ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್: ಮೈಮರೆತರೆ ತಪ್ಪದು ಸಂಕಷ್ಟ

Last Updated 1 ಏಪ್ರಿಲ್ 2022, 7:09 IST
ಅಕ್ಷರ ಗಾತ್ರ

ಗುರುಮಠಕಲ್: ಪಟ್ಟಣದಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಬಾಧಿಸುತ್ತಿಲ್ಲ. ಆದರೆ, ಈಗ ಬೇಸಿಗೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಬಹುದು. ಸಮಸ್ಯೆಯೇ ಇಲ್ಲ ಎಂದು ಮೈಮರೆತರೆ ಬೇಸಿಗೆಯ ಅವಧಿಯಲ್ಲಿ ಸಂಕಷ್ಟ ತಪ್ಪುವುದಿಲ್ಲ. ಆದ್ದರಿಂದ ಸಂಬಂಧಿತರು ನೀರಿನ ಸಮಸ್ಯೆ ತಲೆದೂರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವುದು ಪಟ್ಟಣದ ನಿವಾಸಿಗಳ ಅಭಿಪ್ರಾಯವಾಗಿದೆ.

ಪಟ್ಟಣದ 23 ವಾರ್ಡ್‌ಗಳಲ್ಲಿ ದಿನಕ್ಕೆ 7 ವಾರ್ಡ್‌ಗಳಂತೆ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದ ಮಲ್ಲಯ್ಯಕಟ್ಟಾ ಬಡಾವಣೆ, ಮರಾಠಾ ಬಡಾವಣೆ ಪ್ರದೇಶಗಳಲ್ಲಿ ಬಳಕೆಯ ನೀರು ವಿದ್ಯುತ್ ಇದ್ದಾಗೆಲ್ಲ ಸಿಗುತ್ತದೆ. ಆದರೆ, ಕೊಳವೆ ಬಾವಿಗಳಲ್ಲಿನ ನೀರು ರುಚಿಯಿಲ್ಲದ್ದರಿಂದ ಕುಡಿಯಲು ಬಾರದು. ಕುಡಿಯುವ ನೀರಿಗಾಗಿ 3 ದಿನಕ್ಕೊಮ್ಮೆ ಬರುವ ನಳದ ನೀರಿಗೆ ಕಾಯಬೇಕು ಎನ್ನುವುದು ಅಲ್ಲಿನ ನಿವಾಸಿಗಳ ಹೇಳಿಕೆ.

ಪಟ್ಟಣದಲ್ಲಿ ವಿವಿಧ ಬಡಾವಣೆಗಳ ಒಟ್ಟು 129 ಎಂಡಬ್ಲ್ಯುಎಸ್ (ಮಿನಿ ವಾಟರ್ ಸಪ್ಲೈ) ಕೊಳವೆಬಾವಿಗಳಲ್ಲಿ 107 ಸುಸ್ಥಿತಿಯಲ್ಲಿವೆ. 22ರಲ್ಲಿ ನೀರಿನ ಲಭ್ಯತೆ ಕೊರತೆ ಹಾಗೂ ಸುಸ್ಥಿತಿಯಲ್ಲಿಲ್ಲ. 15 ತ್ರಿಫೇಸ್ ವಿದ್ಯುತ್ ಮೋಟಾರ್ ಪಂಪ್, 27 ಕೈ ಪಂಪ್, 11
ಬಾವಿಗಳಲ್ಲಿ ನೀರಿನ ಲಭ್ಯತೆಯಿದೆ. ದಿನಕ್ಕೆ 35 ಲಕ್ಷ ಲೀಟರ್ ಸಿಕ್ಕರೆ ವಾರದ ಏಳೂ ದಿನವೂ ಎಲ್ಲಾ 23 ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಬಹುದು.

ಸದ್ಯ ದಿನಕ್ಕೆ ಭೀಮಾ ನದಿಯಿಂದ 20 ಲಕ್ಷ ಲೀಟರ್‌ ನೀರು ಸಿಗುತ್ತಿದ್ದು, 10 ಲಕ್ಷ ಲೀ ಹಾಗೂ 5 ಲಕ್ಷ ಲೀಟರ್‌ ಸಂಗ್ರಹ ಸಾಮಾರ್ಥ್ಯದ ತಲಾ ಎರಡು ಒಎಚ್‌ಟಿ ತೊಟ್ಟಿಗಳಲ್ಲಿ ಸಂಗ್ರಹಿಸಿ ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಪಟ್ಟಣದಲ್ಲಿ ವಾರ್ಡ್‌ಗೆ 5 ರಂತೆ ಎಂಡಬ್ಲ್ಯೂಎಸ್ ಲಭ್ಯವಿದ್ದರಿಂದ ನೀರಿನ ಸಮಸ್ಯೆ ಅಷ್ಟೇನು ಬಾಧಿಸುತ್ತಿಲ್ಲ ಎಂದು ಪುರಸಭೆ ಸಿಬ್ಬಂದಿ ಮಾಹಿತಿ ನೀಡಿದರು.

ಕಳೆದ ಎರಡು ವರ್ಷಗಳ ಹಿಂದೆ ನೀರಿನ ಸಮಸ್ಯೆ ತೀರಾ ಹೆಚ್ಚಿನದು. ಮನೆಗೊಬ್ಬರು ನೀರು ಸಂಗ್ರಹಕ್ಕೆ ಮೀಸಲಿರುವ ಸ್ಥಿತಿ ಬಂದದ್ದೂ ಇದೆ. ಈಗಲೂ ಸಮಸ್ಯೆಯೇ ಇಲ್ಲ ಎನ್ನುವಂತಿಲ್ಲ. 1 ಎಚ್‌ಪಿ ಕೊಳವೆಬಾವಿ, ಎಂಡಬ್ಲ್ಯೂಎಸ್, ಕೈ ಪಂಪ್ ದುರಸ್ತಿಗೊಳಿಸಿದ್ದು, ಉತ್ತಮ ಮಳೆಗಾಲದಿಂದ ನೀರು ಬತ್ತದಿರುವುದರಿಂದ ಸಮಸ್ಯೆಯಿಲ್ಲ. ಆದರೆ, ನಡು ಬೇಸಿಗೆಯ ವೇಳೆಗೆ ಸಮಸ್ಯೆ ಉಲ್ಬಣಿಸದಂತೆ ಸೂಕ್ತ ತಯಾರಿ ಮಾಡಕೊಳ್ಳಿ ಎಂದು ಸ್ಥಳೀಯರು ಕೋರುತ್ತಾರೆ.

*ಮೊದಲು ನೀರಿಗಾಗಿ ಪರದಾಡುವಂತಿತ್ತು. ಆದರೆ, ಈಗ ನೀರಿನ ಸಮಸ್ಯೆ ಬಾಧಿಸುತ್ತಿಲ್ಲ. ಮುಂದೆಯೂ ಸರಬರಾಜು ವ್ಯವಸ್ಥೆ ಕನಿಷ್ಠ ಹೀಗೆ ಮುಂದುವರೆಸಿದರೆ ಚೆನ್ನ
- ಬಸವರಾಜ ದೊಡ್ಮನಿ, ಜಂಗಿಡಿಗೇರಿ ನಿವಾಸಿ

*ಮಲ್ಲಯ್ಯಕಟ್ಟಾ ವ್ಯಾಪ್ತಿಯಲ್ಲಿ ಬೋರ್‌ವೇಲ್‌ಗಳಲ್ಲಿ ನೀರು ಕುಡಿಯಲು ರುಚಿಯಿಲ್ಲ. ಕುಡಿಯುವ ನೀರಿಗಾಗಿ ಮೂರು ದಿನಕ್ಕೊಮ್ಮೆ ಬರುವ ನಳ ನೀರನ್ನು ಸಂಗ್ರಹಿಸಬೇಕು
- ಸಂಜೀವಕುಮಾರ ಅಲೆಗಾರ, ಬಡಾವಣೆ ನಿವಾಸಿ

*ಈಗ ಬೇಸಿಗೆ ಆರಂಭವಾದ್ದರಿಂದ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಮಸ್ಯೆ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡರೆ ಚೆನ್ನ
- ರವೀಂದ್ರರೆಡ್ಡಿ ಪೋತುಲ್, ಮುಖಂಡ

*ಪಟ್ಟಣದಲ್ಲಿ ನೀರಿನ ಸಮಸ್ಯೆ ಕಾಣದಂತೆ ಈಗಾಗಲೇ ಅವಶ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆ ಉಲ್ಬಣವಾಗದಂತೆ ಎಚ್ಚರ ವಹಿಸಲಾಗುವುದು
- ಪಾಪಣ್ಣ ಮನ್ನೆ, ಪುರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT