ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಟೆಲ್‌ ಹಾಲಿನ ಪುಡಿ, ಆಹಾರ ಪರೀಕ್ಷೆಗಾಗಿ ರವಾನಿಸಲು ಜಿಲ್ಲಾಧಿಕಾರಿ ಸೂಚನೆ

Last Updated 29 ಆಗಸ್ಟ್ 2022, 16:15 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿರುವ ಎಲ್ಲ ಟೆಂಡರ್ ವಸತಿ ನಿಲಯಗಳಿಗೆ ಭೇಟಿ ನೀಡಿ, ಅಲ್ಲಿ ಸರಬರಾಜು ಆಗುತ್ತಿರುವ ಹಾಲಿನ ಪುಡಿ, ಆಹಾರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಸಲ್ಲಿಸಿ ವರದಿ ನೀಡಲು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಹಾಲಿನ ಗುಣಮಟ್ಟ ಸಮೀಕ್ಷೆ ಜಿಲ್ಲಾ ಚಾಲನಾ ಸಮಿತಿ ರಚನೆಯ ಸಭೆಯಲ್ಲಿ ಅವರು ಮಾತನಾಡಿದರು.

ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ, ವಸತಿ ನಿಲಯಗಳಲ್ಲಿ ಬಿಸಿಯೂಟ, ಹಾಲು ತಯಾರಿಸಿ ವಿತರಿಸುವ ಮುಂಚೆ ಸ್ವಚ್ಛತೆ ಕಾಪಾಡಿಕೊಂಡು ಸಿಬ್ಬಂದಿ ಕೈಗವಸು, ತಲೆಗೆ ಹ್ಯಾಂಡ್ ಕ್ಯಾಪ್, ಮುಖಕ್ಕೆ ಮಾಸ್ಕ್ ಧರಿಸಿಕೊಳ್ಳಲು ಅಧಿಕಾರಿಗಳು ಕ್ರಮ ವಹಿಸುವಂತೆ ನಿರ್ದೇಶಿಸಿದರು.

ಖಾಸಗಿ ಹಾಲಿನ ಡೇರಿಯ ಹಾಲಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಸೂಚಿಸಿದರು.

ಪೊಲೀಸ್ ಠಾಣೆಗೆ ಸಾರ್ವಜನಿಕರಿಂದ ಖಾಸಗಿ ಹಾಲಿನ ಕಲಬೆರಕೆ ಬಗ್ಗೆ ದೂರು ಬಂದರೆ ಮತ್ತು ಬೇರೆ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ಖಾಸಗಿ ಡೇರಿಯ ಹಾಲು ಸರಬರಾಜು ಆಗುತ್ತಿದ್ದರೆ, ಜಿಲ್ಲಾಮಟ್ಟದ ಚಾಲನಾ ಸಮಿತಿಗೆ ಮಾಹಿತಿ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಖಾಸಗಿ ಹಾಲಿನ ಡೇರಿಗಳಿಗೆ ತಮ್ಮ ಇಲಾಖೆಯಿಂದ ಪರವಾನಗಿ ನೀಡಿದರೆ ಸಮಿತಿಗೆ ಮಾಹಿತಿ ನೀಡಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಪರವಾನಗಿ ಕಡ್ಡಾಯವಾಗಿ ಪಡೆಯಲು ತಿಳಿಸಬೇಕು. ಹಾಲಿನ ಡೇರಿ ಮೇಲೆ ದಾಳಿ ಮಾಡಿದಾಗ ಅಲ್ಲಿ ಕಲಬೆರಕೆ ಎಂದು ವರದಿ ಬಂದಾಗ ಆ ಡೇರಿ ತಮ್ಮ ಇಲಾಖೆಯಿಂದ ನೀಡಿದ ಪರವಾನಗಿ ರದ್ದುಗೊಳಿಸಲು ಪಶುಪಾಲನೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ವತಿಯಿಂದ ಅಕ್ಷರ ದಾಸೋಹ ಯೋಜನೆಗೆ ಹಾಲಿನ ಪೊಟ್ಟಣ ವಿತರಿಸುವ ಮುನ್ನ ತಯಾರಿಸಿರುವ ಮತ್ತು ಕೊನೆ ದಿನಾಂಕ, ಬ್ಯಾಚ್ ಸಂಖ್ಯೆ ಹಾಗೂ ತಯಾರಕರ ವಿಳಾಸ ಪರಿಶೀಲಿಸಿ, ವಿತರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಅಂಕಿತ ಅಧಿಕಾರಿ ಡಾ.ಅರ್ಚನಾ ಕಮಲಾಪುರಕರ್, ಆಹಾರ ಸುರಕ್ಷತಾ ಅಧಿಕಾರಿ ಆಂಜನೇಯ ಬೈಕಾರ, ಡಿಡಿಪಿಐ ಶಾಂತಗೌಡ ಪಾಟೀಲ ಇದ್ದರು.

