ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧಕ ಡಿ.ಎನ್.ಅಕ್ಕಿಗೆ ರಾಜ್ಯೋತ್ಸವ ಪ್ರಶಸ್ತಿ

Last Updated 29 ಅಕ್ಟೋಬರ್ 2020, 4:43 IST
ಅಕ್ಷರ ಗಾತ್ರ

ಶಹಾಪುರ: ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಶಹಾಪುರ ತಾಲ್ಲೂಕಿನ ಗೋಗಿ (ಕೆ) ಗ್ರಾಮದ ದೇವಿಂದ್ರಪ್ಪ ನಾಭಿರಾಜ ಅಕ್ಕಿ (ಡಿ.ಎನ್.ಅಕ್ಕಿ) ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮುಖದ ಮೇಲೆ ದೊಡ್ಡದಾದ ಕನ್ನಡಕ, ಸದಾ ಜೋಳಿಗೆಯಂತೆ ಇರುವ ಬ್ಯಾಗ್ ಇಲ್ಲದೇ ಅವರು ಮನೆಯಿಂದ ಹೊರಬರುವವರೇ ಅಲ್ಲ. ಗ್ರಾಮಗಳಿಗೆ ತೆರಳಿ ಶಾಸನಗಳ ವಿವಿಧ ಮಜಲುಗಳನ್ನು ಸಂಶೋಧಿಸುತ್ತ ಮತ್ತು ಅವುಗಳ ಕುರಿತು ಬೆಳಕು ಚೆಲ್ಲುತ್ತ ಬದುಕಿನ ಬಹುತೇಕ ಸಮಯವನ್ನು ಅದಕ್ಕಾಗಿ ಮೀಸಲಿಟ್ಟಿದ್ದಾರೆ. ಅವರಿಗೆ ಈಗ 72 ವರ್ಷ. ಕಾಲು ನೋವಿನ ಸಮಸ್ಯೆಯಿಂದ ಸದ್ಯ ಹೆಚ್ಚು ಓಡಾಟವಿಲ್ಲ.

ಸನ್ನತಿ ಬೌದ್ದ ಸ್ತೂಪಗಳು. ಶಿರವಾಳ, ಅಣಬಿ, ಹಾರಣಗೇರಾದ ಬೂದಿಗುಡ್ಡ, ಕನ್ಯಾಕೊಳ್ಳುರ, ಮದ್ರಿಕಿ, ಬಿರನೂರ, ವಿಭೂತಿಹಳ್ಳಿ, ಗುರಸಗಣಿ ಹೀಗೆ ಹಲವಾರು ಕ್ಷೇತ್ರಗಳಿಗೆ ತೆರಳಿ ಸಂಶೋಧನೆ ನಡೆಸಿರುವ ಅವರು ಆಸಕ್ತಿಕರ ಮತ್ತು ಅಪರೂಪದ ಮಾಹಿತಿ ಒದಗಿಸಿದ್ದಾರೆ.

‘5 ಸಾವಿರ ವರ್ಷದ ಹಿಂದಿನ ಕಲ್ಲಿನ ಕೊಡಲಿ, ಬ್ಲೇಡ್, ಬೊಕಿ ಮುಂತಾದ ಪಳಿಯುಳಿಕೆಗಳನ್ನು ಅಕ್ಕಿಯವರು ಪತ್ತೆ ಮಾಡಿದ್ದಾರೆ. ಏವೂರ ಗ್ರಾಮದಲ್ಲಿ 6ನೇ ವಿಕ್ರಮಾದಿತ್ಯ ಕಾಲದ ಶಾಸನದ ಬಗ್ಗೆ ಸಂಶೋಧನೆ ನಡೆಸಿ ಹೊರ ಜಗತ್ತಿಗೆ ಪರಿಚಯಿಸಿದ್ದು ಅವರ ಕೈಗೊಂಡ ಸಂಶೋಧನೆಗೆ ಹಿಡಿದ ಕೈಗನ್ನಡಿ. ಅವರು ಅಪರೂಪದ ಸಂಶೋಧಕರು’ ಎನ್ನುತ್ತಾರೆ ಉಪನ್ಯಾಸಕ ರಾಘವೇಂದ್ರ ಹಾರಣಗೇರಾ.

1948 ಅಕ್ಟೋಬರ 3ರಂದು ಜನಿಸಿದ ಜನಿಸಿದ ಅಕ್ಕಿಯವರ ತಂದೆ ನಾಭಿರಾಜ ಹಾಗೂ ತಾಯಿ ಶ್ರೀಕಾಂತಮ್ಮ. ಪತ್ನಿ ಸುಮಂಗಲಾ, ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ. ವೃತ್ತಿಯಿಂದ ಚಿತ್ರಕಲಾ ಶಿಕ್ಷಕರಾದ ಅವರು ಶಾಸನ ಮತ್ತು ಇತಿಹಾಸ ಸಂಶೋಧನೆಯನ್ನು ಹವ್ಯಾಸದ ರೂಪದಲ್ಲಿ ರೂಢಿಸಿಕೊಂಡರು. ಗೋಗಿ ಪ್ರೌಢಶಾಲೆಯಲ್ಲೇ 31 ವರ್ಷ ಕಾರ್ಯನಿರ್ವಹಿಸಿದರು.

ಡಿ.ಎನ್.ಅಕ್ಕಿ ಅವರು ಹಲವಾರು ಕೃತಿಗಳನ್ನು ಹೊರ ತಂದಿದ್ದಾರೆ. ಅವುಗಳಲ್ಲಿ ‘ಹಡೆದವ್ವ ಹಾಡ್ಯಾಳ’ ವರ್ಧಮಾನ ಮಹಾವೀರ (ನಾಟಕ), ‘ಜೈನ ವಿಗ್ರಹಗಳು’, ‘ಸನ್ನತಿ ಚಂದ್ರಲಾಂಬಾ’, ‘ಮಾಯೆ ಮದ್ದಲೆ’, ‘ಶಾತವಾಹನರ ಕಾಲದ 2,000 ಹಿಂದಿನ ವರ್ಷದ ಸೀಸದ ನಾಣ್ಯಗಳ ಶೋಧನೆ ಪ್ರಮುಖ ಕೃತಿಗಳು’ ಆಗಿವೆ. ಇಬ್ಬರು ವಿದ್ಯಾರ್ಥಿಗಳು ಡಿ.ಎನ್.ಅಕ್ಕಿಯವರ ಸಂಶೋಧನೆ ಮೇಲೆ ಎಂ.ಫಿಲ್ ಮಾಡಿದ್ದಾರೆ. ಡಾ.ಹಳ್ಳೆಪ್ಪ ಲಿಂಗದಳ್ಳಿ ಅವರು ಅಕ್ಕಿಯವರ ಬದುಕು ಬರಹ ಸಂಶೋಧನಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ.

ಸಂದ ಗೌರವ: 1997ರಲ್ಲಿ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಗೊಮ್ಮಟೇಶ್ವರ ವಿದ್ಯಾ ಪ್ರಶಸ್ತಿ, ಸ್ವಸ್ತಿ ಶ್ರೀ, ದೇವಿಂದ್ರಕೀರ್ತಿ ದತ್ತಿ, ಜೈನ ರಾಷ್ಟ್ರಗೌರವ, ಜೈನ ಸಂಸ್ಕೃತಿ ಸಂರಕ್ಷಕ, ಸಗರನಾಡು ಸೇವಾ ಪ್ರಶಸ್ತಿ ಬಂದಿದ್ದು, ಈಗ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

‘ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಸೇವೆ ಸಲ್ಲಿಸಿರುವ ಡಿ.ಎನ್.ಅಕ್ಕಿಯವರ ಕೊಡುಗೆ ಗುರುತಿಸುವಂತಾಗಬೇಕು. ಅವರಿಗೆ ಒಮ್ಮೆಯಾದರೂ ತಾಲ್ಲೂಕು ಇಲ್ಲವೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಗೌರವ ಸ್ಥಾನ ನೀಡಬೇಕಿತ್ತು ಎಂದು ಅಕ್ಕಿಯವರ ಸಾಹಿತ್ಯ ಅಭಿಮಾನಿಗಳು ತಿಳಿಸಿದ್ದಾರೆ. ಅವರ ಮೊಬೈಲ್ ನಂಬರ್: 94485 77898

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT