಮ ಧೈರ್ಯ ತೋರಿದ್ದಾರೆ. ದರೋಡೆಕೋರರು ವೃತ್ತಿಪರರಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅವರ ಬಂಧನಕ್ಕಾಗಿ ತನಿಖೆ ನಡೆಯುತ್ತಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ಶರಣಪ್ಪ ಎಸ್‌.ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT