ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗೋಳ: ಶೇಂಗಾ ಬೆಳೆಗೆ ರಬ್ಬರ್ ಹುಳು ಬಾಧೆ

Last Updated 19 ನವೆಂಬರ್ 2021, 5:16 IST
ಅಕ್ಷರ ಗಾತ್ರ

ಯರಗೋಳ: ಶೇಂಗಾ ಬೆಳೆಗೆ ರಬ್ಬರ್‌ ಹುಳು ಕಾಟ ಶುರುವಾಗಿದ್ದು, ರೈತರು ಇಳುವರಿ ಕುಸಿಯುವ ಭೀತಿಯಲ್ಲಿದ್ದಾರೆ.

ಹತ್ತಿಕುಣಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿತ್ತನೆಯಾದ ಶೇಂಗಾ ಬೆಳೆಯಲ್ಲಿ ರಬ್ಬರ್‌ ಹುಳು ಕಾಣಿಸಿಕೊಂಡಿದೆ. ಎಲೆಗಳಲ್ಲಿ ಚಿಕ್ಕ ರಂಧ್ರಗಳು ಕಾಣಿಸಿಕೊಳ್ಳುತ್ತಿವೆ.

ಮಲಕಪ್ಪನಳ್ಳಿ, ಹೊನಗೇರಾ, ಬೆಳಗೇರಾ, ಹತ್ತಿಕುಣಿ, ಬಂದಳ್ಳಿ, ಯಡ್ಡಳ್ಳಿ, ಕೋಟಗೇರಾ, ಮೋಟನಳ್ಳಿ, ಅರಿಕೇರಾ (ಬಿ), ಅಲ್ಲಿಪುರ, ಹೊಸಳ್ಳಿ, ಚಾಮನಳ್ಳಿ, ಹೆಡಗಿಮದ್ರ, ಅಬ್ಬೆ ತುಮಕೂರು, ವಡ್ನಳ್ಳಿ ಗ್ರಾಮಗಳಲ್ಲಿ ರೈತರು ಹೆಚ್ಚು ಶೇಂಗಾ ಬಿತ್ತನೆ ಮಾಡಿದ್ದಾರೆ.

30 ರಿಂದ 40 ದಿನಗಳ ಶೇಂಗಾ ಬೆಳೆ ಈಗ ಹೂ ಹಾಗೂ ಕಾಯಿ ಕಟ್ಟುವ ಹಂತದಲ್ಲಿದೆ. ಹಗಲು ಹೊತ್ತಿನಲ್ಲಿ ಭೂಮಿಯ ಆಳದಲ್ಲಿರುವ ಹುಳುಗಳು ರಾತ್ರಿ ವೇಳೆ ಗಿಡಕ್ಕೆ ಅಂಟಿಕೊಂಡು ಎಲೆಗಳಿಗೆ ರಂಧ್ರ ಕೊರೆಯುತ್ತಿವೆ.

ರೋಗ ನಿಯಂತ್ರಣಕ್ಕೆ ರೈತರು ಕ್ರಿಮಿನಾಶಕ ಖರೀದಿಸಿ, ಅಪಾಯ ಲೆಕ್ಕಿಸದೇ ರಾತ್ರಿ ವೇಳೆ ಸಿಂಪಡಣೆ ಮಾಡುತ್ತಿದ್ದಾರೆ.

2 ರಿಂದ 3 ಬಾರಿ ಶೇಂಗಾ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಿದರೂ ರಬ್ಬರ್ ಹುಳು ಸಾಯುತ್ತಿಲ್ಲ. ಮಳೆ ಆಗಾಗ ಸುರಿಯುತ್ತಿರುವುದರಿಂದ ಸಿಂಪಡಣೆ ಮಾಡಿದ ಕ್ರಿಮಿನಾಶಕ ತೊಳೆದು ಹೋಗುತ್ತಿದೆ. ಸಾವಿರಾರು ರೂಪಾಯಿ ಸಾಲದ ಹೊರೆಯಿಂದ ಬಳಲುತ್ತಿರುವ ರೈತರು, ಹುಳುಗಳನ್ನು ನಿಯಂತ್ರಿಸುವ ಪ್ರಯತ್ನ ಮುಂದುವರಿಸಿದ್ದಾರೆ.

1 ಕ್ವಿಂಟಲ್ ಶೇಂಗಾ ಬೀಜಕ್ಕೆ ₹ 10 ಸಾವಿರ, ಗೊಬ್ಬರ, ಬಿತ್ತನೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ ರೈತರು ಶೇಂಗಾ ಬೆಳೆಯನ್ನು ಉಳಿಸಲು ರಾತ್ರಿಯಿಡಿ ಹೊಲಗಳಲ್ಲಿ ಜಾಗರಣೆ ಮಾಡುತ್ತಿದ್ದಾರೆ.

ಕಟ್ಟಿಗೆ ಶಹಾಪುರ ಗ್ರಾಮದ ರೈತ ಬಸರೆಡ್ಡಿ ಮಾತನಾಡಿ,‘ಹಾವು, ಚೇಳು, ಕಾಡು ಪ್ರಾಣಿಗಳ ಭಯದಲ್ಲಿಯೇ ಹೊಲಗಳಿಗೆ ತೆರಳಿ ಶೇಂಗಾ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದೇವೆ’ ಎಂದರು.

‘ಹತ್ತಿಕುಣಿ ಕೃಷಿ ಕೇಂದ್ರದಿಂದ 2,500 ಕ್ವಿಂಟಲ್ ಶೇಂಗಾ ಬೀಜ ಮಾರಾಟ ಮಾಡಲಾಗಿದೆ. 8 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ’ ಎಂದು ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಬೆಳೆಗೇರಾ ಮಾಹಿತಿ ನೀಡಿದರು.

ಹೆಚ್ಚಿನ ಮಾಹಿತಿಗಾಗಿ ಹತ್ತಿಕುಣಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಅವರ ಮೊ.ಸಂ: 9901699421 ಕ್ಕೆ ಸಂಪರ್ಕಿಸಬಹುದು.

*

ಯಾದಗಿರಿ ತಾಲ್ಲೂಕಿನಲ್ಲಿ ಅಂದಾಜು 25,460 ಹೆಕ್ಟೇರ್‌ ಶೇಂಗಾ ಬೀಜ ಬಿತ್ತನೆಯಾಗಿದೆ. ಸಹಾಯ ಧನದಲ್ಲಿ ಇಲಾಖೆಯಿಂದ 7396 ಕ್ವಿಂಟಲ್ ಶೇಂಗಾ ಬೀಜ ವಿತರಿಸಲಾಗಿದೆ,

- ಶ್ವೇತಾ ತಾಳೆಮರದ, ಸಹಾಯಕ ಕೃಷಿ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT