ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನ್ವಂತರಿ ಕಾಲೊನಿ ಸಮಸ್ಯೆಗೆ ಸಿಗದ ಚಿಕಿತ್ಸೆ

ಬಡಾವಣೆಯಲ್ಲಿನ ರಸ್ತೆ ಕಾಮಗಾರಿಗಳು ಅಪೂರ್ಣ; ಮೂಲಸೌಲಭ್ಯ ಕೊರತೆ
Last Updated 29 ಸೆಪ್ಟೆಂಬರ್ 2020, 7:06 IST
ಅಕ್ಷರ ಗಾತ್ರ

ಕಲಬುರ್ಗಿ: ‘ಪ್ರಭಾವಿಗಳ ಮನೆಗಳ ಮುಂದೆ ಮಾತ್ರ ರಸ್ತೆಗಳು ಸರಿ ಇವೆ. ಜನಸಾಮಾನ್ಯರ ಮನೆಗಳ ಮುಂದೆ ರಸ್ತೆಗಳೇ ಇಲ್ಲ. ಮಳೆ ಬಂದರೆ ಮನೆ ಮುಂದೆ ನೀರು ನಿಲ್ಲುತ್ತದೆ.

ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆಗೆ ಮಾತ್ರ ಪರಿಹಾರ ಸಿಕ್ಕಿಲ್ಲ. ಹೀಗಾಗಿ ನಾವೇ ನಮ್ಮ ನಮ್ಮ ಮನೆಗಳ ಮುಂದೆ ಸ್ವತಃ ಹಣ ಖರ್ಚು ಮಾಡಿಕೊಂಡು ಕಲ್ಲು ಮಣ್ಣು ಹಾಕಿಸಿಕೊಂಡು ರಸ್ತೆ ಮಾಡಿಸಿಕೊಳ್ಳುತ್ತಿದ್ದೇವೆ’..

ಕಲಬುರ್ಗಿ ನಗರದ ಕುಸನೂರು ರಸ್ತೆಯ ಧನ್ವಂತರಿ ಕಾಲೊನಿ ನಿವಾಸಿಗಳ ಅಳಲು ಇದು.ಕಲಬುರ್ಗಿ ದಕ್ಷಿಣ ಕ್ಷೇತ್ರದ ವಾರ್ಡ್‌ ಸಂಖ್ಯೆ 30ರ ವ್ಯಾಪ್ತಿಯಲ್ಲಿ ಬರುವ ಈ ಕಾಲೊನಿಯಲ್ಲಿ ಇಂದಿಗೂ ಸರಿಯಾದ ರಸ್ತೆಗಳಿಲ್ಲ. ಕೆಲ ಕಡೆ ರಸ್ತೆ ಕಾಮಗಾರಿಗಳು ನಡೆದಿದ್ದರೂ ಪೂರ್ಣಗೊಂಡಿಲ್ಲ. ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿರುವ ಕಾರಣ ಮಳೆ ಬಂದರೆ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಇದರಿಂದಾಗಿ ಸಮಸ್ಯೆ ಅನುಭವಿಸುತ್ತಿದ್ದೇವೆ ಎನ್ನುತ್ತಾರೆ ಕಾಲೊನಿ ನಿವಾಸಿಗಳು.

‘ಈ ಕಾಲೊನಿಯಲ್ಲಿ ವೈದ್ಯರು, ಎಂಜಿನಿಯರ್‌, ವಕೀಲರ ಕುಟುಂಬಗಳೇ ಹೆಚ್ಚಿವೆ. ಕಾಲೊನಿ ನಿರ್ಮಾಣವಾಗಿ 30 ವರ್ಷಗಳೇ ಕಳೆದರೂ ಇಂದಿಗೂ ಮೂಲ ಸೌಲಭ್ಯ ಸಿಕ್ಕಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಕರೆ ಮಾಡಿ ಹೇಳಿದರೂ, ಮನವಿ ಪತ್ರ ನೀಡಿದರೂ ಸ್ಪಂದನೆ ಸಿಕ್ಕಿಲ್ಲ’ ಎನ್ನುತ್ತಾರೆ ನಿವಾಸಿ ಆನಂದ್ ವಿ. ತೊರೆ.

‘ಸರಿಯಾದ ಸಮಯಕ್ಕೆ ವಿದ್ಯುತ್ ತೆರಿಗೆ, ನೀರಿನ ತೆರಿಗೆ ಕಟ್ಟುತ್ತೇವೆ. ಆದರೂ ಕಾಲೊನಿಯಲ್ಲಿ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲ. ಬಲ್ಬ್‌ ಹಾಳಾದರೆ ಬದಲಾಯಿಸುವ ಗೋಜಿಗೂ ಹೋಗಲ್ಲ. ಇಡೀ ಬಡಾವಣೆ ಕತ್ತಲಲ್ಲೇ ಮುಳುಗಿರುತ್ತೆ’ ಎಂದು ದೂರುತ್ತಾರೆ ಕಾಲೊನಿ ನಿವಾಸಿ ಎಸ್‌.ಬಿ ಸಾಗರೆ.

ಹಂದಿಗಳ ಹಾವಳಿ: ರಸ್ತೆ, ವಿದ್ಯುತ್ ಸಮಸ್ಯೆ ಜೊತೆಗೆ ಹಂದಿಗಳ ಹಾವಳಿಯೂ ಕಾಲೊನಿ ನಿವಾಸಿಗಳಿಗೆ ತಲೆ ನೋವು ತರಿಸಿದೆ. ‘ಕಾಲೊನಿಯಲ್ಲಿ ಹಂದಿಗಳನ್ನು ಸಾಕಿಲ್ಲ. ಆದರೆ ಬೇರೆ ಕಡೆಯಿಂದ ಹಂದಿಗಳನ್ನು ತಂದು ಇಲ್ಲಿ ಬಿಡಲಾಗಿದೆ. ಹಿಂಡು ಹಿಂಡಾಗಿ ಸುತ್ತುವ
ಹಂದಿಗಳು ಕಾಲೊನಿಯಲ್ಲಿ ಗಲೀಜು ಮಾಡುತ್ತಿವೆ. ಹಂದಿಗಳ ಕಾಟದಿಂದಾಗಿ ಚಿಕ್ಕ ಮಕ್ಕಳು ಹೊರಹೋಗಲು ಹೆದರುವಂತಾಗಿದೆ’ ಮಹಾನಗರ ಪಾಲಿಕೆಯವರು ಇಲ್ಲಿನ ಹಂದಿಗಳ ಸ್ಥಳಾಂತರ ಮಾಡುವ ಬಗ್ಗೆ ಗಮನಹರಿಸಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಡಾ.ರಾಮರಾವ.

ಇದ್ದೂ ಇಲ್ಲದಂತಿರುವ ಉದ್ಯಾನ: ಕಾಲೊನಿಯ ಮಧ್ಯದಲ್ಲಿರುವ ಉದ್ಯಾನವನದಿಂದ ನಮಗೆ ಹೆಚ್ಚಿನ ಉಪಯೋಗ ಆಗುತ್ತಿಲ್ಲ. ಉದ್ಯಾನದಲ್ಲಿ ಮಳೆ ಕಾರಣಕ್ಕೆ ಹುಲ್ಲು ದಟ್ಟವಾಗಿ ಬೆಳೆದಿದೆ. ಗಿಡಗಳೂ ಬೆಳೆದಿವೆ. ಇದರಿಂದ ಉದ್ಯಾನದಲ್ಲಿ ನಡೆದಾಡಲೂ ಆಗದ ಸ್ಥಿತಿ ಇದೆ.

‘ಹುಲ್ಲು, ಗಿಡಗಂಟೆಗಳಲ್ಲಿ ಹಾವು, ಚೇಳುಗಳ ಇರುವ ಭಯದಿಂದ ಹೆಚ್ಚಿನ ಜನ ಉದ್ಯಾನದಲ್ಲಿ ವಿಹರಿಸುತ್ತಿಲ್ಲ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಉದ್ಯಾನದಲ್ಲಿನ ಹುಲ್ಲು ಕತ್ತರಿಸಲು ಮತ್ತು ಉದ್ಯಾನ ಅಭಿವೃದ್ಧಿಗೊಳಿಸಲು ಹಲವು ಬಾರಿ ಮನವಿ ಮಾಡಿದ್ದೇವೆ. ವಾಟ್ಸ್‌ಆ್ಯಪ್‌ನಲ್ಲಿ ಚಿತ್ರಗಳನ್ನು ಕಳಿಸಿದ್ದೇವೆ. ಆದರೂ ಯಾವುದೇ ಕೆಲಸ ನಡೆದಿಲ್ಲ’ ಎಂದು ಕಾಲೊನಿಯ ರಾಚಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT