ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Phone in| ಭಯ ಬೇಡ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ: ಸಲಹೆ

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಜಿ.ಹಿಳ್ಳಿ ಸಲಹೆ
Last Updated 18 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಜಿ. ಹಿಳ್ಳಿ ಅವರ ಜೊತೆಗೆ ‘ಪ್ರಜಾವಾಣಿ’ ಸೋಮವಾರ ಹಮ್ಮಿಕೊಂಡಿದ್ದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗದ ವಿದ್ಯಾರ್ಥಿಗಳು, ಪೋಷಕರು ಮತ್ತು ಪ್ರಾಂಶುಪಾಲರು ಕರೆ ಮಾಡಿ, ಪಿಯು ಪರೀಕ್ಷೆಗೆ ಸಂಬಂಧಿಸಿದಂತೆ ತಮ್ಮ ಸಂಶಯಗಳನ್ನು ನಿವಾರಿಸಿಕೊಂಡರು.

ಕಳೆದ ಸಲ ಕೋವಿಡ್‌ ಕಾರಣಕ್ಕೆ ರದ್ದಾಗಿದ್ದ ಪಿಯು ಪರೀಕ್ಷೆ ಈ ಸಲವೂ ರದ್ದಾಗುವುದೇ? ಈ ಬಾರಿ ಪರೀಕ್ಷೆಗಳು ಹೇಗಿರಲಿವೆ? ಮಾಸ್ಕ್‌ ಕಡ್ಡಾಯವೇ? ಪರೀಕ್ಷಾ ವಿಧಾನ ಹೇಗಿರುತ್ತದೆ ಮುಂತಾದ ಪ್ರಶ್ನೆಗಳನ್ನು ಕೇಳಿ, ಗೊಂದಲ ಮತ್ತು ಆತಂಕ ನಿವಾರಿಸಿಕೊಂಡರು.

ಎಲ್ಲರ ಪ್ರಶ್ನೆಗಳಿಗೂ ಉತ್ತರಿಸಿದ ಉಪನಿರ್ದೇಶಕರು, ‘6 ತಿಂಗಳ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ ಮತ್ತು ಘಟಕ ‍ಪರೀಕ್ಷೆಗಳನ್ನು ಎದುರಿಸಿದ್ದೀರಿ. ಅದರಂತೆ ಈ ವಾರ್ಷಿಕ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ’ ಎಂದರು.

l ಕೋವಿಡ್ ನಂತರದ ಪರೀಕ್ಷೆಗಳು ಹೇಗಿರಲಿವೆ?

ಗಿರೀಶ ಕೆಂಭಾವಿ, ಮೆಹಬೂಬಿ ರಂಗಂಪೇಠೆ, ಬೂದೆಪ್ಪ ಎಂ ಕಟ್ಟಿ ಸುರಪುರ, ನಾಗರಾಜ ಸುರಪುರ, ನರಸಿಂಹಲು ಗುರುಮಠಕಲ್

ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಮವಸ್ತ್ರದ ಕುರಿತು ಮಾಹಿತಿ ನೀಡಿ.
ಉತ್ತರ: ಕೋವಿಡ್‌ಗೂ ಮುನ್ನ ಇದ್ದ ಪರೀಕ್ಷೆ ಮಾದರಿಯಲ್ಲೇ ಈ ಸಲ ಪರೀಕ್ಷೆ ನಡೆಯಲಿದೆ. ನಕಲು ಮಾಡಲು ಅವಕಾಶವಿಲ್ಲ. ಸರ್ಕಾರದ ಆದೇಶದಂತೆ ಸಮವಸ್ತ್ರ ಜಾರಿಯಿರುವ ಕಾಲೇಜಿನ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರದಲ್ಲೆ ಬರಬೇಕು. ಹಿಜಾಬ್, ಶಾಲು ಸೇರಿ ಯಾವುದೇ ಧಾರ್ಮಿಕ ಚಿನ್ಹೆಗಳಿರುವ ವಸ್ತ್ರಗಳನ್ನು ಧರಿಸುವಂತಿಲ್ಲ. ಪರೀಕಾ ಕೇಂದ್ರದವರೆಗೂ ಹಿಜಾಬ್ ಧರಿಸಿ ಪರೀಕ್ಷಾ ಕೇಂದ್ರದೊಳಗೆ ಹೋಗುವಾಗ ಹಿಜಾಬ್ ತೆಗೆದು ಪರೀಕ್ಷೆ ಬರೆಯಬೇಕು. ಮಾಸ್ಕ್‌ ಕಡ್ಡಾಯವಲ್ಲ, ಸ್ಯಾನಿಟೈಸ್‌ ವ್ಯವಸ್ಥೆ ಇರಲಿದೆ.

l ಯಾದಗಿರಿ ಹಿಂದುಳಿದ ಜಿಲ್ಲೆಯಾಗಿದ್ದು, ಫಲಿತಾಂಶ ಹೆಚ್ಚಳಕ್ಕೆ ತೆಗೆದುಕೊಂಡ ಕ್ರಮಗಳೇನು? ಅಗತ್ಯಕ್ಕೂ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರಿಸಿದಾಗ ಮೌಲ್ಯಮಾಪನ ಹೇಗಿರುತ್ತೆ ?

ಸಾಬರೆಡ್ಡಿ ಜಿ.ಯದ್ಲಾಪುರ, ರಾಘವೇಂದ್ರ ಸುರಪುರ

ಉತ್ತರ: ಕೋವಿಡ್‌ಗಿಂತ ಮೊದಲು 30ನೇ ಸ್ಥಾನದಲ್ಲಿದ್ದ ಜಿಲ್ಲೆಯ ಫಲಿತಾಂಶ ಶೇ 8.5 ರಷ್ಟು ಹೆಚ್ಚಳವಾಗಿ 25ನೇ ಸ್ಥಾನಕ್ಕೆ ಮೇಲೇರಿದೆ. ಈಗ ಪಠ್ಯದಲ್ಲಿ ಶೇ 30 ರಷ್ಟು ಕಡಿತವಾಗಿದೆ. ತರಗತಿಗಳು ಆರಂಭವಾದಾಗಿನಿಂದ ಪಠ್ಯ ವಿಷಯ ಬೋಧನೆ ಪೂರ್ಣಗೊಂಡಿದೆ. ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆಗಳ ಆಯ್ಕೆಗೆ ಹೆಚ್ಚುವರಿ ಅವಕಾಶ ಕಲ್ಪಿಸಲಾಗಿದ್ದು, ಸರಿಯಾದ ಉತ್ತರಗಳಿಗೆ ಅಂಕಗಳನ್ನು ನೀಡಲಾಗುತ್ತದೆ. ಹೆಚ್ಚಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿದ್ದರೆ ಅವುಗಳನ್ನು ಕೈಬಿಟ್ಟು, ಆಯಾ ವಿಭಾಗದ ಅವಶ್ಯಕ ಅಂಕಗಳನ್ನು ನೀಡಲಾಗುತ್ತದೆ.

l ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ತೆರಳಲು ಮತ್ತು ಪರೀಕ್ಷೆ ಮುಗಿದ ನಂತರ ಗ್ರಾಮಕ್ಕೆ ಹಿಂದಿರುಗಲು ಬಸ್ ವ್ಯವಸ್ಥೆಯಿಲ್ಲ. ಪ್ರವೇಶ ಪತ್ರಗಳಲ್ಲಿನ ಸಮಸ್ಯೆಯಿದ್ದರೆ ಏನು ಮಾಡಬೇಕು?

ಬಸವರಾಜ ರಂಗಂಪೇಠೆ, ಬಸವರಾಜ ನಾರಾಯಣಪುರ

ಉತ್ತರ: ಬಸ್‌ ವ್ಯವಸ್ಥೆಗೆ ಸಂಬಂಧಿಸಿದಂತೆ ಈಗಾಗಲೇ ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಬಸ್ ಸಂಪರ್ಕ ಇಲ್ಲದ ಭಾಗದಲ್ಲಿ ಆಯಾ ಪರೀಕ್ಷಾ ಕೇಂದ್ರಗಳಿರುವ ಕಾಲೇಜಿನ ಪ್ರಾಂಶುಪಾಲರು ಸ್ಥಳೀಯ ಬಸ್ ಘಟಕಕ್ಕೆ ಮಾಹಿತಿ ನೀಡಿ ಮನವಿ ಪತ್ರ ನೀಡಬಹುದು. ನಮ್ಮ ಹಂತದಲ್ಲಿಯೂ ಸಹಕರಿಸಲಾಗುವುದು. ಪರೀಕ್ಷಾ ಪ್ರವೇಶ ಪತ್ರದಲ್ಲಿ ಸಮಸ್ಯೆಯಾಗಿದ್ದರೆ ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಭೇಟಿಯಾಗಿ, ಅಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು.

l ಅಂಗವಿಕಲರಿಗೆ ಹೆಚ್ಚುವರಿ ಸಮಯ ಸಿಗುವುದೇ? ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆ? ಪರೀಕ್ಷೆಗಳ ಸಿದ್ಧತೆ ಹೇಗಿದೆ?

ಲಕ್ಷ್ಮೀಕಾಂತ ನಾರಾಯಣಪುರ., ಲಖನ್ ಚವಾಣ್‌, ಸುಮಿತ್ರಾ ಗುರುಮಠಕಲ್, ನೀಲಕಂಠಯ್ಯ ಸ್ವಾಮಿ, ಅಭಿಷೇಕ ದಾಸನಕೇರಿ

ಉತ್ತರ: ಪರೀಕ್ಷಾ ನೋಂದಣಿಗೆ ಮೊದಲೇ ನಿಮ್ಮ ಕಾಲೇಜಿನ ಪ್ರಾಂಶು ಪಾಲರಿಗೆ ನಿಮ್ಮ ಭೌತಿಕ ಅಂಗವೈಕಲ್ಯದ ಪ್ರಮಾಣ ಪತ್ರದೊಡನೆ ಮಾಹಿತಿ ನೀಡಿದ್ದರೆ ನಿಮಗೆ ಸಹಾಯಕರನ್ನು ನೀಡಲು ಅವಕಾಶವಿದೆ. ಆದರೆ, ಅದು ನೀವು ಪ್ರವೇಶಪತ್ರಕ್ಕೆ ನೋಂದಾಯಿಸು ವಾಗಲೇ ಮಾಡಬೇಕಿತ್ತು. ಕೋವಿಡ್-19 ಅಲೆ ಇಲ್ಲದಿರುವುದರಿಂದ ಮಾಸ್ಕ್ ಕಡ್ಡಾಯವಲ್ಲ. ಆದರೆ, ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ನೀವು ಧರಿಸಿದರೆ ಉತ್ತಮ. ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ, ಸಿಬ್ಬಂದಿಗೆ ತರಬೇತಿ ಹಾಗೂ ಮಾಹಿತಿಯನ್ನು ನೀಡಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ತಲುಪಿಸುವ, ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಆರೋಗ್ಯ ಸಿಬ್ಬಂದಿಯು ವಿದ್ಯಾರ್ಥಿಗಳ ದೈಹಿಕ ತಾಪಮಾನ ಪರೀಕ್ಷಿಸಲು ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

l ಎಸ್‌ಟಿಎಂಇ ಕಾಲೇಜಿನಲ್ಲಿ ಹಾಲ್‌ ಟಿಕೆಟ್‌ ಪಡೆಯಲು ಸಮಸ್ಯೆಯಾಗಿದೆ. ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ?

ಶರಣಪ್ಪ, ಯಾದಗಿರಿ

ಉತ್ತರ: ಈಗಾಗಲೇ ಬೇರೆ ಬೇರೆ ಕಾಲೇಜುಗಳಲ್ಲಿ ಹಾಲ್‌ ಟಿಕೆಟ್‌ ಹಂಚಿಕೆ ಮಾಡಲಾಗಿದೆ. ಅದರಂತೆ ನಿಮ್ಮ ಕಾಲೇಜಿನ ಐಡಿ, ಪೋರ್ಟಲ್‌ನಲ್ಲಿ ಪಾಸ್‌ವರ್ಡ್‌ ಹಾಕಿದರೆ ಬರುತ್ತದೆ. ಗೊಂದಲವಿದ್ದರೆ ಕಾಲೇಜಿಗೆ ಬನ್ನಿ.

l ಪರೀಕ್ಷಾ ಕೇಂದ್ರದಲ್ಲಿ ಲಾಗ್ ಬುಕ್ ಬಳಕೆಗೆ ಅವಕಾಶವಿದೆಯೆ? ಭಯದ ವಾತಾವರಣವಿದ್ದರೆ ಏನು ಮಾಡಬೇಕು? ನಿತ್ಯ ಪರೀಕ್ಷಾ ಸ್ಥಳದಲ್ಲಿ ಬದಲಾವಣೆಯಾಗುವುದೇ? ಒಂದು ಕಾಲೇಜಿನ ವಿದ್ಯಾರ್ಥಿಗಳಿಗೆಲ್ಲಾ ಒಂದೇ ಕೇಂದ್ರಕ್ಕೆ ನೀಡುತ್ತಾರೋ ಅಥವಾ ಬೇರೆ ಬೇರೆ ಕೇಂದ್ರಗಳಿಗೆ ಹೋಗಬೇಕಾ?

ಸುಮಂತ ರುಕ್ಮಾಪುರ, ಗುರುನಾಥರೆಡ್ಡಿ ಚಿನ್ನಾಕಾರ, ನರಸಪ್ಪ ಸುರಪುರ, ಲಕ್ಷ್ಮೀ ನಾಯ್ಕಲ್

ಉತ್ತರ: ಪರೀಕ್ಷಾ ಕೇಂದ್ರದಲ್ಲಿ ಲಾಗ್ ಬುಕ್ ಬಳಸಬಹುದು. ಆದರೆ, ಉತ್ತರಗಳಿಗೆ ಅನುಕೂಲ ವಾಗಿವಂತೆ ಯಾವುದೇ ಮುದ್ರಣವಿಲ್ಲದಂತಿ ರಬೇಕು. ಸೈಂಟಿಫಿಕ್ ಕಾಲ್ಕುಲೇಟರ್ ಬಳಕೆಗೆ ಅವಕಾಶವಿಲ್ಲ. ಪ್ರತಿ ವಿಭಾಗ ದಲ್ಲೂ ಹೆಚ್ಚುವರಿ ಐದು ಪ್ರಶ್ನೆಗಳನ್ನು ಈ ಬಾರಿ ನೀಡಿದ್ದರಿಂದ ನಿಮಗೆ ಆಯ್ಕೆಗಳೂ ಹೆಚ್ಚಿವೆ. ಪ್ರಶಾಂತವಾಗಿ ಪರೀಕ್ಷೆಯನ್ನು ಎದುರಿಸಿ. ಒಂದು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ಪರೀಕ್ಷಾ ಕೇಂದ್ರಕ್ಕೆ ನೀಡಲಾಗುತ್ತದೆ. ದಿನ ನಿತ್ಯವೂ ಪರೀಕ್ಷಾ ಕೋಣೆ ಬದಲಾಗುತ್ತದೆ. ಆದರೆ, ಎಲ್ಲಾ ವಿಷಯಗಳಿಗೂ ಒಂದೇ ಪರೀಕ್ಷಾ ಕೇಂದ್ರ.

lನಾನು ಐಟಿಐ ದ್ವಿತೀಯ ವರ್ಷದ ಪರೀಕ್ಷೆ ಬರೆಯುತ್ತಿದ್ದೇನೆ. ಮುಂದೆ ಏನು ಮಾಡುಬೇಕೆಂದು ಗೊತ್ತಾಗದೆ ಗೊಂದಲದಲ್ಲಿದ್ದೇನೆ ಸಲಹೆ ನೀಡಿ.

ಆಕಾಶ್‌, ನಾರಾಯಣಪುರ

ಉತ್ತರ: ಐಟಿಐ ತರಗತಿಗೆ ಸಂಬಂಧಿಸಿದ ಪರೀಕ್ಷೆಗಳು ನಮ್ಮ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ನಿಮ್ಮ ಕೋರ್ಸ್ ಪದವಿ ಪೂರ್ವ ತರಗತಿಗೆ ಸಮವೆಂದು ಸರ್ಕಾರ ಪರಿಗಣಿಸಿದೆ. ಆದ್ದರಿಂದ ಮುಂದೆ ನೀವು ಪದವಿ ತರಗತಿಗಳಿಗೆ ಪ್ರವೇಶ ಪಡೆಯಬಹುದು. ಅಥವಾ ಮೊದಲಿನಂತೆ ನಿಮ್ಮ ವಿಭಾಗದ ಡಿಪ್ಲೊಮಾ ತರಗತಿಗೆ ಪ್ರವೇಶ ಪಡೆಯಬಹುದು.

lಪರೀಕ್ಷಾ ವೇಳೆ ಒಂದು ಗಂಟೆ ಮುಂಚೆ ಯಾಕೆ ಕಾಲೇಜಿಗೆ ಬರಬೇಕು?

ಮರೆಪ್ಪ, ಸುರಪುರ

ಉತ್ತರ: ಪರೀಕ್ಷ ಕೇಂದ್ರದಲ್ಲಿ ಸ್ಯಾನಿಟೈಸ್‌ ಸೇರಿದಂತೆ ವಿದ್ಯಾರ್ಥಿಗಳ ದೇಹದ ಉಷ್ಣತೆ ಪರೀಕ್ಷಿಸಲಾಗುತ್ತಿದೆ. ಅಲ್ಲದೇ ಕೋಣೆ ಸಂಖ್ಯೆಯನ್ನು ಪರಿಶೀಲಿಸಿ ಕೊಳ್ಳಬೇಕಾಗುತ್ತಿದೆ. ಹೀಗಾಗಿ ಮುಂಚಿತವಾಗಿ ಬಂದರೆ ಅನುಕೂಲ.

***

95 ಕಾಲೇಜು, 17 ಪರೀಕ್ಷಾ ಕೇಂದ್ರಗಳು

ಏಪ್ರಿಲ್‌ 22ರಿಂದ ಮೇ 18ರ ವರೆಗೆ ನಡೆಯಲಿರುವ ದ್ವಿತೀಯ ಪಿಯು ಪರೀಕ್ಷೆಗೆ 17 ಕೇಂದ್ರಗಳನ್ನು ಗುರುತಿಸಲಾಗಿದೆ. 17 ಉಪಮುಖ್ಯ ಅಧೀಕ್ಷಕರು, ಒಬ್ಬರು ಸ್ವ್ಯಾಡ್‌, ಪೊಲೀಸ್‌ ಬಂದೋಬಸ್ತ್‌ ಮಾಡಲಾಗುತ್ತಿದೆ. ಅಲ್ಲದೇ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್‌ ಸ್ಕ್ರಿನಿಂಗ್‌ ಮಾಡುವರು. ಜಿಲ್ಲೆಯಲ್ಲಿ 95 ಪದವಿ ಪೂರ್ವ ಕಾಲೇಜುಗಳಿವೆ.
***
ಪರೀಕ್ಷೆಗೆ ಮಾಸ್ಕ್‌ ಕಡ್ಡಾಯವಲ್ಲ

ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಗೆ ಮಾಸ್ಕ್‌ ಕಡ್ಡಾಯವಲ್ಲ. ವಿದ್ಯಾರ್ಥಿಗಳು ತಮ್ಮ ಸುರಕ್ಷತೆ ದೃಷ್ಟಿ ಮಾಸ್ಕ್‌ ಧರಿಸಿ ಬರಬಹುದು. ಯಾರಿಗೂ ಪರೀಕ್ಷಾ ಕೇಂದ್ರದಲ್ಲಿ ಮಾಸ್ಕ್‌ ವಿತರಿಸುವುದಿಲ್ಲ. ಆದರೆ, ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಗೆ ಒಳಬಿಡುವ ಮುನ್ನ ಆರೋಗ್ಯ ಇಲಾಖೆ ದೇಹದ ಉಷ್ಣತೆ ಪರೀಕ್ಷಿಸುವರು.
***
ಒಂದು ಗಂಟೆ ಮುಂಚಿತವಾಗಿ ಬನ್ನಿ

ಪ್ರತಿ ಪರೀಕ್ಷೆಗೆ ವಿದ್ಯಾರ್ಥಿಗಳು ಒಂದು ಗಂಟೆ ಮುಂಚಿತವಾಗಿ ಬಂದರೆ ಪರೀಕ್ಷಾ ಕೋಣೆ ಪರಿಶೀಲಿಸಿಕೊಳ್ಳಲು ಅನುಕೂಲ. ಅಲ್ಲದೇ ಪ‍್ರತಿ ಪರೀಕ್ಷೆಗೂ ಕೋಣೆಗಳು ಬದಲಾವಣೆ ಆಗುತ್ತವೆ. ಈ ಕಾರಣದಿಂದ ವಿದ್ಯಾರ್ಥಿಗಳು ಮುಂಚಿತವಾಗಿ ಬಂದರೆ ಪರಿಶೀಲನೆಗೆ ಅನುಕೂಲವಾಗಲಿದೆ.

ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 10.15ಕ್ಕೆ ಪ್ರಶ್ನೆ ಪತ್ರಿಕೆ ವಿತರಿಸಲಾಗುತ್ತಿದೆ. 15 ನಿಮಿಷ ಕಾಲ ಓದಿಕೊಳ್ಳಲು ಸಮಯ ಇರುತ್ತದೆ.
****
ಪಠ್ಯ ಕಡಿತ, ಹಾಜರಾತಿ ಕಡ್ಡಾಯವಲ್ಲ

ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಕಾಲೇಜುಗಳು ಆರಂಭವಾಗಿದ್ದರಿಂದ ಶೇ 30ರಷ್ಟು ಪಠ್ಯ ಕಡಿತಗೊಳಿಸಲಾಗಿದೆ. ಅಲ್ಲದೇ ಹಾಜರಾತಿಯೂ ಕಡ್ಡಾಯವಾಗಿಲ್ಲ. ಹಾಜರಾತಿ ಇಲ್ಲ ಎಂದು ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್‌ ನಿರಾಕರಿಸುವಂತಿಲ್ಲ. ಒಂದು ವೇಳೆ ಇಂಥ ಘಟನೆಗಳು ಕಂಡು ಬಂದರೆ ಪರಿಶೀಲಿಸಲಾಗುವುದು.

ಕೋವಿಡ್‌ ಕಾರಣ ಪರೀಕ್ಷೆ ಇರುವುದಿಲ್ಲ ಎಂದೇ ಅನೇಕ ವಿದ್ಯಾರ್ಥಿಗಳು ಭಾವಿಸಿದ್ದಾರೆ. ಆದರೆ, ಕಳೆದ ಬಾರಿ ಕೋವಿಡ್‌ ಪ್ರಕರಣಗಳು ಹೆಚ್ಚಿದ್ದರಿಂದ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಲಾಗಿತ್ತು. ಈ ಬಾರಿ ಯಥಾರೀತಿ ಪರೀಕ್ಷೆಗಳು ನಡೆಯಲಿವೆ. ಅಲ್ಲದೇ ಯಾವುದೇ ನಕಲಿಗೆ ಅವಕಾಶವಿಲ್ಲ.
***
ಕಾಲೇಜುಗಳ ವಿವರ

ಸರ್ಕಾರಿ ಕಾಲೇಜು;23
ಅನುದಾನ ಸಹಿತ;06
ಅನುದಾನ ರಹಿತ ಕಾಲೇಜು;66
ಒಟ್ಟು;95

ಪರೀಕ್ಷಾ ಕೇಂದ್ರಗಳ ವಿವರ

ಯಾದಗಿರಿ;5
ಶಹಾಪುರ;4
ಸುರಪುರ;5
ಗುರುಮಠಕಲ್‌;2
ಹುಣಸಗಿ;1
ಒಟ್ಟು;17

***

ಫೋನ್‌ ಇನ್‌ ನಿರ್ವಹಣೆ:
ಬಿ.ಜಿ.ಪ್ರವೀಣಕುಮಾರ, ರಾಜಕುಮಾರ ನಳ್ಳಿಕರ, ಎಂ.ಪಿ.ಚಪೆಟ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT