ಬುಧವಾರ, ಮೇ 18, 2022
23 °C
ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಶರಣಮ್ಮ ಹೇಳಿಕೆ

ಯಾದಗಿರಿ | ಸರ್ಕಾರದ ಸಾಧನೆ ಮನೆ ಮನೆಗೆ ತಲುಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ಮನೆ ಮನೆಗೆ ತಲುಪಿಸಬೇಕು. ಪ್ರಧಾನಿ ಮೋದಿ ಅವರ ಕಾಂಗ್ರೆಸ್ ಮುಕ್ತ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಬೇಕು’ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಹಾಗೂ ಜಿಲ್ಲಾ ಉಸ್ತುವಾರಿ ಶರಣಮ್ಮ ಕಾಮರೆಡ್ಡಿ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.

‘6 ದಶಕ ದೇಶವನ್ನಾಳಿದ ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣ ಮಾಡುತ್ತ ಜನರಿಗೆ ಮೋಸ ಮಾಡಿದೆ. ರಾಜ್ಯದಲ್ಲಿ ಮತ್ತು ದೇಶದಲ್ಲಿ ವಿರೋಧ ಪಕ್ಷದ ಕೆಲಸ ನಿರ್ವಹಿಸುವಲ್ಲಿ ವಿಫಲವಾಗಿದೆ’ ಎಂದು ದೂರಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ವೀಣಾ ಮೋದಿ ಮಾತನಾಡಿ, ‘ಕೇಂದ್ರ ಸರ್ಕಾರ ಆತ್ಮನಿರ್ಭರ, ಕಿಸಾನ ಸಮ್ಮಾನ್, ಆರೋಗ್ಯ ಭಾಗ್ಯ, ಆಯುಷ್ಮಾನ್‌ ಭಾರತ, ಪೋಷಣ ಅಭಿಯಾನ, ಗರೀಬ್ ಕಲ್ಯಾಣ, ಪ್ರಧಾನ ಮಂತ್ರಿ ಆವಾಸ್ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ದಲಿತ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರು, ಕಾರ್ಮಿಕರು ಹಾಗೂ ಕೃಷಿಕರಿಗೆ ವಿಶೇಷ ಸೌಲಭ್ಯಗಳನ್ನು ನೀಡಿದೆ’ ಎಂದು ತಿಳಿಸಿದರು.

‘ಇದು ಚುನಾವಣೆ ವರ್ಷ ಆಗಿರುವುದರಿಂದ ಕಾರ್ಯಕರ್ತೆಯರು ಜಾಗ್ರತೆಯಿಂದ ಹೆಜ್ಜೆ ಇಡಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವುದರೊಂದಿಗೆ ರಾಜೂಗೌಡರನ್ನು ಮತ್ತೊಮ್ಮೆ ಸುರಪುರ ಶಾಸಕರನ್ನಾಗಿ ಮಾಡಲು ಮಹಿಳೆಯರು ಶಕ್ತಿ ಮೀರಿ ಕೆಲಸ ಮಾಡಬೇಕು’ ಎಂದು ತಿಳಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷೆ ಶಾರದಾ ಬೇವಿನಾಳ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ ಪ್ರಮುಖರಾದ ಸುರೇಖಾ ಕುಂಬಾರ, ಸ್ನೇಹಾ ರಸಾಳಕರ್, ಮಂಜುಳಾ ಕಟ್ಟಿಮನಿ, ಸುಮಂಗಲಾ ಪೀರಾಪುರ, ಮಲ್ಲಮ್ಮ ಹೊಸಪೇಟ, ಲಲಿತಾ ಅನಪುರ, ನಿರ್ಮಲಾ ಅವಂಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.