ಭಾನುವಾರ, ಆಗಸ್ಟ್ 1, 2021
28 °C
ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ ಎದುರು ಮಹಿಳೆಯರ ಅಳಲು

ಸಾಲದ ಬ್ಯಾನಿಯಿಂದ ಸತ್ರೂ ರೊಕ್ಕ ಬಂದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೋರನಹಳ್ಳಿ (ಶಹಾಪುರ): ‘ಸಾಲದ ಬ್ಯಾನಿಯಿಂದ ನಮ್ ಗಂಡ ನಾಲ್ಕು ತಿಂಗಳ ಹಿಂದೆ ಸತ್ತು ಹ್ವಾದರು. ನಮಗ್ ಸರ್ಕಾರ ನಯಾ ಪೈಸೆ ಪರಿಹಾರದ ರೊಕ್ಕ ಕೊಟ್ಟಿಲ್ಲ. ಸಾಲದವರ ಕಿರಿ ಕಿರಿ ಜಗ್ಗಿ ಆಗ್ಯಾದ್. ಸಂಸಾರ ನಡೆಸುವುದು ದುಸ್ತಾರ ಆಗ್ಯಾದ್. ನಮಗೆ ನ್ಯಾಯ ಕೊಡು ದೇವ್ರೆ ನಿಮ್ ಕಾಲಿಗಿ ಬಿದ್ದಿನಿ.

ಇದು ತಾಲ್ಲೂಕಿನ ದೋರನಹಳ್ಳಿ ಗ್ರಾಮಕ್ಕೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ ಭೇಟಿ ನೀಡಿದಾಗ, ಆತ್ಮಹತ್ಯೆ ಮಾಡಿಕೊಂಡ ರೈತರ, ಪತ್ನಿಯರು ಸಚಿವರ ಮುಂದೆ ಅಳಲು ತೊಡಿಕೊಂಡ ಪರಿಯಿದು.

ನಾಲ್ಕು ತಿಂಗಳ ಹಿಂದೆ ದೋರನಹಳ್ಳಿ ಗ್ರಾಮದ ರೈತ ಸುಭಾಸ ಹಾಗೂ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ರೈತ ತಿಪ್ಪಣ್ಣ ಎನ್ನುವರು ಸಾಲದ ಕಾಟದಿಂದ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಶಹಾಪುರ ಠಾಣೆಯಲ್ಲಿ ಎರಡು ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ರೈತ ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರದಿಂದ ನೀಡಲಾಗುವ ₹ 5ಲಕ್ಷ ರೈತ ಪರಿಹಾರ ನಿಧಿ ಹಣ ನೀಡಿಲ್ಲ. ಸಾಕಷ್ಟು ಬಾರಿ ಕಚೇರಿಗೆ ಹೋರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಮಗೆ ನ್ಯಾಯ ಕೊಡಿ ಎಂದು ಮೃತ ರೈತ ಸುಭಾಸನ ಪತ್ನಿ ಅಯ್ಯಮ್ಮ ಅವರು ಸಚಿವರ ಕಾಲಿಗೆ ಎರಗಿದರು. ಅಲ್ಲದೆ ಮೃತ ತಿಪ್ಪಣ ಅವರ ಪತ್ನಿ ನಾಗರತ್ನ ಅವರು ಧ್ವನಿಗೂಡಿಸಿದರು.

ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ಸಚಿವರು ಸ್ಥಳದಲ್ಲಿಯೇ ಇದ್ದ ಸ್ಥಾನಿಕ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಅವರನ್ನು ವಿಚಾರಿಸಿ, ’ಏನ್ರಿ ಇದೆಲ್ಲ. ಯಾಕೆ ಪರಿಹಾರ ನೀಡಿಲ್ಲ. ನಾಚಿಕೆ ಆಗಲ್ವಾ. ತಕ್ಷಣ ಪರಿಹಾರದ ವ್ಯವಸ್ಥೆ ಮಾಡಿ. ಇನ್ನೆರಡು ದಿನದಲ್ಲಿ ಕ್ರಮ ತೆಗೆದುಕೊಳ್ಳುವೆ. ನನಗೆ ಪೊನ್ ಮಾಡಿ. ನಿಮಗೆ ಯಾರು ಸಾಲ ವಾಪಸು ನೀಡುವಂತೆ ಕಿರುಕುಳ ನೀಡಿದರೆ ದೂರು ಕೊಡಿ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಸಚಿವರು ನೊಂದ ಮಹಿಳೆಯರಿಗೆ ಅಭಯ ನೀಡಿದರು.

ನಿಷ್ಕಾಳಜಿಗೆ ಕೈಗನ್ನಡಿ: ರೈತ ಆತ್ಮಹತ್ಯೆ ಪ್ರಕರಣಗಳನ್ನು ಪೊಲೀಸ್‌ ತನಿಖಾಧಿಕಾರಿ, ಕಂದಾಯ, ಕೃಷಿ ಇಲಾಖೆಯ ಅಧಿಕಾರಿಗಳು ನಿಷ್ಕಾಜಿ ಮಾಡುತ್ತಾರೆ. ಇಲ್ಲದ ತಾಂತ್ರಿಕ ನೆಪಗಳನ್ನು ಮುಂದೆ ಇಟ್ಟುಕೊಂಡು ಕಾಲಹರಣ ಮಾಡುತ್ತಾರೆ. ರೈತ ಆತ್ಮಹತ್ಯೆ ಪರಿಹಾರ ಎಂಬುವುದು ಕನ್ನಡಿಯೊಳಗಿನ ಗಂಟು ಆಗಿದೆ. ಅಧಿಕಾರಿಗಳ ನಿಷ್ಕಾಳಜಿಗೆ ಇವೆರಡು ಪ್ರಕರಣ ಕೈಗನ್ನಡಿಯಾಗಿವೆ ಎಂದು ಅಲ್ಲಿನ ನೆರೆದ ಜನತೆ ಸಚಿವರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಕರಣ ದಾಖಲಿಸಿ’

‘ರೈತ ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಸದಸ್ಯರಿಗೆ ಸಾಲ ನೀಡಿದವರು ಕಿರುಕುಳ ನೀಡಿದರೆ ಅಂತಹ ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸಿ. ಗ್ರಾಮದಲ್ಲಿ ಡಂಗೂರ ಸಾರಿ. ಮೀಟರ್ ಬಡ್ಡಿ ದಂಧೆ ನಡೆಸುವರನ್ನು ಮಟ್ಟಹಾಕಿ. ಅವರಿಂದ ತೊಂದರೆಗೆ ಒಳಗಾದವರು ಠಾಣೆಗೆ ದೂರು ನೀಡಬೇಕು. ಈ ಬಗ್ಗೆ ಪೊಲೀಸರು ತಕ್ಷಣ ಕ್ರಮ ತೆಗೆದುಕೊಳ್ಳಬೇಕು‘ ಎಂದು ಉಸ್ತುವಾರಿ ಸಚಿವ ಶಂಕರ್ ಅವರು ಸ್ಥಳದಲ್ಲಿಯೇ ಇದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಅವರಿಗೆ ಸೂಚಿಸಿದರು.

–0–

ರೈತ ಆತ್ಮಹತ್ಯೆ ಪ್ರಕರಣದ ತನಿಖೆ ವರದಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಸಮೇತ ತಹಶೀಲ್ದಾರ್‌ ಕಚೇರಿಗೆ ಸಲ್ಲಿಸಬೇಕು. ನಂತರ ಕೃಷಿ ಇಲಾಖೆಗೆ ಬರುತ್ತದೆ.
ಸುನಿಲಕುಮಾರ, ಸಹಾಯಕ ಕೃಷಿ ನಿರ್ದೇಶಕರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.