**

ಕಲಬೆರಕೆ ಕಂಡು ಹಿಡಿಯುವುದು ಹೇಗೆ?

ಹಾಲಿಗೆ ಕೆಲ ಹನಿ ಅಯೋಡಿನ್ ಟಿಂಚರ್ ಅಥವಾ ಅಯೋಡಿನ್ ದ್ರಾವಣ ಹಾಕಿದಾಗ ಹಾಲು ನೀಲಿ ಬಣ್ಣಕ್ಕೆ ತಿರುಗಿದರೆ, ಅದರಲ್ಲಿ ಸ್ವಾರ್ಚ್ ಮಿಶ್ರಣ ಮಾಡಲಾಗಿದೆ ಎಂದು ಖಚಿತವಾಗುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಯೂರಿಯಾ ಮಿಶ್ರಣವಾಗಿದ್ದರೆ ಏನು ಮಾಡುವುದು?:ಒಂದು ನಳಿಕೆಯಲ್ಲಿ ಒಂದು ಟೀ ಚಮಚದಷ್ಟು ಹಾಲು ತೆಗೆದುಕೊಳ್ಳಬೇಕು. ಅದಕ್ಕೆ ಅರ್ಧ ಚಮಚದಷ್ಟು ಸೋಯಾಬಿನ್ ಪುಡಿ ಮಿಶ್ರಣ ಮಾಡಬೇಕು. ನಳಿಕೆಯನ್ನು ಚೆನ್ನಾಗಿ ಅಲುಗಾಡಿಸಿ, 5 ನಿಮಿಷದ ನಂತರ ಕೆಂಪು ಲಿಟ್ಮಸ್ ಪೇಪರ್ ಅದ್ದಿ, ಅರ್ಧ ನಿಮಿಷದ ನಂತರ ಪೇಪರ್ ತೆಗೆಯಬೇಕು. ಆಗ ಲಿಟ್ಮಸ್ ಪೇಪರ್ ಬಣ್ಣ ಕೆಂಪು ಇದ್ದದ್ದು, ನೀಲಿ ವರ್ಣಕ್ಕೆ ತಿರುಗಿದ್ದರೆ, ಅದರಲ್ಲಿ ಯೂರಿಯಾ ಅಂಶ ಇದೆ ಎಂದರ್ಥ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

***

ನಕಲಿ ಹಾಲಿಗೆ ಏನೇನು ಬೆರೆಸುತ್ತಾರೆ?

ನೀರು ಸ್ಟಾರ್ಚ್‌, ಯೂರಿಯಾ, ಸಾಬೂನುಪುಡಿ, ಸಿಂಥೆಟಿಕ್ ಹಾಲು, ಗ್ಲೂಕೋಸ್, ವನಸ್ಪತಿ, ಅಮೋನಿಯಂ, ಸಲ್ಫೇಟ್‌, ಉಪ್ಪು, ಹೈಡ್ರೋಜನ್, ಪೆರಾಕ್ಸೈಡ್, ಸಕ್ಕರೆ, ಸೋಡಿಯಂ ಬೈ ಕಾರ್ಬೊನೇಟ್, ಬೋರಿಕ್ ಆ್ಯಸಿಡ್, ಬ್ಲಾಟಿಂಗ್‌ ಪೇಪರ್, ಬಿಳಿಪೆಂಟ್, ಕಾಸ್ಟಿಕ್ ಸೋಡಾ, ಶಾಂಪೂ ಗಳನ್ನು ಕಲಬೆರಕೆ ಮಾಡುತ್ತಾರೆ. ಹಾಲನ್ನು ಸಾಮಾನ್ಯವಾಗಿ ನೀರಿನಿಂದ ದುರ್ಬಲ ಗೊಳಿಸಲಾಗುತ್ತದೆ. ಇದು ಅದರ ಪೌಷ್ಟಿಕಾಂಶದ ಮೌಲ್ಯ ಕಳೆದುಕೊಳ್ಳುತ್ತದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

**

ಜಿಲ್ಲೆಯ ವಸತಿ ನಿಲಯಗಳಿಗೆ ಸರಬರಾಜು ಆಗುತ್ತಿರುವ ಹಾಲಿನ ಪುಡಿಯ ಆಹಾರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಸಲ್ಲಿಸಿ, ಪರೀಕ್ಷೆ ಬಳಿಕ ವರದಿ ನೀಡಿ
ಸ್ನೇಹಲ್ ಆರ್.,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT