ಹುಣಸಗಿ: ತಾಲ್ಲೂಕು ಕೇಂದ್ರವಾಗಿರುವ ಹುಣಸಗಿ ಪಟ್ಟಣದಲ್ಲಿ ನಿತ್ಯ ಸಾವಿರಾರು ಜನ ಪ್ರಯಾಣಿಕರು ಹಾಗೂ ವಾಹನ ಸಂಚಾರವಿದೆ. ಆದರೆ, ಸಂಚಾರ ಸಮಸ್ಯೆ ಹೆಚ್ಚಾಗುತ್ತಿದ್ದು, ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಹಿಂದೆಬಿದ್ದಿವೆ ಎಂಬ ಆರೋಪ ಕೇಳಿಬರುತ್ತಿದೆ.
ಬಿಡಾಡಿ ದನಗಳು ನಿತ್ಯ ರಸ್ತೆಯ ಮಧ್ಯೆದಲ್ಲಿಯೇ ನಿಲ್ಲುತ್ತಿರುವುದರಿಂದಾಗಿ ವಾಹನ ಸವಾರರು ಪದಾಡುತ್ತಾ ಕ್ರಮಿಸುವ ಅನಿವಾರ್ಯತೆ ಇದೆ. ದೇವಪುರ ಮನಗೂಳಿ ರಾಜ್ಯ ಹೆದ್ದಾರಿಯು ಪಟ್ಟಣದ ಮುಖಾಂತರ ಹಾದು ಹೋಗಿದ್ದು, ಹುಣಸಗಿ ಪಟ್ಟಣದಲ್ಲಿ ಸುಮಾರು 125ಕ್ಕೂ ಹೆಚ್ಚು ಮಾರ್ಗಸೂಚಿಯ ಬಸ್‌ಗಳು ಓಡಾಡುತ್ತವೆ. ಅಲ್ಲದೇ ನಿತ್ಯ ಸಂಜೆ ಸುಮಾರು 15ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ತಮ್ಮ ಸಂಚಾರ ಆರಂಭಿಸುತ್ತವೆ. ಈ ಸಂದರ್ಭದಲ್ಲಿ ದನಗಳು, ಹಂದಿಗಳು ರಸ್ತೆಯಲ್ಲಿಯೇ ಇರುತ್ತಿರುವುದರಿಂದಾಗಿ ಬಸ್ ನಿಲ್ದಾಣ, ಹೊರ ಅಗಸಿ, ಕರ್ನಾಟಕ ಬ್ಯಾಂಕ್ ಬಳಿ ಸಾಕಷ್ಟು ಸಮಸ್ಯೆಯಾಗುತ್ತಿದೆ.
ರಸ್ತೆ ಆಕ್ರಮಿಸಿದ ಗೂಡಂಗಡಿಗಳು: ಪಟ್ಟಣದ ಮುಖ್ಯರಸ್ತೆಯು ಮಹಾಂತಸ್ವಾಮಿ ವೃತ್ತದಿಂದ ಬಸವೇಶ್ವರದ ವರೆಗೆ ರಸ್ತೆ ವಿಭಜಕ ನಿರ್ಮಿಸಿ, ದೊಡ್ಡ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಎರಡೂ ಬದಿ ದ್ವಿಪಥ ರಸ್ತೆ ಇದ್ದರೂ ವಾಹನಗಳು ಸಂಚರಿಸದಂತಹ ಪರಿಸ್ಥಿತಿ ಇದೆ. ತರಕಾರಿ ಗೂಡಂಗಡಿಗಳು ರಸ್ತೆಯ ಮೇಲೆ ಇಟ್ಟುಕೊಂಡಿದ್ದರಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
‘ಇನ್ನು ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ಬಸ್ ನಿಲ್ದಾಣದ ಆಸುಪಾಸಿನಲ್ಲಿ ಮುಖ್ಯ ರಸ್ತೆಯಲ್ಲಿಯೇ ನಿಲ್ಲಿಸಿ ದಿನಸಿ ಸೇರಿದಂತೆ ಇತರ ಸಾಮಗ್ರಿಗಳನ್ನು ಖರೀದಿಸುತ್ತಿದ್ದರಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ’ ಎಂದು ಕಾಶಿನಾಥ ಹಾದಿಮನಿ ಹೇಳುತ್ತಾರೆ.
ಈ ಹಿಂದೆ ಗ್ರಾಮ ಪಂಚಾಯಿತಿ ಇದ್ದ ಸಂದರ್ಭದಲ್ಲಿ ಪ್ರತಿ ವಾರದ ಸಂತೆ ದಿನ ಸಣ್ಣ ವ್ಯಾಪಾರಸ್ಥರು ರಸ್ತೆ ಆಕ್ರಮಿಸದಂತೆ ಪಂಚಾಯಿತಿ ಸಿಬ್ಬಂದಿ ಸುಣ್ಣದ ಗೆರೆ ಹಾಕುವ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.
‘ಈ ಕುರಿತು ಹುಣಸಗಿ ಪಟ್ಟಣದಲ್ಲಿಯೇ ಪೊಲೀಸ್ ಠಾಣೆ ಹಾಗೂ ಸಿಪಿಐ ಕಚೇರಿ ಇದ್ದರೂ ಇನ್ನೂ ಕ್ರಮ ಕೈಗೊಳ್ಳುತ್ತಿಲ್ಲ. ಈ ಕುರಿತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಭೆ ನಡೆಸಿ, ಇಲ್ಲವೇ ತಿಳಿವಳಿಕೆ ನೀಡುವ ಮೂಲಕ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಲಿ’ ಎಂದು ರಮೇಶ ಬಿರಾದಾರ ಹಾಗೂ ಬಸವರಾಜ ಚನ್ನೂರ ಒತ್ತಾಯಿಸುತ್ತಾರೆ.
ಬಿಡಾಡಿ ದನಗಳ ಹಾವಳಿಯನ್ನು ತಪ್ಪಿಸಲು ಕಳೆದ ನಾಲ್ಕು ತಿಂಗಳ ಹಿಂದೆ ದನಗಳನ್ನು ಕೂಡಿ ಹಾಕಲಾಗಿತ್ತು. ಈ ಕುರಿತಂತೆ ಜಾಗೃತಿ ಮೂಡಿಸಲಾಗುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ದನಗಳನ್ನು ಗೋ ಶಾಲೆಗೆ ಸಾಗಿಸುತ್ತೇವೆ.ಪ್ರವೀಣ್ ಬೋಗಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹುಣಸಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.