ಹೊಟೇಲ್ ಉದ್ಯಮಕ್ಕೆ ಕವಿದ ಮಂಕು

7
ಜಿಎಸ್‌ಟಿ ವ್ಯಾಪ್ತಿಗೆ ಒಳಪಡದೆ ಲಾಭದಾಯಕವಾಗಿರುವ ರಸ್ತೆಬದಿಯ ಹೊಟೇಲ್ ಉದ್ಯಮ

ಹೊಟೇಲ್ ಉದ್ಯಮಕ್ಕೆ ಕವಿದ ಮಂಕು

Published:
Updated:
Deccan Herald

ಯಾದಗಿರಿ: ‘ಟಿಫಿನ್, ಊಟ, ಟೀ, ಕಾಫೀ ದರದಲ್ಲಿ ವ್ಯತ್ಯಾಸ ಆಗಿಲ್ಲ. ಆದರೆ, ಜಿಎಸ್‌ಟಿ ಜಾರಿಗೊಂಡ ಮೇಲೆ ನಾವು ಹೆಚ್ಚಾಗಿ ತೆರಿಗೆ ಕಟ್ಟುವಂತಾಗಿದೆ. ಈ ಹೊಸ ತೆರಿಗೆ ವ್ಯಾಪ್ತಿಗೆ ಒಳಪಟ್ಟ ನಾವು ಹಳೆಯ ದರದಲ್ಲೇ ಉದ್ಯಮ ನಿರ್ವಹಿಸುತ್ತಿದ್ದೇವೆ. ಆದರೆ, ರಸ್ತೆಬದಿಯ ವ್ಯಾಪಾರಿಗಳು ಯಾವುದೇ ತೆರಿಗೆ ಇಲ್ಲದೇ ಹೊಟೇಲ್‌ ಉದ್ಯಮವನ್ನು ಸರಳ ಮತ್ತು ಲಾಭದಾಯಕವಾಗಿಸಿಕೊಂಡಿದ್ದಾರೆ. ಇದರಿಂದ ಬೃಹತ್‌ ಹೊಟೇಲ್ ಉದ್ಯಮ ಮಂಕಾಗಿದೆ’ ಎಂಬುದಾಗಿ ನಗರದಲ್ಲಿನ ಹೊಟೇಲ್‌ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ನಗರ ವ್ಯಾಪ್ತಿಯಲ್ಲಿ 12 ನೋಂದಾಯಿತ ಸಸ್ಯಾಹಾರಿ ಹೊಟೇಲ್‌ಗಳಿವೆ. ತಾರಾ ಹೊಟೇಲ್‌ಗಳು ಒಂದೂ ಇಲ್ಲ. ಮಾಂಸಾಹಾರಿ ಹೊಟೇಲ್‌ಗಳು, ಸಣ್ಣ ದರ್ಶಿನಿಗಳು, ರೆಸ್ಟೋರಂಟ್‌ಗಳನ್ನು ಸೇರಿಸಿದರೆ ಹೋಟೆಲ್‌ಗಳ ಸಂಖ್ಯೆ 30 ದಾಟುತ್ತವೆ.

‘ವಿವಿಧ ಇಲಾಖೆಗಳಿಂದ ಪರವಾನಗಿ ಪಡೆದು ಸಾಕಷ್ಟು ಬಂಡವಾಳ ಹಾಕಿ ವ್ಯವಸ್ಥಿತವಾಗಿ ಹೊಟೇಲ್‌ ನಡೆಸುತ್ತೇವೆ. ಮೊದಲು ಜಿಎಸ್‌ಟಿ ಜಾರಿಗೊಂಡಾಗ ಶೇ 18ರಷ್ಟು ತೆರಿಗೆ ವಿಧಿಸಲಾಗಿತ್ತು. ತದನಂತರ ಶೇ 5ಕ್ಕೆ ಕಡಿತಗೊಳಿಸಿದ ನಂತರ ವ್ಯಾಪಾರ ಸುಧಾರಿಸಿದೆ. ಬೃಹತ್‌ ಹೊಟೇಲ್‌ ಉದ್ಯಮಿಗಳಿಗೆ ರಸ್ತೆ ಮತ್ತು ಬೀದಿ ಬದಿಯಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೆ ರಾಜಾರೋಷವಾಗಿ ವ್ಯಾಪಾರ ನಡೆಸುವವರೇ ದೊಡ್ಡ ಸವಾಲಾಗಿದ್ದಾರೆ’ ಎಂದು ನಗರದ ಎನ್‌ವಿಎಂ ಹೊಟೇಲ್‌ ಮಾಲೀಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದ್ಯುತ್‌–ನೀರಿನ ಶುಲ್ಕ, ಕಟ್ಟಡ ಬಾಡಿಗೆ, ಕಾರ್ಮಿಕರ ವೇತನ ನೀಡಿ ಹೊಟೇಲ್‌ ನಡೆಸುತ್ತೇವೆ. ಬಂದ ಗ್ರಾಹಕರಿಗೆ ಕೂರಲು ಆಸನ, ನೀರು ಕೊಟ್ಟು ಫ್ಯಾನ್‌ ಹಾಕಿ ಉಪಚರಿಸುತ್ತೇವೆ. ಗುಣಮಟ್ಟದ ಆಹಾರ ಪೂರೈಸುತ್ತೇವೆ. ಇದು ಯಾವುದೂ ಇಲ್ಲದೆ ರಸ್ತೆ ಬದಿಯಲ್ಲಿ ₹5ಕ್ಕೆ ಇಡ್ಲಿ ಮಾರುವವರು, ಗಿರ್‌ಮಿಟ್‌, ಮಿರ್ಚಿ ಬಜಿ ಅಂಗಡಿ ನಡೆಸುವರು ಸಾವಿರಾರು ರೂಪಾಯಿ ಲಾಭ ಮಾಡಿಕೊಳ್ಳುತ್ತಾರೆ. ಅವರಿಂದ ಹೋಟೆಲ್‌ ನಡೆಸುವವರು ಅನಾರೋಗ್ಯಕರ ಸ್ಪರ್ಧೆ ಎದುರಿಸುವಂತಾಗಿದೆ’ ಎಂಬುದಾಗಿ ಅನ್ಸರ್‌ ಫ್ಯಾಮಿಲಿ ರೆಸ್ಟೋರಂಟ್ ಮಾಲೀಕ ಅನ್ಸರುದ್ದೀನ್ ಹೇಳುತ್ತಾರೆ.

‘ಹೊಟೇಲ್‌ ಉದ್ಯಮ ಲಾಭದಾಯಕವಾಗಬೇಕಾದರೆ ಜಿಲ್ಲೆ ಪ್ರವಾಸಿ ತಾಣವಾಗಿರಬೇಕು. ಇಲ್ಲವೇ ಉತ್ತಮ ವಾಣಿಜ್ಯ ಕೇಂದ್ರವಾಗಿರಬೇಕು. ಯಾದಗಿರಿ ಈ ಎರಡೂ ಪಟ್ಟಿಯಲ್ಲಿ ಇಲ್ಲ. ಸಾಧಾರಣ ಜಿಲ್ಲಾಕೇಂದ್ರದಲ್ಲಿ ಬೃಹತ್‌ ಹೊಟೇಲ್‌ ಉದ್ಯಮ ಲಾಭದಾಯವಾಗಿಸುವುದು ಕಷ್ಟ. ಜಿಎಸ್‌ಟಿ ಜಾರಿಗೊಂಡ ಮೇಲೆ ಮತ್ತಷ್ಟೂ ಕಷ್ಟವಾಗಿದೆ’ ಎಂಬುದಾಗಿ ಅನಿಸಿಕೆ ವ್ಯಕ್ತಪಡಿಸಿದರು.

ಜಿಲ್ಲಾಕೇಂದ್ರದಲ್ಲಿ ಗ್ರಾಮಾಂತರ ಪ್ರದೇಶಗಳಿಂದ ಬರುವ ಜನರೇ ಹೆಚ್ಚು. ಇವರು ಬೃಹತ್‌ ಹೊಟೇಲ್‌ಗಳ ಗ್ರಾಹಕರಾಗಲು ಇಷ್ಟಪಡುವುದಿಲ್ಲ. ಬೀದಿಬದಿಯಲ್ಲೇ ಇವರು ಗ್ರಾಹಕರಾಗುವುದರಿಂದ ಬೀದಿಬದಿಯಲ್ಲಿನ ಹೊಟೇಲ್ ಉದ್ಯಮ ಲಾಭದಾಯಕವಾಗಿದೆ. ಆದರೆ, ಎಲ್ಲ ರೀತಿಯಿಂದಲೂ ತೆರಿಗೆ ಪಾವತಿಸುವ ಬೃಹತ್‌ ಹೊಟೇಲ್‌ಗಳು ಜಿಲ್ಲೆಯಲ್ಲಿ ನೆಲಕಚ್ಚುತ್ತಿವೆ’ ಎನ್ನುತ್ತಾರೆ ವೀರಭದ್ರೇಶ್ವರ ಖಾನಾವಳಿ ಮಾಲೀಕ ಬಾಲಪ್ಪ.

ಇತ್ತೀಚಿನ ವರ್ಷಗಳಲ್ಲಿ ಮಳೆ ಕೊರತೆಯಿಂದ ಗ್ರಾಮೀಣ ಜನರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಂದ ಆಗುತ್ತಿದ್ದ ವ್ಯಾಪಾರವೂ ಕಡಿಮೆಯಾಗಿದೆ ಎಂಬುದಾಗಿ ಅವರು ಬೇಸರ ವ್ಯಕ್ತಪಡಿಸುತ್ತಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !