ಮಂಗಳವಾರ, ಮೇ 11, 2021
24 °C
ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಸೂಚನೆ

ಮಾಸ್ಕ್‌ ಧರಿಸದಿದ್ದರೆ ದಂಡ ವಿಧಿಸಲು ಜಿಲ್ಲಾಧಿಕಾರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಂದ ದಂಡ ವಸೂಲಿ ಮಾಡಿ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ದಂಡ ವಿಧಿಸುವ ಅಧಿಕಾರವನ್ನು ಈಗಾಗಲೇ ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದ್ದು, ದಂಡ ವಿಧಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ತಡೆಗೆ ಸರ್ಕಾರ ಸೂಚಿಸಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆ ಸಮಾರಂಭಗಳಲ್ಲಿ ನಿಗದಿಗಿಂತ ಹೆಚ್ಚಿನ ಜನ ಸೇರಿದ್ದರೆ ದಂಡ ವಿಧಿಸಿ, ಅಂಗಡಿ, ಮಾಲ್‍ಗಳಲ್ಲಿ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಗ್ರಾಹಕರಿಗೂ ಮಾಸ್ಕ್ ಧರಿಸುವಂತೆ ತಿಳಿಹೇಳಬೇಕೆಂದರು.

ಹಿರಿಯ ನಾಗರಿಕರು ಕೋವಿಡ್ ಲಸಿಕೆ ಪಡೆಯುವಂತೆ ನಗರ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು ಶ್ರಮಿಸಬೇಕು. ಹಿಂದೆ ಕೋವಿಡ್ ಸಂದರ್ಭ ರಚಿಸಲಾಗಿದ್ದ ತಂಡಗಳು ಈಗಲೂ ಕರ್ತವ್ಯ ನಿರ್ವಹಿಸಬೇಕು. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಹಚ್ಚುವಿಕೆ, ಹೋಂ ಕ್ವಾರಂಟೈನ್ ಭೇಟಿ, ಕ್ವಾರಂಟೈನ್ ಆ್ಯಪ್ ನಿರ್ವಹಣೆ, ಗ್ರಾಮೀಣ ಕಾರ್ಯಪಡೆಗಳು ತಕ್ಷಣ ಸಭೆ ಸೇರಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಾರ್ವಜನಿಕರಿಗೆ ಕೋವಿಡ್ ಸುರಕ್ಷತಾ ನಿಯಮಗಳ ಅರಿವು ಮೂಡಿಸಲು ಕರಪತ್ರಗಳ ಹಂಚಿಕೆ ಮಾಡಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಗೆ ಮಹಾರಾಷ್ಟ್ರ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಮತ್ತು ಕಲಬುರ್ಗಿಯಿಂದ ಬರುವವರ ಮೇಲೆ ಹೆಚ್ಚಿನ ಮಟ್ಟದಲ್ಲಿ ನಿಗವಹಿಸಿ 72 ಗಂಟೆಗಳ ಕೋವಿಡ್ ನೆಗೆಟಿವ್ ವರದಿ ಹಾಜರು ಪಡಿಸುವುದು ಕಡ್ಡಾಯ. ಕೋವಿಡ್ ನಿಯಂತ್ರಿಸುವ ಕುರಿತು ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದ್ದು, ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ ರಜಪೂತ್, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಪ್ರಭಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಸವರಾಜ ಹಿರೇಮಠ, ಡಾ.ಭಗವಾನ್ ಅನ್ವರ್, ಡಾ.ಸಾಜೀದ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.