ಶನಿವಾರ, ಡಿಸೆಂಬರ್ 7, 2019
24 °C

ವಿಕಲಚೇತನರು, ಹಿರಿಯ ನಾಗರಿಕರು ಕುಟುಂಬಕ್ಕೆ ಭಾರವಲ್ಲ: ಶಿವನಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಕುಟುಂಬಕ್ಕೆ ಭಾರ ಎನ್ನುವ ದೃಷ್ಟಿಯಿಂದ ನೋಡಲಾಗುತ್ತದೆ. ಅವರು ಕುಟುಂಬಕ್ಕೆ ಭಾರವಲ್ಲ. ಅವರನ್ನು ಮಾನವೀಯ ದೃಷ್ಟಿಯಿಂದ ಕಾಣಬೇಕು  ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶಿವನಗೌಡ ಹೇಳಿದರು.

ಜಿಲ್ಲಾ ಬಾಲಭವನದಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ಎಲ್ಲಾ ಸಂಘ- ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 2019-20ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಕಲಚೇತನರ ಏಳ್ಗೆಗಾಗಿ ಇರುವ ಅನುದಾನವನ್ನು ಇಲಾಖೆಗಳು ಪ್ರಾಮಾಣಿಕವಾಗಿ ನೀಡಬೇಕು.  ಸರ್ಕಾರದ ಸೌಲಭ್ಯ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.

 ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಪ್ರಕಾಶ ಅರ್ಜುನ ಬನಸೊಡೆ ಮಾತನಾಡಿ, ವಿಕಲಚೇತನರ ರಕ್ಷಣೆಗಾಗಿ ಕಾನೂನಿನಲ್ಲಿ ಮಹತ್ವವಾದ ಅವಕಾಶ ಕಲ್ಪಿಸಲಾಗಿದೆ. ವಿಕಲಾಂಗರ ಮೇಲೆ ದೈಹಿಕ ದೌರ್ಜನ್ಯ, ಅವರ ಆಸ್ತಿ ಕಸಿದುಕೊಳ್ಳಲು ಯಾರಾದರೂ ಪ್ರಯತ್ನಿಸಿದರೆ, ಇಲ್ಲವೆ ಕಾನೂನಾತ್ಮಕ ಸಮಸ್ಯೆಗಳಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ಒಬ್ಬ ವಕೀಲರನ್ನು ನೇಮಕ ಮಾಡಿ ಅವರಿಗೆ ಉಚಿತ ಕಾನೂನು ಸೇವೆ ನೀಡಲಾಗುತ್ತದೆ ಎಂದು ಹೇಳಿದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಕಲಚೇತನರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಉದಾಹರಣೆಗಳಿವೆ. ಅಧಿಕಾರಿಗಳು ವಿಕಲಚೇತನರ ಬಗ್ಗೆ ಕಾಳಜಿವಹಿಸಿ ಸರ್ಕಾರದಿಂದ ಸಿಗುವ ಸೌಲಭ್ಯ ಕುರಿತು ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಪ್ರಶಸ್ತಿ ವಿತರಣೆ:  ವಿಶ್ವ ವಿಕಲಚೇತನರ ದಿನಾಚರಣೆಯ ಪ್ರಯುಕ್ತ ಜಿಲ್ಲಾ ವಿಕಲಚೇತನರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ, ಸಂಗೀತ ಶಿಕ್ಷಕರಾದ ಶರಣಬಸವ ವಠಾರ, ಜಿಲ್ಲಾ ವಿಕಲಚೇತನರ ಹೋರಾಟ ಸಮಿತಿ ಅಧ್ಯಕ್ಷ ಸಂಗನಗೌಡ ಧನಾರಡ್ಡಿ ಹಾಗೂ ಜಾನಿ ಬಾಬು ಇದ್ದರು. ಮಹೇಶ ಪತ್ತಾರ ದೋರನಹಳ್ಳಿ ನಿರೂಪಿಸಿದರು. ಆರ್.ಎಸ್‌.ವಿಶ್ವರಾಧ್ಯ ವಂದಿಸಿದರು.

ಪ್ರತಿಕ್ರಿಯಿಸಿ (+)