ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳಿಗೆ ಉತ್ತಮ ಚಿಕಿತ್ಸೆ : ಬಸನಗೌಡ ಪಾಟೀಲ ಯಡಿಯಾಪುರ ಸಲಹೆ

ನಗನೂರ ಆರೋಗ್ಯ ಕೇಂದ್ರಕ್ಕೆ ಜಿ.ಪಂ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ ಭೇಟಿ
Last Updated 7 ಫೆಬ್ರುವರಿ 2021, 15:53 IST
ಅಕ್ಷರ ಗಾತ್ರ

ನಗನೂರು (ಕೆಂಭಾವಿ): ‘ಆಡಳಿತ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ ಸೂಚನೆ ನೀಡಿದರು.

ಪಟ್ಟಣ ಸಮೀಪದ ನಗನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ರೋಗಿಗಳ ಸಮಸ್ಯೆ ಆಲಿಸಿದರು.

ಅಸ್ವಚ್ಛತೆಯಿಂದ ಕೂಡಿದ ಶೌಚಾಲಯ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಒಳ ರೋಗಿ, ಹೆರಿಗೆ ವಾರ್ಡ್‌ ಸೇರಿದಂತೆ ಇತರ ವಾರ್ಡ್‌ಗಳಿಗೆ ತೆರಳಿ ಪರೀಕ್ಷಿಸಿದರು.

‘ಕೊಠಡಿಗಳ ಕಿಟಕಿಗಳಲ್ಲಿ ಗಲೀಜು ಕಂಡ ಅವರು ಆಸ್ಪತ್ರೆಯಲ್ಲಿಯೇ ಈ ರೀತಿ ಅವ್ಯವಸ್ಥೆ ಇದ್ದರೆ ಹೇಗೆ? ಶೀಘ್ರ ಅದನ್ನು ಸರಿಪಡಿಸಿ ಸ್ವಚ್ಚತೆ ಕಾಪಾಡಬೇಕು’ ಎಂದು ಸೂಚಿಸಿದರು.

‘ಯಾಳಗಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಲಕ್ಷ್ಮಣ ಅವರನ್ನು ನಗನೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಭಾರ ಆಡಳಿತ ವೈದ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ವಾರಕ್ಕೆ ಮೂರು ದಿನವೂ ಸರಿಯಾಗಿ ಬಂದು ರೋಗಿಗಳನ್ನು ಉಪಚರಿಸುತ್ತಿಲ್ಲ. ಇಂಥ ವೈದ್ಯರಿಂದ ಉತ್ತಮ ಚಿಕಿತ್ಸೆ ಬಯಸಲು ಸಾಧ್ಯವೆ?’ ಎಂದು ಗ್ರಾಮದ ಮುಖಂಡರಾದ ಶರಣಪ್ಪ ದೇಸಾಯಿ ಹಾಗೂ ಚೆನ್ನರಡ್ಡಿ ದೇಸಾಯಿ ಅಳಲು ತೊಡಿಕೊಂಡರು.

‘ನಗನೂರ ಆಸ್ಪತ್ರೆಗೆ ಹಲವಾರು ಹಳ್ಳಿಗಳು ಒಳಪಡುತ್ತವೆ. ಈ ಆಸ್ಪತ್ರೆಗೆ ಪ್ರತಿದಿನ ದೂರದ ಊರುಗಳಿಂದ ರೋಗಿಗಳು ಬರುತ್ತಾರೆ. ರಾತ್ರಿ ವೇಳೆ ವೈದ್ಯಾಧಿಕಾರಿ ಇರುವುದಿಲ್ಲ. ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ. ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಯಂತ್ರ ತುಕ್ಕು ಹಿಡಿದಿದೆ. ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹಲವು ಕೊಠಡಿಗಳಿಗೆ ಫ್ಯಾನಿನ ವ್ಯವಸ್ಥೆಯೂ ಸರಿಯಾಗಿ ಇಲ್ಲ. ಶೌಚಾಲಯ ದುರ್ವಾಸನೆಯಿಂದ ಕೂಡಿದೆ’ ಎಂದು ದೂರಿದರು.

ರಾತ್ರಿ ವೇಳೆ ಕಡ್ಡಾಯವಾಗಿ ವೈದ್ಯಾಧಿಕಾರಿ ಇರುವಂತೆ ಸೂಚಿಸಬೇಕು. ಜತೆಗೆ ಆಂಬುಲೆನ್ಸ್‌ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಅಧ್ಯಕ್ಷ ಯಡಿಯಾಪುರ,‘ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.

ಮುಖಂಡರಾದ ಬಸನಗೌಡ ಹೊಸಮನಿ ಯಾಳಗಿ, ಮಲ್ಲಣ್ಣ ಮಾಣಸುಣಗಿ, ಶಿವನಗೌಡ ದೇವರಡ್ಡಿ, ಶರಣಪ್ಪ ದೇಸಾಯಿ, ಚೆನ್ನರಡ್ಡಿ ದೇಸಾಯಿ, ಬಲವಂತರೆಡ್ಡಿ ದೇಸಾಯಿ, ಶಿವರಾಜ ಗೂಗಲ್, ಆಯುಷ್ ವೈದ್ಯಾಧಿಕಾರಿ ಡಾ.ಸುನೀಲ ಕುಮಾರ ಗಿಂಡಿ ಹಾಗೂ ಸಿಬ್ಬಂದಿ ವರ್ಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT